ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ಸೇವೆಗಳಲ್ಲಿ ಕಠಿಣವಾದಂತ ಸೇವೆಯೇ ಬೀದಿ ಮಡೆಸ್ನಾನ

ಕುಕ್ಕೆ ಸುಬ್ರಮಣ್ಯ; ಕುಕ್ಕೆ ಸುಬ್ರಹ್ಮಣ್ಯ ಶ್ರೀ ಕ್ಷೇತ್ರ ಪುರಾತನವಾದಂತಹ, ಜಗತ್ಪ್ರಸಿದ್ಧ ಪುಣ್ಯಕ್ಷೇತ್ರ.
ಕುಕ್ಕೆ ಸುಬ್ರಮಣ್ಯ ಶ್ರೀ ಕ್ಷೇತ್ರದಲ್ಲಿ ನಾವು ಜೀವನದಲ್ಲಿ ಮಾಡಿದಂತ ಪಾಪಕರ್ಮಗಳ ಪರಿಹಾರಕ್ಕೆ, ಪ್ರಾಯಶ್ಚಿತಗಳು ನಡೆಯುತ್ತವೆ. 
ದೇವಸ್ಥಾನದಲ್ಲಿ ವಿವಿಧ ಬಗೆಯ ಸೇವೆಗಳು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ. 
ಜ್ಞಾನದಿಂದಲೋ, ಅಜ್ಞಾನದಿಂದಲೋ, ಈ ಜನ್ಮದಲ್ಲಿಯೋ , ಪೂರ್ವ ಜನ್ಮದಲ್ಲಿಯೋ, ಜನ್ಮಜನ್ಮಾಂತರಗಳಲ್ಲಿಯೋ, ಮಾಡಿದಂತ ಸರ್ಪ ಹತ್ಯ ದೋಷ ಪರಿಹಾರ, ಸರ್ಪ ಹಿಂಸಾ ದೋಷ ಪರಿಹಾರ, ವಿವಿಧ ರೀತಿಯಲ್ಲಿ ಸರ್ಪನಿಗೆ, ನಾಗದೇವರಿಗೆ ಹಿಂಸೆ ಮಾಡಿದಂತಹ ಹತ್ಯೆ ಮಾಡಿದಂತ ದೋಷಗಳ ಪರಿಹಾರಕ್ಕೆ, ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಪೂಜೆ, ನಾಗ ಪ್ರತಿಷ್ಠಾಪನೆ, ಎಂಬ ಪ್ರಾಯಶ್ಚಿತ ಕಾರ್ಯಕ್ರಮಗಳು ಕುಕ್ಕೆಯಲ್ಲಿ ನಡೆಯುತ್ತದೆ. 
ಸುಬ್ರಹ್ಮಣ್ಯ ಸ್ವಾಮಿಯ, ನಾಗದೇವರ ಈ ಪುಣ್ಯ ಭೂಮಿಯಿಂದ ಒಂದು ಹಿಡಿ ಮಣ್ಣು ಕೊಂಡು ಹೋದರು ಅದು ಮೃತ್ತಿಕೆ ಪ್ರಾಸದ, ಕುಮಾರಧಾರ ಪವಿತ್ರ ನದಿಯಲ್ಲಿ ತೀರ್ಥ ಸ್ನಾನ ಮಾಡಿದರೆ ಜೀವಮಾನದಲ್ಲಿ ಮಾಡಿದಂತಹ ಪಾಪಕರ್ಮಗಳು ಪರಿಹಾರವಾಗುತ್ತದೆ ಎಂಬ ನಂಬಿಕೆ. 
ಭಗವತ್ಭಕ್ತರ ಈ ಅಚಲವಾದ ನಂಬಿಕೆಗೆ ಸುಬ್ರಹ್ಮಣ್ಯ ಸ್ವಾಮಿ ದೇವರು, ನಾಗ ದೇವರು ಇಷ್ಟಾರ್ಥಗಳನ್ನು ಅನುಗ್ರಹಿಸಿದ್ದಾರೆ.

ಕುಕ್ಕೆಯಲ್ಲಿ ನಡೆಯುವ ಕಠಿಣ ಸೇವೆಗಳಲ್ಲಿ ಒಂದು ಬೀದಿಮಡೆ ಸ್ನಾನ;

ಲಕ್ಷ ದೀಪೋತ್ಸವದಂದು ಶ್ರೀ ದೇವರ ಚಂದ್ರಮಂಡಲ ರಥೋತ್ಸವ ನೆರವೇರಿದ ಬಳಿಕ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಅತ್ಯಂತ ಪ್ರಿಯವಾದ ಸೇವೆ ಬೀದಿ ಮಡೆಸ್ನಾನ ಸೇವೆ ಆರಂಭವಾಗುತ್ತದೆ. ಪ್ರತಿದಿನ ಸೇವೆ ನಡೆಯುತ್ತಿದ್ದು, ಚೌತಿ ಮತ್ತು ಪಂಚಮಿಯ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಈ ಸೇವೆ ಸಮರ್ಪಣೆ ಮಾಡುತ್ತಾರೆ.
ಸ್ವಯಂಸ್ಫೂರ್ತಿಯ ಸೇವೆ: 

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರಿಗೆ ಸಲ್ಲಿಸುವ ವಿಶಿಷ್ಠ ಸೇವೆಯಲ್ಲೊಂದಾದ ಬೀದಿಮಡೆಸ್ನಾನ (ಉರುಳು ಸೇವೆ)ವನ್ನು ಲಕ್ಷ ದೀಪೋತ್ಸವದ ರಥೋತ್ಸವ ಬಳಿಕ ಆರಂಭಿಸಿ, ಚಂಪಾಷಷ್ಠಿ ಮಹಾರಥೋತ್ಸವ ತನಕ ನೆರವೇರಿಸುತ್ತಾರೆ. ಈಗಾಗಲೇ ಅನೇಕ ಮಂದಿ ಭಕ್ತರು ಕುಮಾರಧಾರ ನದಿಯಲ್ಲಿ ಸ್ನಾನ ಮಾಡಿ ಅಲ್ಲಿಂದ ರಾಜರಸ್ತೆ, ತೇರು ಬೀದಿಯಲ್ಲಿ ಉರುಳಿಕೊಂಡು ದೇವಳಕ್ಕೆ ಬಂದು ಉರುಳಿಕೊಂಡೇ ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕಿ ಮೂಡು ಬಾಗಿಲಿನಲ್ಲಿ ಹೊರ ಹೋಗಿ ಎದುರಿನ ದರ್ಪಣ ತೀರ್ಥ ನದಿಯಲ್ಲಿ ಸ್ನಾನ ಮಾಡಿ ಶ್ರೀ ದೇವರ ದರ್ಶನ ಮಾಡಿ ಪ್ರಸಾದ ಸ್ವೀಕರಿಸುತ್ತಾರೆ.
ಈ ಸೇವೆಯನ್ನು ಸ್ವಯಂ ಸ್ಫೂರ್ತಿ ಮತ್ತು ಭಕ್ತಿಯಿಂದ, ನಂಬಿಕೆ ಇಂದ ನೆರವೇರಿಸುತ್ತಾರೆ. ಇದಕ್ಕೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ. ಕುಮಾರಧಾರ ತೀರ್ಥದಲ್ಲಿ ಮಿಂದು ಸುಮಾರು ಮೂರು ಕಿ.ಮಿಗಿಂತಲೂ ಅಧಿಕ ದೂರವನ್ನು ಭಕ್ತರು ಉರುಳುತ್ತಾ ಸುಮಾರು 5-6 ಗಂಟೆ ತೆಗೆದುಕೊಂಡು ಕ್ರಮಿಸಿದರೆ, ಕೆಲವರು 30 ನಿಮಿಷಗಳಿಂದ ಒಂದು ಗಂಟೆ ಅವಧಿಯಲ್ಲಿಯೂ ಕ್ರಮಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಬೀದಿ ಮಡೆಸ್ನಾನ ಮಾಡುವ ಭಕ್ತರ ಸಂಖ್ಯೆ ಅಧಿಕಗೊಂಡಿದೆ.


ವೃತನಿಷ್ಠ ಸೇವೆ:

 ಉರುಳು ಸೇವೆ ಮಾಡುವವರು ಮೊದಲೇ ಅನೇಕ ದಿನಗಳಿಂದ ವೃತವನ್ನು ಕೈಗೊಂಡಿರುತ್ತಾರೆ. ಶ್ರೀ ದೇವರನ್ನು ಆರಾಧಿಸುವ ಕಠಿಣ ಹಾಗೂ ವಿಶಿಷ್ಟ ಸೇವೆ ಇದಾಗಿದ್ದು, ಪುರುಷ, ಮಹಿಳೆ, ಮಕ್ಕಳು ಹಾಗೂ ವೃದ್ದರೂ ಈ ಸೇವೆಯನ್ನು ಮಾಡುತ್ತಾರೆ. ಹೀಗೆ ಉರುಳು ಸೇವೆ ಮಾಡುವವರ ಜತೆಯಲ್ಲಿ ದಾಸಯ್ಯರು ತಮ್ಮ ಶಂಖ ಜಾಗಟೆಯೊಂದಿಗೆ ಗೋವಿಂದಾ ಅನ್ನಿ ಗೋವಿಂದಾ ಎಂದು ದೇವರ ನಾಮ ಸ್ಮರಣೆ ಮಾಡುತ್ತಾ ಸಾಗುತ್ತಾರೆ. 
ಪ್ರತಿವರ್ಷ ಈ ಕಠಿಣವಾದ ಸೇವೆಯನ್ನು ಸಲ್ಲಿಸುವ ಅಸಂಖ್ಯಾತ ಭಕ್ತರೂ ಇದ್ದಾರೆ. ಈ ಸೇವೆಯಿಂದಾಗಿ ಭಕ್ತರ ಸಂಕಷ್ಠಗಳು, ರೋಗರುಜಿನಗಳು ನಿವಾರಣೆಯಾದ ಉದಾಹರಣೆಗಳಿವೆ. ಮುಂಜಾನೆ ಮತ್ತು ಸಂಜೆಯ ಸಮಯದಲ್ಲಿ ಭಕ್ತರು ಈ ಸೇವೆಯನ್ನು ಕುಮಾರಧಾರದಿಂದ ಆರಂಭಿಸುತ್ತಾರೆ. ಕೆಲವರಂತೂ ರಾತ್ರಿಯೂ ಈ ಸೇವೆಯನ್ನು ನೆರವೇರಿಸುತ್ತಾರೆ. ಜಾತಿ, ಮತ, ಲಿಂಗ, ವರ್ಗ, ಪ್ರಾಯ, ಭೇದ ಮರೆತು ದೇವರಿಗೆ ಸಂಪೂರ್ಣ ಶರಣಾಗುವ ಈ ಹರಕೆ ಸೇವೆಗಿಂತ ಮಿಗಿಲಾದ ಸೇವೆ ಇನ್ನೊಂದಿಲ್ಲ ಎಂದು ಬೀದಿ ಮಡೆ ಸ್ನಾನ ಸೇವೆಯ ಮೇಲೆ ನಂಬಿಕೆಯನ್ನು ಇಟ್ಟು ಪ್ರತಿಫಲವನ್ನ ಪಡೆದ ಭಗವದ್ಭಕ್ತರು ಹೇಳುತ್ತಾರೆ.
ಭಗವತ್ಭಕ್ತರನಂಬಿಕೆ ವಿಶ್ವಾಸದಿಂದ ನಡೆಯುವ ಈ ಒಂದು ಕಠಿಣವಾದಂತ ಸೇವೆ ಇಂದಿಗೂ ಕುಕ್ಕೆಯಲ್ಲಿ ನಡೆಯುತ್ತಿದೆ ಸಾವಿರಾರು ಭಗವದ್ಭಕ್ತರು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Post a Comment

أحدث أقدم