ಬಂಟ್ವಾಳ, ಆ.28:ಬಂಟ್ವಾಳ ತಾಲೂಕು ಪಿಲಾತಬೆಟ್ಟು ಗ್ರಾಮದ ಬಂಗ್ಲೆ ಮೈದಾನದ ಬಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪುಂಜಾಲಕಟ್ಟೆ ವತಿಯಿಂದ ಆಗಸ್ಟ್ 27 ರಂದು ರಾತ್ರಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಕಾನೂನು ಉಲ್ಲಂಘನೆಯ ಪ್ರಕರಣ ದಾಖಲಾಗಿದೆ.
ಮಾಹಿತಿ ಪ್ರಕಾರ, ರಾತ್ರಿ 10.45 ಗಂಟೆಗೆ ಧ್ವನಿವರ್ಧಕ ಬಳಸಿ ಕಾರ್ಯಕ್ರಮ ನಡೆಯುತ್ತಿರುವುದನ್ನು ಕಂಡು, ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪಿ.ಎಸ್.ಐ ಸ್ಥಳಕ್ಕೆ ತೆರಳಿ, ಧ್ವನಿ ಮಾಲಿನ್ಯ ನಿಯಂತ್ರಣ ಕಾಯ್ದೆ ಹಾಗೂ ಈಗಾಗಲೇ ನೀಡಲಾಗಿದ್ದ ನೋಟಿಸ್ ಕುರಿತು ಆಯೋಜಕರಿಗೆ ತಿಳಿಸಿ, ಧ್ವನಿವರ್ಧಕ ನಿಲ್ಲಿಸಲು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಆಯೋಜಕರು ಆ ಸಮಯದಲ್ಲಿ ಧ್ವನಿವರ್ಧಕವನ್ನು ನಿಲ್ಲಿಸಿದ್ದರು.
ಆದರೆ, ರಾತ್ರಿ 11.50 ಗಂಟೆಗೆ ಪುನಃ ಧ್ವನಿವರ್ಧಕ ಬಳಸಿ ಕಾರ್ಯಕ್ರಮ ನಡೆಸುತ್ತಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ಮತ್ತೊಮ್ಮೆ ವಿಚಾರಿಸಿದಾಗ, ಸಮಿತಿ ಅಧ್ಯಕ್ಷ ಕೌಶಿಕ್ ಶೆಟ್ಟಿ, ಪದಾಧಿಕಾರಿಗಳು ಹಾಗೂ ಪುನೀತ್ ಮಡಂತ್ಯಾರು, ತಾರನಾಥ ಕಜೆಕ್ಕಾರು, ಗುರು ಮಡಂತ್ಯಾರು, ನಾಟಕ ಆಯೋಜಕರು ಸೇರಿದಂತೆ 10–15 ಜನರ ಗುಂಪು ಸೇರಿ ಪೊಲೀಸರೊಂದಿಗೆ ವಾಗ್ವಾದ ನಡೆಸಿ, “ಪೊಲೀಸ್ ಗೆ ಧಿಕ್ಕಾರ” ಎಂದು ಘೋಷಣೆ ಕೂಗಿ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದರೆಂದು ವರದಿಯಾಗಿದೆ.
ಈ ಹಿನ್ನೆಲೆಯಲ್ಲಿ, ಅ.ಕ್ರ 52/2025 ಅಡಿಯಲ್ಲಿ BNS-2023 ಕಲಂ 189(2), 191(2), 191(3), 132, 190, ಜೊತೆಗೆ KP Act ಕಲಂ 31, 37, 92(i) ಹಾಗೂ ಧ್ವನಿ ಮಾಲಿನ್ಯ ನಿಯಂತ್ರಣ ನಿಯಮಗಳು 2000ರ ಕಲಂ 5, 6 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಲಾಗಿದೆ.
🔹 ಪ್ರಕರಣದ ತನಿಖೆ ಮುಂದುವರಿದಿದ್ದು, ಹೆಚ್ಚಿನ ವಿವರಗಳು ಬಾಕಿಯಿವೆ.
Post a Comment