ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಾನ್ಯ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ದಕ್ಷ ಠಾಣಾಧಿಕಾರಿ ಕಾರ್ತಿಕ್ ಎಸ್ ಅವರ ನೇತೃತ್ವದ ತಂಡ ತಕ್ಷಣವೇ ತನಿಖೆ ಕೈಗೊಂಡು, ಸಂಶಯಾಸ್ಪದವಾಗಿ ಕಾಣಿಸಿಕೊಂಡ ಸ್ಕೂಟರ್‌ನಲ್ಲಿದ್ದ ಇಬ್ಬರು ಯುವಕರನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದೆ.
ತನಿಖೆಯ ವೇಳೆ ಅವರುಗಳು ಪುತ್ತೂರು ಮೂಲದ ಪಾನಸೋನಿಕ್ ಕಂಪನಿಯ ಏಜೆಂಟ್‌ಗಳಾಗಿದ್ದು, ವಿವಿಧ ಗ್ರಾಮಗಳಲ್ಲಿ ಹೊಸ ಟಿವಿ ಅಳವಡಿಕೆ ಮತ್ತು ರಿಪೇರಿ ಕಾರ್ಯಕ್ಕಾಗಿ ಸಂಚರಿಸುತ್ತಿದ್ದುದಾಗಿ ತಿಳಿದುಬಂದಿದೆ. ಪುತ್ತೂರು ಸಮೀಪದ ಕಲ್ಮಕಾರು ಗ್ರಾಮದ ಮನೆಯೊಂದರಲ್ಲಿ ಟಿವಿ ರಿಪೇರಿ ಕಾರ್ಯ ಮುಗಿಸಿ ಹಿಂತಿರುಗುವ ವೇಳೆ, ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಹಾಗೂ ದಾರಿ ತಿಳಿಯದ ಕಾರಣ ಕೊಲ್ಲಮೊಗ್ರು ಗ್ರಾಮದಲ್ಲಿ ಶಾಲಾ ಮಕ್ಕಳನ್ನು ರಸ್ತೆ ಬಗ್ಗೆ ವಿಚಾರಿಸಿರುವುದು ಸ್ಪಷ್ಟವಾಗಿದೆ.
ಮಕ್ಕಳಲ್ಲಿ ವಿಳಾಸ ಕೇಳಿದ ಸಂದರ್ಭ, ಅಪರಿಚಿತರನ್ನು ಕಂಡು ಭಯಭೀತರಾದ ಮಕ್ಕಳು ಈ ವಿಷಯ ಗ್ರಾಮದಲ್ಲಿ ಹರಡಿದ ಪರಿಣಾಮ ಅಪಹರಣದ ವದಂತಿಗೆ ಕಾರಣವಾಗಿತ್ತು. ತನಿಖೆಯಲ್ಲಿ ಯಾವುದೇ ರೀತಿಯ ಅಸಭ್ಯ ವರ್ತನೆ ಅಥವಾ ಅಪರಾಧ ಉದ್ದೇಶವಿಲ್ಲ ಎಂಬುದು ಸ್ಪಷ್ಟವಾಗಿದೆ.
ಹೆಲ್ಮೆಟ್ ಕಡ್ಡಾಯ ನಿಯಮದ ಹಿನ್ನೆಲೆಯಲ್ಲಿ ಮುಂಭಾಗದ ಸವಾರ ಹೆಲ್ಮೆಟ್ ಧರಿಸಿದ್ದು, ಹಿಂಬದಿ ಸವಾರನ ಮುಖದಲ್ಲಿ ಮೊಡವೆಗಳಿದ್ದ ಕಾರಣ ಮುಖ ಮುಚ್ಚಿಕೊಂಡಿರುವಂತೆ ಕಾಣಿಸಿಕೊಂಡಿದ್ದು, ಇದೂ ಸಂಶಯಕ್ಕೆ ಕಾರಣವಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೈಕ್ ನಲ್ಲಿ ಬಂದಿದ್ದ ಯುವಕರನ್ನು ಠಾಣೆಗೆ ಕರೆಸಿ, ಶಾಲಾ ಮುಖ್ಯ ಶಿಕ್ಷಕಿ, SDMC ಅಧ್ಯಕ್ಷರು ಹಾಗೂ ಸದಸ್ಯರ ಸಮ್ಮುಖದಲ್ಲಿ ಸಂಪೂರ್ಣ ಸತ್ಯಾಂಶವನ್ನು ಬಯಲಿಗೆಳೆಯಲಾಗಿದೆ. ಈ ಮೂಲಕ ಗ್ರಾಮದಲ್ಲಿ ಹರಡಿದ್ದ ಎಲ್ಲಾ ರೀತಿಯ ಊಹಾಪೋಹಗಳಿಗೆ ತೆರೆ ಎಳೆಯಲಾಗಿದೆ.
ಆರೋಪ ಮಾಡುವ ಮೊದಲು ತಾಳ್ಮೆ ಮತ್ತು ಪರಿಶೀಲನೆ ಅತ್ಯಂತ ಮುಖ್ಯ ಎಂಬ ಸಂದೇಶವನ್ನು ಠಾಣಾಧಿಕಾರಿ ಕಾರ್ತಿಕ್ ಎಸ್ ಅವರು ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ನೀಡಿದ್ದಾರೆ.
ಜನಸ್ನೇಹಿ ಪೊಲೀಸ್ ಆಗಿ ಗುರುತಿಸಿಕೊಂಡಿರುವ ಸುಬ್ರಹ್ಮಣ್ಯ ಠಾಣಾಧಿಕಾರಿ ಕಾರ್ತಿಕ್ ಎಸ್ ಹಾಗೂ ಅವರ ತಂಡದ ಸಮಯೋಚಿತ ಮತ್ತು ಜವಾಬ್ದಾರಿಯುತ ಕಾರ್ಯಾಚರಣೆಯಿಂದ ಮಕ್ಕಳು, ಪೋಷಕರು ಹಾಗೂ ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
Post a Comment