ನೆಲ್ಯಾಡಿ ಮಧ್ಯಪೇಟೆಯಲ್ಲಿ ಡಿಸೆಂಬರ್ 17ರ ಸಂಜೆ ಸುಮಾರು 5 ಗಂಟೆ ವೇಳೆಗೆ ರಸ್ತೆ ಅಪಘಾತ ಸಂಭವಿಸಿದೆ. ಖಾಸಗಿ ಅಂಗಡಿಗೆ ಈಚರ್ ಲಾರಿ ನುಗ್ಗಿದ ಪರಿಣಾಮ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಈಚರ್ ಲಾರಿಯಿಂದ ದನದ ಮೇವುಗಳನ್ನು ಅನ್‌ಲೋಡ್ ಮಾಡುತ್ತಿರುವ ಸಂದರ್ಭದಲ್ಲೇ ಹಿಂಬದಿಯಿಂದ ಬಂದ ಇನ್ನೊಂದು ದೊಡ್ಡ ಲಾರಿ ಈಚರ್ ಲಾರಿಗೆ ಗುದ್ದಿದೆ. ರಭಸದಿಂದ ಎಳೆದುಕೊಂಡು ಮುಂದೆ ಹೋದ ಪರಿಣಾಮ ಈಚರ್ ಲಾರಿ ನಿಯಂತ್ರಣ ತಪ್ಪಿ ಖಾಸಗಿ ಅಂಗಡಿಗೆ ನುಗ್ಗಿ ಅಪಘಾತ ಸಂಭವಿಸಿದೆ.
ಸದ್ಯದ ಮಾಹಿತಿಯ ಪ್ರಕಾರ ಈ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಆದರೆ ಲಾರಿ ಹಾಗೂ ಅಂಗಡಿಗೆ ಸಾಕಷ್ಟು ಹಾನಿಯಾಗಿದೆ.
ಘಟನೆ ನಡೆದ ಸ್ಥಳದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದ್ದು, ಎಲ್ಲ ವಾಹನಗಳು ಸರ್ವಿಸ್ ರಸ್ತೆಯನ್ನೇ ಅವಲಂಬಿಸಿದ್ದವು. ಇದರಿಂದಾಗಿ ಅಪಘಾತದ ಹಿನ್ನೆಲೆಯಲ್ಲಿ ನೆಲ್ಯಾಡಿ ಬೇಟೆ ಸರ್ವಿಸ್ ರಸ್ತೆ ಸುಮಾರು ಒಂದು ಗಂಟೆಗಳ ಕಾಲ ಸಂಪೂರ್ಣವಾಗಿ ಬ್ಲಾಕ್ ಆಗಿ ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು.
ಘಟನೆಯ ಮಾಹಿತಿ ಪಡೆದ ನೆಲ್ಯಾಡಿ ಹೊರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ವಾಹನಗಳನ್ನು ತೆರವುಗೊಳಿಸಿ ಸಂಚಾರವನ್ನು ಸುಗಮಗೊಳಿಸಲು ಶ್ರಮವಹಿಸಿದರು.
Post a Comment