ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಿದ್ದು ಸಿಕ್ಕಿದ ಚಿನ್ನದ ಸರ ಹಸ್ತಾಂತರ: ಪ್ರಾಮಾಣಿಕತೆ ಮೆರೆದ ಸಿಬ್ಬಂದಿ.


ಸುಬ್ರಹ್ಮಣ್ಯ, ಜುಲೈ 20 – ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತನೊಬ್ಬರ ಚಿನ್ನದ ಸರ ಸಿಕ್ಕಿದ್ದು, ಅದನ್ನು ಪ್ರಾಮಾಣಿಕತೆಯಿಂದ ಮರಳಿಸಿದ ಘಟನೆ ಭಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.


ಆದಿತ್ಯವಾರದಂದು ದೇವಳದಲ್ಲಿ ಭಾರೀ ಜನಸಂದಣಿ ಇದ್ದ ಸಂದರ್ಭ, ಬೆಂಗಳೂರಿನಿಂದ ಬಂದಿದ್ದ ಭಕ್ತ ಶ್ರೀನಿವಾಸಪ್ಪ ಅವರಿಗೆ ಸರತಿಯ ಸಾಲಿನಲ್ಲಿ ಚಿನ್ನದ ಸರ ಸಿಕ್ಕಿತು. ಕೂಡಲೇ ಅವರು ಶ್ರೀ ದೇವಳದ ಭದ್ರತಾ ಸಿಬ್ಬಂದಿ ಮುಖ್ಯಸ್ಥ ದಾಮೋದರ ನಾಯರ್ ಅವರಿಗೆ ಸರವನ್ನು ನೀಡಿದರು. ನಂತರ ದೇವಳದ ಧ್ವನಿವರ್ಧಕದ ಮೂಲಕ ಈ ಕುರಿತು ಹಲವು ಬಾರಿ ಪ್ರಕಟಣೆ ನೀಡಲಾಯಿತು. ಭದ್ರತಾ ಸಿಬ್ಬಂದಿಯೂ ಸರ ಕಳೆದುಹೋಗಿದ ಬಗ್ಗೆ ಭಕ್ತರಲ್ಲಿ ಮಾಹಿತಿ ಹಂಚಿದರು.

ಇದೇ ಸಂದರ್ಭ ಉಜಿರೆಯ ಸಚಿನ್ ಅವರ ಮಗಳ ಚಿನ್ನದ ಸರ ಕಳೆದುಹೋದ ವಿಷಯ ಅವರ ಗಮನಕ್ಕೆ ಬಂತು. ಅವರು ಭದ್ರತಾ ಅಧಿಕಾರಿಗಳನ್ನು ಸಂಪರ್ಕಿಸಿ ಸರದ ವೈಶಿಷ್ಟ್ಯಗಳು ವಿವರಿಸಿದ ಬಳಿಕ, ದೇವಳದ ಆಡಳಿತ ಕಚೇರಿಯಲ್ಲಿ ಸುಬ್ರಹ್ಮಣ್ಯ ಠಾಣಾಧಿಕಾರಿ ಕಾರ್ತಿಕ್ ಅವರ ಸಮ್ಮುಖದಲ್ಲಿ ಸರವನ್ನು ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಪ್ರಾಮಾಣಿಕತೆಯನ್ನು ಮೆರೆದ ಶ್ರೀನಿವಾಸಪ್ಪ ಹಾಗೂ ಕಾರ್ಯತತ್ಪರತೆಯಿಂದ ಸರವನ್ನು ಮರಳಿಸಲು ಶ್ರಮಿಸಿದ ಭದ್ರತಾ ಮುಖ್ಯಸ್ಥ ದಾಮೋದರ ನಾಯರ್ ಅವರನ್ನು ಭಕ್ತರು ಹಾಗೂ ಠಾಣಾಧಿಕಾರಿ ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ದೇವಳದ ಶಿಷ್ಠಾಚಾರ ವಿಭಾಗದ ಶಿವರಾಮ ಮಾನಾಡು, ಸಚಿನ್ ಅವರ ಮನೆಯವರು ಸೇರಿದಂತೆ ಹಲವು ಭಕ್ತರು ಉಪಸ್ಥಿತರಿದ್ದರು.

Post a Comment

أحدث أقدم