ನೆಲ್ಯಾಡಿಯಲ್ಲಿ 43ನೇ ವರ್ಷದ ಭವ್ಯ ಸಾರ್ವಜನಿಕ ಶ್ರೀ ಗಣೇಶೋತ್ಸವ : ಧಾರ್ಮಿಕ–ಸಾಂಸ್ಕೃತಿಕ ಕಾರ್ಯಕ್ರಮ, ಶೋಭಾಯಾತ್ರೆ.

ನೆಲ್ಯಾಡಿ: ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ನೆಲ್ಯಾಡಿ-ಕೌಕ್ರಾಡಿ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನೆಲ್ಯಾಡಿ-ಕೌಕ್ರಾಡಿ ಇವರ ವತಿಯಿಂದ 43ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಆ.27ರಂದು ನೆಲ್ಯಾಡಿ-ಕೌಕ್ರಾಡಿ ಶ್ರೀ ಶಬರೀಶ ಕಲಾಮಂದಿರದಲ್ಲಿ ಭಕ್ತಿಭಾವ, ಶ್ರದ್ಧೆ, ಸಾಂಸ್ಕೃತಿಕ ವೈಭವಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು.

ಬೆಳಿಗ್ಗೆ ಪ್ರಧಾನ ಅರ್ಚಕ ಶ್ರೀಧರ ನೂಜಿನ್ನಾಯ ಅವರ ಪೌರೋಹಿತ್ಯದಲ್ಲಿ ಗಣಪತಿ ದೇವರ ಪ್ರತಿಷ್ಠೆ ನಡೆದು, ಬಳಿಕ ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ ಹಾಗೂ ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ 8.15ಕ್ಕೆ ಶ್ರೀ ಅಯ್ಯಪ್ಪಸ್ವಾಮಿ ದೇವರಿಗೆ ಸೀಯಾಳಾಭಿಷೇಕ ಮತ್ತು ಗಣಹೋಮ ನಡೆಯಿತು. ನಂತರ ಶ್ರೀ ಶಬರೀಶ ಕಲಾಮಂದಿರದಲ್ಲಿ ಛದ್ಮವೇಷ ಸ್ಪರ್ಧೆ, ಶ್ರೀಕೃಷ್ಣ ವೇಷ ಸ್ಪರ್ಧೆ ನಡೆದಿದ್ದು, ಸುರೇಶ್ ಪಡಿಪಂಡ ನಿರೂಪಿಸಿದರು.

ಧರ್ಮಜಾಗೃತಿ ಸಭೆ:
ಕಾರ್ಯಕ್ರಮದ ಅಂಗವಾಗಿ ನಡೆದ ಧರ್ಮಜಾಗೃತಿ ಸಭೆಯಲ್ಲಿ ಪುತ್ತೂರು ಸರಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೋ.ಸುಬ್ಬಪ್ಪ ಕೈಕಂಬ ಧಾರ್ಮಿಕ ಉಪನ್ಯಾಸ ನೀಡಿ, ಸೇವೆಗೆ ಫಲಾಪೇಕ್ಷೆ ಬೇಡ, ಆತ್ಮವೇ ದೇವರು ಎಂಬ ಭಾವನೆ ಬಂದಾಗಲೇ ಧರ್ಮಜಾಗೃತಿ ಮೂಡುತ್ತದೆ. ಭಕ್ತಿ ಇರುವ ಸ್ಥಳದಲ್ಲೇ ದೇವರ ಅನುಗ್ರಹ ಸಿಗುತ್ತದೆ ಎಂದು ಹೇಳಿದರು.
ಸೇವಾ ಭಾರತಿಯ ಮಂಗಳೂರು ಮಹಾ ಚೀಪ್ ಎಕ್ಸಿಕ್ಯೂಟಿವ್ ಆಫೀಸರ್ ಪೃಥ್ವಿಪಾಲ್ ಕೆ. ಉದ್ಘಾಟಿಸಿ ಮಾತನಾಡಿ, ಹಿಂದೂ ಧರ್ಮವೇ ಜಗತ್ತಿಗೆ ದಾರಿ ತೋರಿಸಿದ ಧರ್ಮ. ಸಂಸ್ಕೃತಿ ನಾಶವಾದರೆ ದೇಶ ಉಳಿಯುವುದಿಲ್ಲ. ಆದ್ದರಿಂದ ನಾವು ಜಾಗೃತ ಹಾಗೂ ಸ್ವಾಭಿಮಾನಿ ಹಿಂದೂಗಳಾಗಬೇಕು ಎಂದು ಕರೆ ನೀಡಿದರು.

ನೆಲ್ಯಾಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು ಶುಭಹಾರೈಸಿ, ಕಳೆದ ವರ್ಷದ ಸಮಿತಿ ಅಧ್ಯಕ್ಷ ರವಿಚಂದ್ರ ಅತ್ರಿಜಾಲು, ಕಾರ್ಯದರ್ಶಿ ರಕ್ಷಿತ್ ಅವರನ್ನು ಗೌರವಿಸಲಾಯಿತು.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಮೋಹನ ಗೌಡ ಕಟ್ಟೆಮಜಲು ಸಭಾಧ್ಯಕ್ಷತೆ ವಹಿಸಿದರು. ಅಯ್ಯಪ್ಪಸ್ವಾಮಿ ದೇವಸ್ಥಾನದ ಅಧ್ಯಕ್ಷ ಡಾ.ಸದಾನಂದ ಕುಂದರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ನಗದು ಮೇಲ್ವಿಚಾರಕ ಗಿರೀಶ್, ಗಣೇಶೋತ್ಸವ ಸಮಿತಿ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ ಗೋಳಿತ್ತೊಟ್ಟು, ಕೋಶಾಧಿಕಾರಿ ರಾಕೇಶ್ ಎಸ್.ಗೌಡ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಅಣ್ಣಿ ಎಳ್ತಿಮಾರ್ ಸ್ವಾಗತಿಸಿದರು, ಜೊತೆ ಕಾರ್ಯದರ್ಶಿ ಸಂದೇಶ್ ಶೆಟ್ಟಿ ಆಮುಂಜ ವಂದಿಸಿದರು. ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಕಾರ್ಯದರ್ಶಿ ಸುಧೀರ್ ಕುಮಾರ್ ಕೆ.ಎಸ್. ನಿರೂಪಿಸಿದರು.

ಮಧ್ಯಾಹ್ನ ಶ್ರೀ ಗಣಪತಿ ದೇವರಿಗೆ ಮಹಾರಂಗಪೂಜೆ, ಮಹಾಪೂಜೆ ನಡೆಯಿತು. ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸುರೇಖಾ ಹಾಗೂ ಶಿಷ್ಯ ವೃಂದದಿಂದ ಭರತನಾಟ್ಯ, ಶ್ರೀ ವರಮಹಾಲಕ್ಷ್ಮಿ ಮಾತೃ ಭಜನಾ ಮಂಡಳಿ ಸೂರ್ಯ ನಗರ ನೆಲ್ಯಾಡಿ, ನಂದಗೋಕುಲ ಭಜನಾ ಮಂಡಳಿ ಮಾದೇರಿ, ಚಾಮುಂಡೇಶ್ವರಿ ಮಹಿಳಾ ಭಜನಾ ಮಂಡಳಿ ಪಟ್ಲಡ್ಕ, ಧರ್ಮಶ್ರೀ ಮಹಿಳಾ ಮತ್ತು ಮಕ್ಕಳ ಕುಣಿತ ಭಜನಾ ಮಂಡಳಿ ಕೌಕ್ರಾಡಿ ಹೊಸಮಜಲು, ವಿಷ್ಣುಮೂರ್ತಿ ಮಹಿಳಾ ಭಜನಾ ಮಂಡಳಿ ತಿರ್ಲೆ- ಕೊಣಾಲು ಇವರಿಂದ ಕುಣಿತ ಭಜನಾ ಕಾರ್ಯಕ್ರಮ ಜರುಗಿತು.

ಭವ್ಯ ಶೋಭಾಯಾತ್ರೆ:
ಸಂಜೆಯ ವೇಳೆ ಶ್ರೀ ಮಹಾಗಣಪತಿ ದೇವರ ಭವ್ಯ ಶೋಭಾಯಾತ್ರೆಯು ವಿವಿಧ ಭಜನಾತಂಡಗಳು, ಸ್ತಬ್ಧಚಿತ್ರಗಳೊಂದಿಗೆ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಿಂದ ನೆಲ್ಯಾಡಿ ಪೇಟೆ ಮೂಲಕ ಶೋಭಾಯಾತ್ರೆ ಸಾಗಿತು. ಶೋಭಾಯಾತ್ರೆಯ ನಿರ್ವಹಣೆಯನ್ನು ಸಮಿತಿ ಪದಾಧಿಕಾರಿಗಳು ಹನಿರ್ವಹಿಸಿದರು.


ಪ್ರಾಯೋಜಕರು ಮತ್ತು ವಿಶೇಷ ಕೊಡುಗೆಗಳು
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದಾವಣಗೆರೆ ಮೇಲ್ವಿಚಾರಕ ಗುಣಾಕರರ ಬಹುಮಾನ ಹಾಗೂ ಪ್ರಸಾದ ಹರಿವಾಣ ಪ್ರಾಯೋಜಿಸಿದರು. ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು ಶಾಲು ಪ್ರಾಯೋಜಿಸಿದರು. ರಕ್ಷಿತ್ ಎಂ ಮತ್ತು ಉಮೇಶ್ ಪೂಜಾರಿ ಪೊಸೋಳಿಗೆ ಬಳಗ ನಾಸಿಕ್ ಬ್ಯಾಂಡ್ ಪ್ರಾಯೋಜಿಸಿದರು. ಹೊಸಮಜಲು ಅಶ್ವತ ಗೆಳೆಯರ ಬಳಗ ಗಣಪತಿ ಕಟ್ಟೆ ಶೃಂಗಾರ, ಉಪಹಾರ ವ್ಯವಸ್ಥೆ ಮಾಡಿದರು. ನೆಲ್ಯಾಡಿ ಜೈ ಶ್ರೀರಾಮ್ ಫ್ರೆಂಡ್ಸ್ ಗಾಂಧಿ ಮೈದಾನ ವಿದ್ಯುತ್ ದೀಪಾಲಂಕಾರ ಪ್ರಾಯೋಜಿಸಿದರು, ಶಂಕರ್ ಗೌಡ ಕೃಷ್ಣ ಭವನದಲ್ಲಿ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಉಪಹಾರ ವ್ಯವಸ್ಥೆ ಮಾಡಿದರು.

Post a Comment

Previous Post Next Post