ಯೆಯ್ಯಾಡಿಯ ಪ್ರಣಾಮ್ ಬಾರ್‌ನಲ್ಲಿ ನಡೆದ ಗಂಭೀರ ಘಟನೆ ಮತ್ತೊಮ್ಮೆ ಸಾರ್ವಜನಿಕರ ಸುರಕ್ಷತೆ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿದೆ. ಸ್ನೇಹಿತನ ಆಹ್ವಾನಕ್ಕೆ ಒಪ್ಪಿ ಊಟಕ್ಕಾಗಿ ಬಾರ್‌ಗೆ ಹೋದ ಯುವಕನೊಬ್ಬ ಕೊಲೆ ಯತ್ನದ ಘಟನೆ ನಡೆದಿದೆ.
ಪಿರ್ಯಾದಿದಾರ ರಾಹುಲ್ ಅವರು ಮಂಗಳೂರು ಪೂರ್ವ ಪೋಲೀಸ್ ಠಾಣೆಯಲ್ಲಿ ನೀಡಿದ ದೂರಿನ ಪ್ರಕಾರ, ದಿನಾಂಕ 06-06-2025 ರಂದು ಮಧ್ಯಾಹ್ನ ಸುಮಾರು 2:00 ಗಂಟೆಯ ಸಮಯದಲ್ಲಿ ಅವರು ತಮ್ಮ ಸ್ನೇಹಿತ ಕೌಶಿಕ್ ಅವರ ಆಹ್ವಾನಕ್ಕೆ ಸ್ಪಂದಿಸಿ ಯೆಯ್ಯಾಡಿಯ ಪ್ರಣಾಮ್ ಬಾರ್‌ಗೆ ತೆರಳಿದ್ದರು. ಆಗಾಗಲೇ ಬಾರ್‌ನಲ್ಲಿ ಕುಳಿತಿದ್ದ ಮೂವರು ವ್ಯಕ್ತಿಗಳು—ಚೈನೀಸ್ ಗಣೇಶ್, ಶಿಜು ಮತ್ತು ಬೃಜೇಶ್ ಎಂಬವರು—ದೊಡ್ಡ ಧ್ವನಿಯಲ್ಲಿ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದರು. ಬಾರ್‌ನೊಳಗಿನ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಗಲಾಟೆ ತೀವ್ರವಾಗಿತ್ತು.
ಅಸಮಯಕ್ಕೆ, ಬಾರ್‌ನ ಹೊರಗಿನಿಂದ ಬಂದ ಅಜ್ಞಾತ ವ್ಯಕ್ತಿಯೊಬ್ಬನು ಕೈಯಲ್ಲಿ ಚೂರಿ ಹಿಡಿದು ಕೌಶಿಕ್‌ರವರತ್ತ ಧಾವಿಸಿದ. ಈ ವ್ಯಕ್ತಿ ಕೌಶಿಕ್‌ರವರ ಹೊಟ್ಟೆಯ ಬಲಭಾಗ ಮತ್ತು ಎದೆಯ ಎಡಭಾಗಕ್ಕೆ ಚೂರಿಯಿಂದ ಇರಿದು ಗಾಯಗೊಳಿಸಿದ್ದಾನೆ. ಕೌಶಿಕ್‌ರನ್ನು ತಕ್ಷಣವೇ ಬಾರ್‌ನ ಸಿಬ್ಬಂದಿ ಎ ಜೆ ಆಸ್ಪತ್ರೆಗೆ ದಾಖಲಿಸಿದ್ದು, ದೂರುದಾರ ರಾಹುಲ್ ಕೂಡಾ ಅವರ ಜೊತೆಗೆ ಆಸ್ಪತ್ರೆಗೆ ತೆರಳಿದ್ದಾರೆ.
ಆಸ್ಪತ್ರೆಯಲ್ಲಿ ಕೌಶಿಕ್ ನೀಡಿದ ಮಾಹಿತಿಯ ಪ್ರಕಾರ, ಈ ಹಿಂದೆ ಸಂತು ಎಂಬಾತನೊಂದಿಗೆ ಅವರ ನಡುವೆ ವಾಗ್ವಾದವೊಂದು ನಡೆದಿದ್ದು, ಅದರಿಂದಲೇ ಈ ದಾಳಿ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ. ದಾಳಿ ಮಾಡಿದವರಲ್ಲಿ ಬೃಜೇಶ್ ಪ್ರಮುಖನಾಗಿದ್ದು, “ಈ ಬಾರಿ ಮಲ್ಲಾ ಜನನಾ”, “ಸೈತಿಜಿಂಡ ಕೆರಂದೆ ಬುಡ್ಪುಜಾ” ಎಂದು ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗಿದ್ದಾನೆ.ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದು, ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿಯಲ್ಲಿ ತಿಳಿಸಿದ್ದಾರೆ.
إرسال تعليق