ಕುಕ್ಕೆ ಸುಬ್ರಹ್ಮಣ್ಯ: ಪ್ರಸಿದ್ಧ ಪವಿತ್ರ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜೇಷ್ಠ ಶುದ್ಧ ಷಷ್ಠಿಯಂದು ಶ್ರೀ ದೇವರ ನಿತ್ಯೋತ್ಸವ ಭಕ್ತಿ ಭಾವಪೂರ್ಣವಾಗಿ ಸಂಪನ್ನವಾಯಿತು. ದೇವರು ಗರ್ಭಗೃಹ ಪ್ರವೇಶಿಸುವುದರೊಂದಿಗೆ ನಿತ್ಯೋತ್ಸವದ ಅಂತಿಮ ವಿಧಿಗಳು ನೆರವೇರಿದವು.
ಈ ದಿನದ ವಿಶೇಷ ಅರ್ಥಪೂರ್ಣ ಘಟ್ಟವೆಂದರೆ, ರಾತ್ರಿ ಮಹಾಪೂಜೆಯ ಬಳಿಕ ನಡೆದ ಬಂಡಿ ಉತ್ಸವ ಹಾಗೂ ಪಾಲಕಿ ಉತ್ಸವ. ದೇವಸ್ಥಾನದ ಹೊರಾಂಗಣದಲ್ಲಿ ಆನೆ, ಬಿರುದಾವಳಿ, ನಾದಸ್ವರ, ಬ್ಯಾಂಡ್, ಸ್ಯಾಕ್ಸೋಫೋನ್ ಮುಂತಾದ ವೈಭವದೊಂದಿಗೆ ದೇವರ ವಾಹನ ಉತ್ಸವಗಳು ವಿಜೃಂಭಣೆಯಿಂದ ಜರುಗಿದವು. ಸಾವಿರಾರು ಭಕ್ತರು ಈ ಸಂದರ್ಭ ಕ್ಷೇತ್ರಕ್ಕೆ ಆಗಮಿಸಿ, ದೇವರ ದರ್ಶನ ಪಡೆದರು.
ಉತ್ಸವದ ಮುಖ್ಯ ಕ್ಷಣದಲ್ಲಿ ಶ್ರೀ ದೇವರು ಗರ್ಭಗೃಹ ಪ್ರವೇಶಿಸಿದ ದೃಶ್ಯ ಭಕ್ತರಲ್ಲಿ ಭಾವನಾತ್ಮಕ ವಾತಾವರಣವನ್ನು ಮೂಡಿಸಿತು. ನಿತ್ಯೋತ್ಸವದ ಕೊನೆಯ ದಿನದ ಈ ವೈಭವಪೂರ್ಣ ಉತ್ಸವಗಳಲ್ಲಿ ಊರಿನ ಹಾಗೂ ಹೊರೂರಿನ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ಎಸ್. ಇಂಜಾಡಿ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ. ಯೇಸುರಾಜ್, ಸಮಿತಿಯ ಇತರ ಸದಸ್ಯರು, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರು ಹಾಗೂ ದೇವಸ್ಥಾನದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಮುಂದಿನ ದೀಪಾವಳಿ ಅಮಾವಾಸ್ಯೆಯಂದು ಶ್ರೀ ದೇವರು ಪುನಃ ಹೊರಾಂಗಣ ಪ್ರವೇಶಿಸುವ ಮೂಲಕ ಉತ್ಸವಗಳ ಹೊಸ ಅಧ್ಯಾಯ ಆರಂಭವಾಗಲಿದೆ. ಪ್ರಮುಖವಾಗಿ ಜಾತ್ರಾ ಸಮಯದಲ್ಲಿ ರಥಬೀದಿಯಲ್ಲಿ ರಥೋತ್ಸವ ಹಾಗೂ ಹರಕೆಯ ಉತ್ಸವಗಳು ನಡೆಯಲಿವೆ ಎಂದು ದೇವಸ್ಥಾನ ಮೂಲಗಳು ತಿಳಿಸಿವೆ.
إرسال تعليق