ನೆಲ್ಯಾಡಿ, ಜುಲೈ 17: ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಆಲಂಪಾಡಿಯಲ್ಲಿ ಜುಲೈ 16ರ ರಾತ್ರಿ ತೀವ್ರ ಕುಟುಂಬ ಕಲಹ ಉಂಟಾಗಿ ಅಣ್ಣ-ತಮ್ಮಂದಿರ ನಡುವೆ ನಡೆದ ಹಲ್ಲೆಯಲ್ಲಿ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಗಾಯಗೊಂಡ ವ್ಯಕ್ತಿಯನ್ನು ರಾಜಶೇಖರ್ (37) ಎಂದು ಗುರುತಿಸಲಾಗಿದೆ. ರಾತ್ರಿ 11 ಗಂಟೆ ಸುಮಾರಿಗೆ ಮನೆಯಲ್ಲಿದ್ದಾಗ ಅವರ ತಮ್ಮನೊಂದಿಗೆ ಮಾತಿನ ಚಕಮಕಿ ಉಂಟಾಗಿ, ವಾಗ್ವಾದ ತೀವ್ರಗೊಳ್ಳುತ್ತಿದ್ದಂತೆ ಅಣ್ಣನೊಬ್ಬ ಕತ್ತಿಯಿಂದ ರಾಜಶೇಖರ್ ಅವರ ಮೇಲೆ ದಾಳಿ ನಡೆಸಿದ್ದಾನೆ ಎನ್ನಲಾಗಿದೆ.
ದಾಳಿಯಿಂದ ರಾಜಶೇಖರ್ ಅವರಿಗೆ ತಲೆ, ಹಣೆ, ಕೆನ್ನೆ, ಕೈ ಹಾಗೂ ಕಾಲಿಗೆ ತೀವ್ರ ಗಾಯಗಳಾಗಿದ್ದು, ತುರ್ತು ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಮಾಹಿತಿ ತಿಳಿದ ನೆಲ್ಯಾಡಿ ಹೊರಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳು ರಾಜಶೇಖರ್ ನೀಡಿದ ದೂರಿನ ಆಧಾರದಲ್ಲಿ ಮನೋಜ್ ಕುಮಾರ್ ಮತ್ತು ಜಯರಾಜ್ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಪ್ಪಿನಂಗಡಿ ಠಾಣೆಯಲ್ಲಿ ಅಕ್ರ: 63/2025 ಕೆಡಿಟಿ 352, 118(1) ಹಾಗೂ 3(5) BNS ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
إرسال تعليق