ಕುಲಕುಂದದಲ್ಲಿ ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನ – ವಿಚಾರಗೋಷ್ಠಿ, ಪರಿಕರಗಳ ಪ್ರಾತ್ಯಕ್ಷತೆ

ಸುಬ್ರಹ್ಮಣ್ಯ, ಜನವರಿ 19:
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು, ಶ್ರೀ ಬಸವೇಶ್ವರ ಚಾರಿಟೇಬಲ್ ಟ್ರಸ್ಟ್ ಹಾಗೂ ಶ್ರೀ ಬಸವೇಶ್ವರ ದೇವಸ್ಥಾನ ಬಸವನ ಮೂಲ ಕುಲಕುಂದ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಶ್ರೀ ಸುಬ್ರಹ್ಮಣ್ಯ ಮಠ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್, ಪಶು ಆಸ್ಪತ್ರೆ ಸುಬ್ರಹ್ಮಣ್ಯ ಹಾಗೂ ಯೆಣ್ಣೆಕಲ್ಲು, ಐನೆಕೀದು, ಬಳ್ಪ, ಕಾಯುತ್ತಡ್ಕ, ಬೀದಿಗುಡ್ಡೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಜನವರಿ 19 ಸೋಮವಾರ ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನ, ವಿಚಾರಗೋಷ್ಠಿ ಹಾಗೂ ಪಶುಪಾಲನಾ ಪರಿಕರಗಳ ಪ್ರಾತ್ಯಕ್ಷತೆ ಕಾರ್ಯಕ್ರಮ ಶ್ರೀ ಬಸವೇಶ್ವರ ದೇವಸ್ಥಾನ ಬಸವನ ಮೂಲ ಕುಲಕುಂದದಲ್ಲಿ ನಡೆಯಿತು.
ಕಾರ್ಯಕ್ರಮದ ಆರಂಭದಲ್ಲಿ ದೇವಳದ ಪ್ರಧಾನ ಅರ್ಚಕ ಗಣೇಶ ದೀಕ್ಷಿತ್ ಅವರು ಗೋವುಗಳಿಗೆ ಪೂಜೆ ಸಲ್ಲಿಸಿದರು. ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನವನ್ನು ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಭರತ್ ನೆಕ್ರಾಜ ಅವರು ಗೋವುಗಳಿಗೆ ಹೂವಿನ ಹಾರ ಹಾಕುವ ಮೂಲಕ ಉದ್ಘಾಟಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಕಲ್ಲಾಜ ಅಧ್ಯಕ್ಷತೆ ವಹಿಸಿದ್ದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಅವರು ದೀಪ ಪ್ರಜ್ವಲನೆ ಮೂಲಕ ಅಧಿಕೃತ ಉದ್ಘಾಟನೆ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಅರುಣ ಕುಮಾರ್ ಶೆಟ್ಟಿ, ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಉಪ ವ್ಯವಸ್ಥಾಪಕ ಡಾ. ಸತೀಶ್ ರಾವ್ ಡಿ.ಆರ್, ನಿರ್ದೇಶಕ ಭರತ್ ನೆಕ್ರಾಜ, ಬಸವೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಗಿರಿಧರ ಸ್ಕಂದ, ಉಪಾಧ್ಯಕ್ಷ ರವೀಂದ್ರ ಕುಮಾರ ರುದ್ರಪಾದ, ಕಡಬ ಕೆಡಿಪಿ ಸದಸ್ಯ ಶಿವರಾಮ ರೈ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಪವನ್, ಸುಬ್ರಹ್ಮಣ್ಯ ಬ್ಯಾಂಕ್ ಆಫ್ ಬರೋಡ ಶಾಖಾ ವ್ಯವಸ್ಥಾಪಕ ಕೃಷ್ಣಪ್ರಸಾದ್, ಹಾಗೂ ವಿವಿಧ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಚಾರಗೋಷ್ಠಿಯಲ್ಲಿ ಸುಳ್ಯ ಪಶು ಆಸ್ಪತ್ರೆಯ ಆಡಳಿತ ಪಶುವೈದ್ಯಾಧಿಕಾರಿ ಡಾ. ನಿತಿನ್ ಪ್ರಭು ಹಾಗೂ ಕಡಬ ಪಶು ಕಚೇರಿಯ ವಿಸ್ತರಣಾಧಿಕಾರಿ ನಿರಂಜನ್ ಬಿ.ಎಸ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಪಶುಪಾಲನಾ ವಿಧಾನ, ಪೌಷ್ಟಿಕ ಆಹಾರ, ರೋಗ ನಿಯಂತ್ರಣ ಹಾಗೂ ಆಧುನಿಕ ಪರಿಕರಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭ ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನ ಸ್ಪರ್ಧೆಯಲ್ಲಿ ಸುಮಾರು 70 ಕರುಗಳು ಭಾಗವಹಿಸಿದ್ದವು. ಜೆರ್ಸಿ, ಎಚ್‌ಎಫ್ ಮತ್ತು ದೇಶಿ ತಳಿಗಳಲ್ಲಿ 0–4, 5–8 ಮತ್ತು 9–12 ತಿಂಗಳ ವಯೋಮಾನದ ಮೂರು ವಿಭಾಗಗಳಲ್ಲಿ ವಿಜೇತರನ್ನು ಆಯ್ಕೆ ಮಾಡಿ ಬಹುಮಾನ ವಿತರಿಸಲಾಯಿತು. ನಿರ್ಣಾಯಕರಾಗಿ ಡಾ. ಕೇಶವ ಸುಳ್ಳಿ ಮತ್ತು ಡಾ. ಮೇಘಶ್ರೀ ಕಾರ್ಯನಿರ್ವಹಿಸಿದರು. ಭಾಗವಹಿಸಿದ ಎಲ್ಲಾ ಕರುಗಳಿಗೆ ಪ್ರೋತ್ಸಾಹಕ ಬಹುಮಾನವೂ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಪಶುವೈದ್ಯಕೀಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮಲ್ಲಿಕಾ ಸ್ವಾಗತಿಸಿ ವಂದಿಸಿದರು. ಡಾ. ವೆಂಕಟಚಲಪತಿ ಸಹಕರಿಸಿದರು. ನಿವೃತ್ತ ಉಪನ್ಯಾಸಕ ವಿಶ್ವನಾಥ ನಡುತೋಟ ಹಾಗೂ ಪ್ರಗತಿಪರ ಕೃಷಿಕ ಪಟೇಲ್ ಕಿಶೋರ್ ಕುಮಾರ್ ಕೂಜುಗೋಡು ಕಾರ್ಯಕ್ರಮ ನಿರೂಪಿಸಿದರು.

Post a Comment

Previous Post Next Post