ಧೋಲ್ಪಾಡಿಯಲ್ಲಿ ವಿಷಾದಕರ ಘಟನೆ: ವಿದ್ಯುತ್ ಶಾಕ್ ತಗುಲಿ ಜಲಜಾಕ್ಷಿ ಎಂಬ ಮಹಿಳೆ ಮೃತ್ಯು.

ಕಡಬ ತಾಲ್ಲೂಕು, ಜೂನ್ 16 – ಧೋಲ್ಪಾಡಿ ಗ್ರಾಮದ ಕೂರೆಲು ಎಂಬಲ್ಲಿ ಇಂದು ಮಧ್ಯಾಹ್ನ ಒಂದು ದುಃಖದ ಘಟನೆ ನಡೆದಿದೆ. ಗ್ರಾಮದಲ್ಲಿ  ಜಲಜಾಕ್ಷಿ (38), ವಿದ್ಯುತ್ ಶಾಕ್‌ಗೆ ಒಳಗಾಗಿ ಮೃತಪಟ್ಟಿದ್ದಾರೆ.

ಜಲಜಾಕ್ಷಿ ಅವರು ತಮ್ಮ ಮನೆಯ ಹತ್ತಿರದ ಕೃಷಿ ಭೂಮಿಯಲ್ಲಿ ಪಂಪ್ ಸೆಟ್ ಚಾಲನೆ ಮಾಡಲು ಹೊರಟಾಗ ಅಚಾನಕ್ ವಿದ್ಯುತ್ ಸ್ಪರ್ಶಿಸಿ ಅಸ್ವಸ್ಥರಾದರು. ತಕ್ಷಣ ಅವರನ್ನು ಸ್ಥಳೀಯರು ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಕಾಣಿಯೂರಿನ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತು. ಆದರೆ, ವೈದ್ಯರ ಪರಿಶೀಲನೆಯಿಂದ ಅವರು ಈಗಾಗಲೇ ಮೃತ ಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ.

ಜಲಜಾಕ್ಷಿ ಅವರು ಗ್ರಾಮಪಂಚಾಯತ್ ಹಾಗೂ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಹಿತೈಷಿಯಾಗಿದ್ದರು. ಕಾಣಿಯೂರು ಗ್ರಾಮ ಪಂಚಾಯತ್‌ನ ಸಂಜೀವಿನಿ ಒಕ್ಕೂಟದಲ್ಲಿ ಕೃಷಿ ಸಖಿಯಾಗಿ ಸೇವೆ ಸಲ್ಲಿಸುತ್ತಿದ್ದ ಅವರು ದೋಳ್ಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸಹ ಕೆಲಸ ನಿರ್ವಹಿಸುತ್ತಿದ್ದರು. ಗ್ರಾಮದಲ್ಲಿ ನಡೆಯುವ ಪ್ರತಿಯೊಂದು ಸಾಮಾಜಿಕ, ಅಭಿವೃದ್ಧಿ ಕಾರ್ಯಕ್ರಮದಲ್ಲಿ ತಮ್ಮ ಅಸ್ತಿತ್ವವನ್ನು ಪ್ರಾಮಾಣಿಕತೆಯಿಂದ ತೋರಿಸಿದ್ದ ಮಹಿಳೆ ಇಂದಿಲ್ಲದಂತಾಗಿರುವುದು ಗ್ರಾಮಸ್ಥರಲ್ಲಿ ಆಘಾತದ ಛಾಯೆ ಮೂಡಿಸಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ವಿದ್ಯುತ್ ಇಲಾಖೆಯ ಉನ್ನತ ಅಧಿಕಾರಿ ಶ್ರೀ ರಾಜೇಶ್ ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಘು,ಕಡಬ ಪೋಲಿಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಜಲಜಾಕ್ಷಿ ಅವರು ಪತಿ ಪುರಂದರ ಹಾಗೂ ಇಬ್ಬರು ಮಕ್ಕಳು ಸೇರಿದಂತೆ ಕುಟುಂಬಕ್ಕೆ ದೊಡ್ಡ ನಷ್ಟವನ್ನುಂಟುಮಾಡಿದ್ದಾರೆ. ಈ ದುಃಖದ ಸಂದರ್ಭಕ್ಕೆ ಸ್ಥಳೀಯರು ಹಾಗೂ ಸಂಬಂಧಿತ ಇಲಾಖೆಯವರು ಸಂತಾಪ ಸೂಚಿಸಿದ್ದಾರೆ.

ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Post a Comment

أحدث أقدم