ಸುಬ್ರಹ್ಮಣ್ಯ, ಜೂನ್ 3: ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಕಾರ್ಯದರ್ಶಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಅಧಿಕಾರಿಯಾಗಿರುವ ಶ್ರೀಮತಿ ತುಳಸಿ ಮದ್ದಿನೇನಿ ಅವರು ಇಂದು ಸುಬ್ರಹ್ಮಣ್ಯ ಭಾಗದ ಹಲವು ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಿದರು.
ಬೆಂಗಳೂರಿನಿಂದ ಬಂದ ಅವರು ನೇರವಾಗಿ ಸುಬ್ರಹ್ಮಣ್ಯದ ಬಿಸಿಎಂ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ, ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿ ಅವರ ದೈನಂದಿನ ಜೀವನದ ಕುರಿತು ಮಾಹಿತಿ ಪಡೆದುಕೊಂಡರು. ಊಟದ ಗುಣಮಟ್ಟ, ನೀರಿನ ಪೂರೈಕೆ, ವಿಶ್ರಾಂತಿ ಕೊಠಡಿ, ಓದುಕೋಣೆ, ಶೌಚಾಲಯ, ಅಡುಗೆ ಕೋಣೆ ಮೊದಲಾದ ಸೌಲಭ್ಯಗಳ ಪರಿಶೀಲನೆ ನಡೆಸಿ ತೃಪ್ತಿ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರಾದ ಸುಶ್ಮಿತಾ, ಮೌನ, ಸಾಕ್ಷಿ, ಮೌಲ್ಯ ಹಾಗೂ ಜೀವಿತ ತಾವು ಅನುಭವಿಸುತ್ತಿರುವ ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡಿದರು. ನಿಲಯದಲ್ಲಿ ಕೇವಲ 100 ವಿದ್ಯಾರ್ಥಿಗಳಿಗೆ ಮಾತ್ರ ಸೌಲಭ್ಯ ಇದ್ದು, ಈ ಸಂಖ್ಯೆಯನ್ನು 250 ವಿದ್ಯಾರ್ಥಿಗಳ ವಸತಿಯ ವರೆಗೆ ವಿಸ್ತರಿಸುವಂತೆ ತೀರ್ಮಾನಿಸಲಾಗಿದೆ. ಈ ಸಂಬಂಧ ಪ್ಲಾನ್ ಹಾಗೂ ಎಸ್ಟಿಮೇಟು ತಯಾರಿಸಿ, ಶೀಘ್ರವಾಗಿ ಸರ್ಕಾರಕ್ಕೆ ಕಳುಹಿಸಲು ಇಲಾಖಾಧಿಕಾರಿಗೆ ಸೂಚನೆ ನೀಡಿದರು.
ಅಲ್ಲಿಂದ ಅವರು ಕುಮಾರಧಾರ ನದಿಯ ಸ್ನಾನಘಟ್ಟ ಸೇತುವೆ ಮತ್ತು ರಸ್ತೆ ಕಾಮಗಾರಿಗಳನ್ನು ವೀಕ್ಷಿಸಿದರು. ನಂತರ ಪಶು ಆಸ್ಪತ್ರೆ, ಬಿಸಿಎಂ ಹಾಸ್ಟೇಲ್, ಆಶ್ರಮ ಶಾಲಾ ಕಟ್ಟಡಗಳ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ, ಪ್ರಗತಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು.
ವಾಲ್ಮೀಕಿ ಆಶ್ರಮ ಶಾಲೆಗೆ ಭೇಟಿ ನೀಡಿ, ಹೊಸ ಕಟ್ಟಡದ ಕಾಮಗಾರಿ ಪರಿಶೀಲಿಸಿ ಜುಲೈ ತಿಂಗಳೊಳಗೆ ಮುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಳೆಗಾಲದ ಹಿನ್ನೆಲೆ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು, ಮುಂಜಾಗ್ರತಾ ಕ್ರಮಗಳ ಕುರಿತು ಕೂಡ ಸೂಚನೆ ನೀಡಿದರು.
ಈ ಪರಿಶೀಲನೆ ಸಂದರ್ಭದಲ್ಲಿ ಹಲವಾರು ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಅವರಲ್ಲಿ ಮುಖ್ಯವಾಗಿ:
ಪುತ್ತೂರು ಉಪವಿಭಾಗ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್
ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್
ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗೋಪಾಲ್ ಮತ್ತು ಪ್ರಮೋದ್
ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಗಂಗಯ್ಯ ನಾಯಕ್ (ಪುತ್ತೂರು), ಗೀತಾ (ಸುಳ್ಯ)
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಬಂಡಾರಿ
ವಲಯ ಅರಣ್ಯಾಧಿಕಾರಿ ವಿಮಲ್ ಬಾಬು
ಕಂದಾಯ ಅಧಿಕಾರಿ ಪೃಥ್ವಿರಾಜ್
ಸುಬ್ರಹ್ಮಣ್ಯ ಗ್ರಾಮಾಧಿಕಾರಿ ರವಿಚಂದ್ರ
ಪಿಡಿಒ ಮಹೇಶ್
ಕಾರ್ಯದರ್ಶಿ ಮೋನಪ್ಪ ಡಿ
ವೈದ್ಯಾಧಿಕಾರಿ ಡಾ. ತ್ರಿಮೂರ್ತಿ
ಬಿಸಿಎಂ ಹಾಸ್ಟೆಲ್ ವಾರ್ಡನ್ ಮತ್ತು ಸಿಬ್ಬಂದಿ, ವಾಲ್ಮೀಕಿ ಆಶ್ರಮ ಶಾಲೆ ವಾರ್ಡನ್ ಮುಂತಾದವರು ಹಾಜರಿದ್ದರು.
ಮೆಚ್ಚುಗೆಗೆ ಪಾತ್ರವಾದ ಪರಿಶೀಲನೆ, ನಿರೀಕ್ಷೆಗಳಿಗೆ ಆಶಾವಾದ ನೀಡಿದ ಅನುಭವ
ಈ ಮೇಲ್ದರ್ಜೆಯ ಅಧಿಕಾರಿಯ ನೇರ ಭೇಟಿಯಿಂದ ಸ್ಥಳೀಯ ಅಭಿವೃದ್ಧಿ ಕಾರ್ಯಗಳಿಗೆ ಹೊಸ ಚೈತನ್ಯ ಬಂದಿದೆ. ವಿದ್ಯಾರ್ಥಿ ನಿಲಯ ಸುಧಾರಣೆಯ ಆಶಾಸ್ಪದ ಭರವಸೆ, ಮಳೆಗಾಲದ ಮುಂಜಾಗ್ರತಾ ಕ್ರಮಗಳಿಗೆ ನೀಡಿದ ಆದೇಶಗಳು ಸಾರ್ವಜನಿಕರಿಂದ ಮೆಚ್ಚುಗೆ ಪಡೆಯುತ್ತಿವೆ.
إرسال تعليق