ಆದಿ ಸುಬ್ರಹ್ಮಣ್ಯ: ಅನಧಿಕೃತ ಅಂಗಡಿ ತೆರವುಗೊಳಿಸಲು ಗ್ರಾಮ ಪಂಚಾಯತ್ ನೋಟಿಸ್!

ಕುಕ್ಕೆ ಸುಬ್ರಹ್ಮಣ್ಯ:ಕುಕ್ಕೆ ಸುಬ್ರಹ್ಮಣ್ಯ ಗ್ರಾಮದ ಆದಿ ಸುಬ್ರಹ್ಮಣ್ಯ ಪ್ರದೇಶದ ಸರ್ವೆ ನಂಬರ್ 85/5ರ ಸ್ವಾಧೀನದ ಜಾಗದಲ್ಲಿ ಭೂ ಪರಿವರ್ತನೆ ಗೊಳಿಸದೆ ಹಾಗೂ ಈ-ಖಾತೆ ಪಡೆಯದೆ ವಾಣಿಜ್ಯ ಉದ್ದೇಶದ ಕಟ್ಟಡಗಳು ಕಾರ್ಯನಿರ್ವಹಿಸುತ್ತಿವೆ ಎಂಬ ಆರೋಪದ ಕುರಿತು ಸುಬ್ರಹ್ಮಣ್ಯ ಗ್ರಾಮ ಪಂಚಾಯತಿಗೆ ದೂರು ದಾಖಲಾಗಿತ್ತು.
ಈ ಹಿನ್ನೆಲೆ, ಸದರಿ ಜಾಗದಲ್ಲಿನ ಅನಧಿಕೃತ ಕಟ್ಟಡಗಳಲ್ಲಿ ಯಾವುದೇ ರೀತಿಯ ವ್ಯಾಪಾರ ವಹಿವಾಟು ನಡೆಸದಂತೆ ಸೂಚಿಸಿ, ಜಾಗದ ಮಾಲಕರಾದ ಎಂ.ವಿ. ಮಂಜುನಾಥ ಹಾಗೂ ಎಂ.ವಿ. ಶ್ರೀವತ್ಸ ಬಳ್ಪ ಅವರಿಗೆ ದಿನಾಂಕ 08-01-2026ರಂದು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನೋಟಿಸ್ ಜಾರಿಗೊಳಿಸಿದ್ದಾರೆ.
ಈ ವಿಷಯವನ್ನು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗಿದ್ದು, ಸದರಿ ಜಾಗವು ಈ ಹಿಂದೆ ನ್ಯಾಯಾಲಯದ ವಿಚಾರಣೆಯಲ್ಲಿದ್ದು, ಪ್ರಸ್ತುತ ನ್ಯಾಯಾಲಯದ ಆದೇಶದಂತೆ ಜಾಗದ ಪರಿಪೂರ್ಣ ಮಾಲಕತ್ವ ಎಂ.ವಿ. ಮಂಜುನಾಥ ಹಾಗೂ ಎಂ.ವಿ. ಶ್ರೀವತ್ಸ ಬಳ್ಪ ಅವರಿಗೆ ಲಭಿಸಿದೆ ಎಂಬ ಮಾಹಿತಿ ಸಭೆಯಲ್ಲಿ ತಿಳಿದುಬಂದಿದೆ.
ಆದಾಗ್ಯೂ, ಜಾಗದಲ್ಲಿನ ನಿವೇಶನಗಳಿಗೆ ನಿಯಮಾನುಸಾರ ಭೂ ಪರಿವರ್ತನೆ ಪಡೆದು, ಈ-ಖಾತೆ ನೋಂದಣಿ ಮಾಡಿಕೊಂಡು, ಸುಬ್ರಹ್ಮಣ್ಯ ಗ್ರಾಮ ಪಂಚಾಯತಿಯಿಂದ ವ್ಯಾಪಾರ ಪರವಾನಿಗೆ ಪಡೆಯುವವರೆಗೆ ಯಾವುದೇ ವಾಣಿಜ್ಯ ಚಟುವಟಿಕೆ ನಡೆಸಬಾರದು ಎಂದು ಪಂಚಾಯತ್ ಸ್ಪಷ್ಟ ಸೂಚನೆ ನೀಡಿದೆ.
ನೋಟಿಸ್‌ನಲ್ಲಿ ನೀಡಿದ ಸೂಚನೆಗಳನ್ನು ಪಾಲಿಸದಿದ್ದಲ್ಲಿ ಕಾನೂನುಬದ್ಧ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಎಚ್ಚರಿಕೆ ನೀಡಿದೆ.

Post a Comment

أحدث أقدم