ಮಂಗಳೂರು, ಜೂನ್ 7 – ದಿನಾಂಕ 04-06-2025 ರಂದು ಬೆಳಿಗ್ಗೆ 8:45 ಕ್ಕೆ ದೇರಳಕಟ್ಟೆ ನಾಟೆಕಲ್ ರಸ್ತೆಯಲ್ಲಿರುವ ಖಾಸಗಿ ಕಣಚೂರು ಆಸ್ಪತ್ರೆಗೆ ಬಾಂಬ್ ಇರಿಸಲಾಗಿದೆ ಎಂಬ ಅನಾಮಧೇಯ ಫೋನ್ ಕರೆ ನಡೆದಿತ್ತು. ಬೆದರಿಕೆಯೊಡ್ಡಿದ ಕರೆದಾರನು ಆಸ್ಪತ್ರೆಯನ್ನು ಬೆಳಿಗ್ಗೆ 11:00 ಗಂಟೆಯೊಳಗೆ ಖಾಲಿ ಮಾಡಬೇಕೆಂದು 5 ಬಾರಿ ಕರೆಮಾಡಿ ಆತಂಕ ಸೃಷ್ಟಿಸಿದ್ದರು.
ಈ ಬೆದರಿಕೆಯ ಬಗ್ಗೆ ಮಂಗಳೂರು ನಗರದ ಉಳ್ಳಾಲ ಪೊಲೀಸ್ ಠಾಣೆಗೆ ದೂರು ದೊರಕುತ್ತಿದ್ದಂತೆಯೇ, 25-30 ಮಂದಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳದೊಂದಿಗೆ ಆಸ್ಪತ್ರೆಯ ಇಡೀ ಕಟ್ಟಡ, ಪಾರ್ಕಿಂಗ್ ಪ್ರದೇಶ ಮತ್ತು ಸುತ್ತಮುತ್ತಲಿನ ಪರಿಸರವನ್ನು ಸುಮಾರು 10 ಗಂಟೆಗಳ ಕಾಲ ಪರಿಶೀಲಿಸಿದರು. ತನಿಖೆಯಲ್ಲಿ ಯಾವುದೇ ಬಾಂಬ್ ಪತ್ತೆಯಾಗದ ಕಾರಣ, ಇದು ಕೇವಲ ಬಾಂಬ್ ಬೆದರಿಕೆಯಾಗಿ ಸ್ಥಿರವಾಯಿತು.
ಆದರೆ ಅತ್ಯಂತ ಆಶ್ಚರ್ಯಕರ ಸಂಗತಿ ಎಂದರೆ, ಈ ಬೆದರಿಕೆಯನ್ನು ನೀಡಿದವರು ಬೇರೆ ಯಾರೂ ಅಲ್ಲ, ಫೋನ್ ಕರೆ ಸಂಬಂಧಿಸಿದ ದೂರು ನೀಡಿದ್ದ ಡಾಕ್ಟರ್ ಪಿಜಿ ವಿದ್ಯಾರ್ಥಿನಿ ಶ್ರೀಮತಿ ಚಲಸಾನಿ ಮೋನಿಕಾ ಚೌಧರಿ ಅವರೇ ಆಗಿದ್ದಾರೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಪೊಲೀಸರಿಂದ ರಚಿಸಲಾದ ವಿಶೇಷ ತಂಡವು ತಾಂತ್ರಿಕ ವಿಶ್ಲೇಷಣೆ ನಡೆಸಿದ ವೇಳೆ, ಕರೆ ಮಾಡಿದ ನಂಬರಿನ ವಿವರಗಳು ಮತ್ತು ಸಮಯದ ದಾಖಲಾತಿಗಳ ಆಧಾರದ ಮೇಲೆ ಆರೋಪಿಯಾಗಿ ದೂರುದಾರೆಯೇ ಎಂದು ದೃಢಪಟ್ಟಿದೆ.
ಪ್ರಾಥಮಿಕ ತನಿಖೆಯಲ್ಲಿ, ಆ ದಿನ ವೈದ್ಯಕೀಯ ಕಾಲೇಜಿನಲ್ಲಿ ಸಮಿನಾರ್ ನೀಡಬೇಕಾಗಿದ್ದುದರಿಂದ ಅದನ್ನು ತಪ್ಪಿಸಲು ಚಲಸಾನಿ ಮೋನಿಕಾ ಚೌಧರಿಯವರು ಈ ನಾಟಕವನ್ನು ರೂಪಿಸಿದ್ದರೆಂದು ತಿಳಿದುಬಂದಿದೆ.
ಆರೋಪಿಯನ್ನು ದಿನಾಂಕ 07-06-2025 ರಂದು ಬಂಧಿಸಲಾಗಿದ್ದು, ವಿಚಾರಣೆಯ ಸಂದರ್ಭದಲ್ಲಿ ಅವರ ಬಳಿಯಿರುವ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.
ಸೂಚನೆ: ಇಂತಹ ಧೃತಿಗೆಟ್ಟ ಕ್ರಿಯೆಗಳು ಸಾರ್ವಜನಿಕ ಭದ್ರತೆ ಮತ್ತು ವೈದ್ಯಕೀಯ ತುರ್ತು ಸೇವೆಗಳ ಮೇಲೆ ದುಷ್ಪ್ರಭಾವ ಬೀರುವುದರಿಂದ, ಕಾನೂನು ಕ್ರಮವನ್ನು ನಿಷ್ಕಷ್ಟಗೊಳಿಸದೇ ಕಟ್ಟುನಿಟ್ಟಾಗಿ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
إرسال تعليق