ಕೊಲ್ಲಮೊಗರು ಗ್ರಾಮದಲ್ಲಿ ಭ್ರಷ್ಟಾಚಾರ ಪ್ರಕರಣ! – ಗ್ರಾಮಸ್ಥರಿಂದ ಶಾಂತಿಯುತ ಪ್ರತಿಭಟನಾ ಕರೆ.

ಸುಬ್ರಹ್ಮಣ್ಯ, ಆ.28:ಕೊಲ್ಲಮೊಗರು ಗ್ರಾಮದ ಪಂಚಾಯತ್ ಸಿಬ್ಬಂದಿಯಿಂದ ನಡೆದಿರುವ ಕಳವು ಮತ್ತು ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮಸ್ಥರು ಆ.29, ಶುಕ್ರವಾರ ಗ್ರಾಮ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.

ಗ್ರಾಮ ಪಂಚಾಯತ್‌ನ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಅವರು ಸುಮಾರು 3 ತಿಂಗಳ ಹಿಂದೆ ಪಂಚಾಯತ್‌ಗೆ ಬಂದ ಪೀಠೋಪಕರಣಗಳನ್ನು ಕಳವು ಮಾಡಿದ ಆರೋಪದ ಹಿನ್ನೆಲೆಯಲ್ಲಿ ಅಮಾನತು ಮಾಡಲ್ಪಟ್ಟಿದ್ದರು. ಈ ಪ್ರಕರಣವನ್ನು ಗ್ರಾಮ ಸಭೆಯಲ್ಲಿಯೇ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಹಿರಂಗಪಡಿಸಿ, ಇಲಾಖಾವಾರು ತನಿಖೆ ನಡೆಸುವ ನಿರ್ಣಯ ಕೈಗೊಳ್ಳಲಾಗಿತ್ತು.

ಆದರೆ, 25/08/2025ರಂದು ಆರೋಪಿಯು ಮತ್ತೆ ಕರ್ತವ್ಯಕ್ಕೆ ಹಾಜರಾದ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ. ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರಿಗೆ ವಿಚಾರಿಸಿದಾಗ, ಇದರ ಬಗ್ಗೆ ಯಾವುದೇ ಮಾಹಿತಿ ನೀಡದಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.

ಗ್ರಾಮಸ್ಥರ ಪ್ರಕಾರ, ಗ್ರಾಮ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಗಾಳಿಗೆ ತೂರಿ, ತನಿಖೆಯಿಲ್ಲದೇ ಸಿಬ್ಬಂದಿಯನ್ನು ಕರ್ತವ್ಯಕ್ಕೆ ಹಾಜರು ಮಾಡಿರುವುದು ತೀವ್ರ ಖಂಡನೀಯ. ಆದ್ದರಿಂದ ಶೀಘ್ರವೇ ತನಿಖಾ ಸಮಿತಿ ರಚಿಸಿ ನಿಜಾಸತ್ಯ ಹೊರತರಬೇಕು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕೆಂಬ ಒತ್ತಾಯ ಗ್ರಾಮಸ್ಥರದು.

ಈ ಹಿನ್ನೆಲೆಯಲ್ಲಿ ಆ.29ರಂದು ಕೊಲ್ಲಮೊಗರು ಗ್ರಾಮ ಪಂಚಾಯತ್ ಮುಂಭಾಗದಲ್ಲಿ ನಡೆಯುವ ಶಾಂತಿಯುತ ಪ್ರತಿಭಟನೆಗೆ ಪ್ರೆಸ್ ಕ್ಲಬ್ ಅಧ್ಯಕ್ಷರು, ಸದಸ್ಯರು ಹಾಗೂ ಸಾರ್ವಜನಿಕರನ್ನು ಆಹ್ವಾನಿಸಲಾಗಿದೆ.


Post a Comment

Previous Post Next Post