ಮುರಳ್ಯ, ಜುಲೈ 11: ಮುರುಳ್ಯ ಗ್ರಾಮದ ಅಲೆಕ್ಕಾಡಿ ಶಾಲಾ ವಠಾರದಲ್ಲಿ ಇಂದು ಒಂದು ಅನನ್ಯ ಕಾರ್ಯಕ್ರಮ ನಡೆಯಿತು. ಶಾಲೆಗೆ ಆರ್ಥಿಕ ಶಕ್ತಿ ನೀಡುವ ನಿಟ್ಟಿನಲ್ಲಿ ಅಡಿಕೆ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮಕ್ಕೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟನೆ ನೆರವೇರಿಸಿದರು.
ಶಾಸಕಿ ಭಾಗೀರಥಿ ಮುರುಳ್ಯ ಅವರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ಮಾತನಾಡುತ್ತಾ, "ಇದು ಶಾಲೆಯ ಭವಿಷ್ಯದ ಅಭಿವೃದ್ಧಿಗೆ ಸಹಾಯ ಮಾಡುವಂತಹ ಮಹತ್ತ್ವದ ಕ್ರಮವಾಗಿದೆ. ಶಾಲೆಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಈ ಸ್ವಾವಲಂಬಿ ಯೋಜನೆ ಬಹುಪಯೋಗಿಯಾಗಿ ಪರಿಣಮಿಸುತ್ತದೆ. ಮುಕ್ತ ಜಾಗವಿರುವ ಇತರ ಶಾಲೆಗಳಲ್ಲಿಯೂ ಇಂತಹ ಯೋಜನೆಗಳನ್ನು ಜಾರಿಗೆ ತರಬೇಕು," ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವನಿತಾ ಸುವರ್ಣ, ಉಪಾಧ್ಯಕ್ಷೆ ಜಾನಕಿ ಮುರುಳ್ಯ, ಪಂ.ಸದಸ್ಯರು, ಶಾಲಾ ಅಭಿವೃದ್ಧಿ ಹಾಗೂ ನಿರ್ವಹಣಾ ಸಮಿತಿಯ (SDMC) ಅಧ್ಯಕ್ಷರು ಮತ್ತು ಸದಸ್ಯರು, ಶಾಲಾ ಮುಖ್ಯೋಪಾಧ್ಯಾಯರು, ವಿದ್ಯಾರ್ಥಿಗಳ ಪೋಷಕರು ಹಾಗೂ ಮಕ್ಕಳೂ ಭಾಗವಹಿಸಿದ್ದರು.
ಅಡಿಕೆ ಗಿಡಗಳ ನೆಡಿಕೆ ಮುಕ್ತಾಯವಾದ ಬಳಿಕ ಸಭೆ ಹಾಗೂ ಚರ್ಚೆಯೊಂದೂ ನಡೆಯಿತು. ಈ ರೀತಿಯ ಕಾರ್ಯಕ್ರಮಗಳು ಶಾಲೆಯ ಆರ್ಥಿಕ ನಿರ್ವಹಣೆಯಲ್ಲಿ ಪೂರಕವಾಗಿ ಕಾರ್ಯನಿರ್ವಹಿಸುವಂತಾಗಲಿವೆ ಎಂಬ ನಂಬಿಕೆ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.
إرسال تعليق