ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ನಿವೃತ್ತ ಪ್ರಭಾರ ಜನರಲ್ ಮ್ಯಾನೇಜರ್.
ಡಾ ಎಂ ಪದ್ಮನಾಭ ಬೆಂಗಳೂರು.
**********************
*ನೆನಪುಗಳ ಸಂಕಲನ*
ಅದು ಸಾವಿರದ ಒಂಬೈನೂರ ಐವತ್ತರ ದಶಕ.ಸ್ವಾತಂತ್ರ್ಯ ಬಂದು ಕೆಲವೇ ವರ್ಷಗಳು ಕಳೆದಿತ್ತಷ್ಟೇ. ಅಂದು ಶಾಲಾ ಕಾಲೇಜುಗಳು ಬಲು ವಿರಳ. ಕಲಿಯಲೇ ಬೇಕೆಂಬ ಛಲವಿದ್ದವರು ಹಾಗೂ ಆರ್ಥಿಕ ಶ್ರೀಮಂತರು ನಗರ ಪ್ರದೇಶಗಳಿಗೆ ಹೋಗಿ ಕಲಿಯಬೇಕಿತ್ತು. ಕುಟುಂಬದ ಆಪ್ತರ ಮನೆಯಲ್ಲಿದ್ದು ಶಾಲೆಗೆ ಹೋಗುವುದು ಅಂದು ರೂಢಿಯಾಗಿತ್ತು. ಜನಸಾಮಾನ್ಯರಿಗಿದು ಕೈಗೆಟುಕದ ಆಕಾಶ ನಕ್ಷತ್ರವಾಗಿತ್ತು. ಕುಲಕಸುಬು ನಂಬಿ ಬದುಕುವುದೇ ಅನಿವಾರ್ಯವಾಗಿದ್ದ ಕಾಲವದು. ಅದರಲ್ಲೂ ಹಳ್ಳಿಯ ಮಡಿವಂತರ ಕುಟುಂಬದ ಮಕ್ಕಳನ್ನು ಎಲ್ಲೆಂದರಲ್ಲಿ ಕಳುಹಿಸಲು ಹಿರಿಯರು ಸುತಾರಾಂ ಒಪ್ಪಲಾರರು. ಇಂತಹ ದಿನ ಮಾನಗಳಲ್ಲಿ ಇಂಜಿನಿಯರಿಂಗ್- ವೈದ್ಯಕೀಯ ಶಿಕ್ಷಣದ ಕನಸು ಕಂಡವರೇ ಇಲ್ಲ. ಬಹಳ ಮಂದಿಗೆ ಸಂಶೋಧನ ಕ್ಷೇತ್ರಕ್ಕೆ ಧುಮುಕಿ ಡಾಕ್ಟರೇಟ್ ಪಡೆಯಬಹುದೆಂಬ ಅರಿವೇ ಇರಲಿಲ್ಲ.ಅಂತಹ ಕಾಲಘಟ್ಟದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಪ್ರೊ ಎಸ್ ಎಮ್ ವೀರ ರಾಘವ ಆಚಾರ್ ಅವರ ಪ್ರೇರಣೆಯಿಂದ ರಾಮಕುಂಜ ದಲ್ಲಿ ಮೊಟ್ಟಮೊದಲು ಡಾಕ್ಟರೇಟ್ ಪದವಿ ಪಡೆದ, ತೀರ ಹಳ್ಳಿಯಲ್ಲಿ ಜನಿಸಿದ ಮೀಯಾಳ ಪದ್ಮನಾಭ ಎಂಬವರು ಡಾ.ಎಂ ಪದ್ಮನಾಭ ಎಂಬ ಗೌರವದ ಅಭಿದಾನ ಪಡೆದು, ರಾಜ್ಯ ಸರಕಾರದ ಪ್ರತಿಷ್ಠಿತ ಸಂಸ್ಥೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ( ಕೆ ಎಸ್ ಎಫ್ ಸಿ ) ಅತ್ಯುನ್ನತ ಅಧಿಕಾರಿಯಾಗಿ ಮೆರೆದ ಅಸಾಧಾರಣ ಸಾಧನೆ, ಸಾಧಿಸಬೇಕೆಂಬವರಿಗೆ ಆದರ್ಶಪ್ರಾಯವಾಗಿದೆ.
ಡಾ. ಪದ್ಮನಾಭರದು ಪ್ರತಿಷ್ಠಿತ ಮನೆತನ.ಇವರ ತಂದೆ ದಿ. ರಾಮಕೃಷ್ಣ ಪಡ್ಡಿಲ್ಲಾಯರು. ತಾಯಿ ಸೀತಮ್ಮ. ಮಧ್ಯಮ ವರ್ಗದ ಕುಟುಂಬ.ಇವರ ಅಜ್ಜ ಮತ್ತು ವಿಶ್ವೇಶತೀರ್ಥ ಶ್ರೀಪಾದರ ಪೂರ್ವಾಶ್ರಮದ ಅಜ್ಜ ಸಹೋದರರು. ಅವರೆಲ್ಲರಿಗೆ ಲೌಕಿಕ ಶಿಕ್ಷಣ ಪಡೆಯುವ ಅವಕಾಶ ಇಲ್ಲದೆ ಹೋಗಿದ್ದರು, ಆಧ್ಯಾತ್ಮಿಕ ಶಿಕ್ಷಣ ಪಡೆದ ವಿದ್ವಾಂಸರು ಹಾಗೂ ಸಂಸ್ಕಾರವಂತರು. ಕಾಲಕ್ಕೆ ತಕ್ಕಂತೆ ಬದುಕು ರೂಪಿಸಿಕೊಳ್ಳಬಲ್ಲ ಚತುರರಾಗಿದ್ದರು.
ಸುಮಾರು 125 ವರ್ಷಗಳ ಹಿಂದೆಯೇ ರಾಮಕುಂಜ ವಿದ್ವಾಂಸರ ನೆಲೆವೀಡು. ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರತಿಷ್ಠಿತ ಹೆಸರು. ಹಲವು ವಿದ್ವಾಂಸರು ಸಂಘಟಿತರಾಗಿ ಶ್ರೀರಾಮ ಕುಂಜೇಶ್ವರ ದೇವಾಲಯದ ಗೋಪುರದಲ್ಲಿ ಸಂಸ್ಕೃತ ಪಾಠ ಶಾಲೆಕಟ್ಟಿ ಬೆಳೆಸಿದರು. ಅದು ಬೆಳೆದು ಇಂದು ಹೆಮ್ಮರವಾಗಿದೆ. ವಿಶ್ವೇಶ ತೀರ್ಥರು ಇಲ್ಲೇ ಶಿಕ್ಷಣ ಪಡೆದರೆಂಬುದು ಇತಿಹಾಸ. ಮನೆಯ ಕೂಗಳತೆಯ ದೂರದಲ್ಲಿದ್ದ ಅದೇ ವಿದ್ಯಾ ಸಂಸ್ಥೆಯಲ್ಲಿ ಪದ್ಮನಾಭರು ಪ್ರೌಢ ಹಂತದವರೆಗೆ ಶಿಕ್ಷಣ ಪಡೆದರು. ಮತ್ತೆ ಪುತ್ತೂರು ಫಿಲೋಮಿನಾ ಕಾಲೇಜಿನಲ್ಲಿ ಬಿಎ ಪದವಿ ಪೂರೈಸಿದರು.
ಅಂದಿನ ದಿನಗಳಲ್ಲಿ ಹಳ್ಳಿ ಹೈದರು ಹತ್ತನೇ ತರಗತಿ ಮುಗಿಸಿದರೆ ಅದು ಬಲು ದೊಡ್ಡ ಪದವಿ. ಡಿಗ್ರಿ ಪೂರೈಸಿದರಂತೂ ಎಲ್ಲರಿಗೂ ಗೌರವಾನ್ವಿತರೆ ಸರಿ. ಅಂದು ಹಳ್ಳಿಗಳಲ್ಲಿ ಶಾಲಾ ಶಿಕ್ಷಕರಾಗುವುದೇ ಕಣ್ಣ ಮುಂದಿದ್ದ ದೊಡ್ಡ ಕನಸು. ಅದಕ್ಕಿಂತ ಮಿಗಿಲಾದ ದಾರಿ ತೋರುವ ಕುಟುಂಬಸ್ಥರಾಗಲಿ- ಮಿತ್ರರಾಗಲಿ ಇರಲಿಲ್ಲ. ಒಂದೆಡೆ ಬಡತನದ ಬೇಗೆಯಾದರೆ ಇನ್ನೊಂದೆಡೆ ಮಾರ್ಗದರ್ಶಕರಿಲ್ಲದ ಕೊರತೆ. ಬಿಎ ಎಕನಾಮಿಕ್ಸ್ ಓದಿ ದ್ವಿತೀಯ ರಾಂಕ್ ಪಡೆದರು. ಮುಂದೆ ಏನೆಂದು ಗೊತ್ತು ಗುರಿ ಇಲ್ಲದಾಯಿತು. ಅಲ್ಲಿಯವರೆಗೆ ತನ್ನ ಗುರು ಹರಿಪ್ರಸಾದ ರಾಯರು ಬೆನ್ನೆಲುಬಾಗಿದ್ದರು. ಅದೇ ಕಾಲಕ್ಕೆ ಉಳುವವನೇ ಹೊಲದೊಡೆಯ ಎಂಬ ಮಸೂದೆ ಜಾರಿಗೆ ಬಂತು . ಅನ್ನದ ಬಟ್ಟಲಿನಂತೆ ಮನೆಗಿದ್ದ ಹೊಲಗದ್ದೆಗಳ ಕಿತ್ತುಕೊಂಡು ಬಿಟ್ಟಿತು. ಮನೆಯಲ್ಲಿ ಉಳಿದರೆ ಬದುಕು ಮುಸುಕಾಗುವುದು ಖಚಿತವೆಂದು ತಿಳಿದ ಇವರು ಭವಿಷ್ಯದತ್ತ ಕಣ್ಣುನೆಟ್ಟರು.
ಹಿರಿಯರ ಪುಣ್ಯದಫಲವೋ ಏನೋ ಮೈಸೂರು ವಿಶ್ವವಿದ್ಯಾನಿಲಯದಿಂದ ಸಂಶೋಧನೆಗೆ ತೊಡಗುವುದಿದ್ದರೆ ಸ್ಕಾಲರ್ಶಿಪ್ ಸಹಿತ ಅವಕಾಶವಿದೆ ಎಂದು ಇವರ ಗುರುಗಳಿಂದ ಕರೆ ಬಂದಿತು. ನಡೆದೇ ಬಿಟ್ಟರು. ರಾಜ್ಯ ಸರಕಾರದ ಆರ್ಥಿಕ ಸಮೀಕ್ಷೆಗಳು ಈ ವಿಷಯದಲ್ಲಿ ಸಂಶೋಧನ ವಿದ್ಯಾರ್ಥಿಯಾಗಿ ತೊಡಗಿದರು. ಮೂರು ವರ್ಷಗಳ ಆಳ ಅಧ್ಯಯನ ನಡೆಸಿ ಪ್ರಬಂಧ ಒಪ್ಪಿಸಿ ಕನಸಿನ ಪಿ ಎಚ್ ಡಿ ಪದವಿ ಗಿಟ್ಟಿಸಿಬಿಟ್ಟರು. ಹಳ್ಳಿ ಮೂಲೆಯ ರಾಮಕುಂಜದ ಯುವಕನೊಬ್ಬ ಈ ಎತ್ತರಕ್ಕೆ ಬೆಳೆದು ನಿಂತುದು ಜಿಲ್ಲೆಯ ಶೈಕ್ಷಣಿಕ ವಲಯದ ದೊಡ್ಡ ಸುದ್ದಿ ಎನಿಸಿತು. ಅಂದು ಇದರ ಬೆಲೆ ತಿಳಿದವರಿಗೆ ಮಾತ್ರ ತಿಳಿದಿರಬಹುದು. ವೈದ್ಯರನ್ನು ಮಾತ್ರ ಡಾಕ್ಟರ್ ಎಂದು ಕರೆಯುತ್ತಿದ್ದ ಆ ಕಾಲ ಈ ವಿಷಯದಲ್ಲಿ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಇದು ಆ ಕಾಲದ ಬಲು ದೊಡ್ಡ ಸಾಧನೆ ಎಂಬುದು ಅತಿಶಯೋಕ್ತಿಯಲ್ಲ.
ಇಂತಹ ದೊಡ್ಡ ಪದವಿ ಪಡೆದವರು ರಾಜಧಾನಿಯಲ್ಲಿ ಬದುಕು ಕಟ್ಟಿಕೊಳ್ಳಬೇಕಿತ್ತು. ರಾಜ್ಯ ಸರಕಾರದ ಯೋಜನಾ ಇಲಾಖೆಗೆ ಅಂದು ಮುಖ್ಯಸ್ಥರಾಗಿ ಆರ್ಥಿಕ ಸಲಹೆಗಾರರಾಗಿದ್ದವರು ಹೆಸರಾಂತ ಅರ್ಥಶಾಸ್ತ್ರಜ್ಞ ಡಿ ಎಂ ನಂಜುಂಡಪ್ಪ. ಅಂತಹ ಮಹಾನ್ ತಜ್ಞರ ನೇತೃತ್ವದ ಇಲಾಖೆಯಲ್ಲಿ ಪದವಿಗೆ ತಕ್ಕಂತಹ ಹುದ್ದೆ ಸ್ವೀಕರಿಸಿ ಸುಮಾರು ಎರಡು ವರ್ಷಗಳ ಕಾಲ ಮೈಮುರಿದು ದುಡಿದು ಹೆಸರು ಪಡೆದರು. ಅದೇ ಕಾಲಕ್ಕೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಲ್ಲಿ ಯೋಜನಾಧಿಕಾರಿ ಹುದ್ದೆಯ ಜಾಹೀರಾತು ಕಣ್ಣಿಗೆ ಬಿತ್ತು. ಅದೃಷ್ಟ ಒಲಿದು ಬಂದು ಸೇರಿಕೊಳ್ಳಲು ಕರೆ ಬಂದಿತು. ಯೋಜನಾ ಇಲಾಖೆಯು ಈ ಉತ್ಸಾಹಿ ಯುವಕನನ್ನು ಕೈಬಿಡಲು ಒಪ್ಪಲಿಲ್ಲ. ಹಣಕಾಸು ಸಂಸ್ಥೆಯಲ್ಲಿ ಖಾಯಂ ಹುದ್ದೆಯ ಆಕರ್ಷಣೆ ಇವರ ಚಿತ್ತ ಸೆಳೆಯಿತು. ಒಂದಷ್ಟು ದಿನಗಳ ಕಾಲ ಬರಲೇಬೇಕೆಂದು ಕಾದು ಕುಳಿತರು. ಕೊನೆಗೂ ಸೇರಿ ಬಿಟ್ಟರು.
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಅಂಬೆಗಾಲಿಡುತ್ತಿದ್ದ ಕಾಲವದು. ಜನಸಾಮಾನ್ಯರಿಗೆ ಇರಲಿ, ಪದವೀಧರರೂ ಸಂಸ್ಥೆಯ ಉದ್ದೇಶ - ಮಹತ್ವ ತಿಳಿದವರು ವಿರಳಾತಿವಿರಳ. ಅದು ಕೇವಲ ಸ್ವಉದ್ಯೋಗಗಳಾದ ವ್ಯಾಪಾರ- ಉದ್ದಿಮೆ - ಇವುಗಳಿಗೆ ಸಾಲ ಸೌಲಭ್ಯ ನೀಡುತ್ತಾ ಒಂದಷ್ಟು ಸಬ್ಸಿಡಿ ಒದಗಿಸಿ ಪ್ರೋತ್ಸಾಹಿಸುವ ಉನ್ನತ ಕಲ್ಪನೆಯಿಂದ ಹುಟ್ಟಿಕೊಂಡಿದ್ದ ಸಂಸ್ಥೆ ಅದು. ಬ್ಯಾಂಕಿನಂತೆ ಉಳಿತಾಯ ಖಾತೆ ತೆರೆದು ಠೇವಣಿ ಸಂಗ್ರಹಿಸುವುದಕ್ಕಲ್ಲ. ಜನರು ಬ್ಯಾಂಕುಗಳಲ್ಲೇ ಉಳಿತಾಯಗಳನ್ನು ಠೇವಣಿ ಇರಿಸುತ್ತಿದ್ದರು. ಅಗತ್ಯ ಬಿದ್ದಾಗ ಕೃಷಿ- ವ್ಯಾಪಾರಗಳಿಗೆ ಸಾಲ ನೀಡುತ್ತಿದ್ದ ಜನ ಅಲ್ಲಿ ಬಿಟ್ಟು ಬರಲು ಧೈರ್ಯ ತೋರುತ್ತಿರಲಿಲ್ಲ. ಇಂತಹ ಸೇವೆಗಳನ್ನು ಬ್ಯಾಂಕುಗಳೇ ನೀಡುವಂತಿದ್ದರೂ ವಿಶೇಷ ಪ್ರಾಧಾನ್ಯತೆ ಅಲ್ಲಿರಲಿಲ್ಲ. ಬ್ಯಾಂಕುಗಳಲ್ಲಿ ಸಾಮಾನ್ಯವಾಗಿ ಅಂದು ಸ್ಥಳೀಯ ಉದ್ಯೋಗಿಗಳೇ ಹೆಚ್ಚಾಗಿರುತ್ತಿದ್ದುದರಿಂದ ಅವರ ಜೊತೆಗೆ ಸ್ಥಳೀಯರಿಗೆ ನಿಕಟ ಬಾಂಧವ್ಯವಿತ್ತು. ಉತ್ತಮ ಸೇವೆಯು ಸಿಗುತ್ತಿತ್ತು.
ಹಣಕಾಸು ಕ್ಷೇತ್ರದ ವಿಶೇಷ ಅಧ್ಯಯನ ನಡೆಸಿದ್ದ ಈ ಯುವಕನ ವ್ಯಕ್ತಿತ್ವಕ್ಕೆ ಅಲ್ಲಿ ಸಿಕ್ಕಿದ ಅಧಿಕಾರಿ ಹುದ್ದೆ ಹೇಳಿ ಮಾಡಿಸಿದಂತಿತ್ತು. ಬೆಂಗಳೂರಲ್ಲಿ ಒಂದಷ್ಟು ಕಾಲ ದುಡಿದಂತೆ ಮಂಗಳೂರಿಗೆ ತೆರಳಿ,ಅಲ್ಲಿನ ಹಣಕಾಸು ಸಂಸ್ಥೆಯ ಶಾಖಾ ಕಚೇರಿಯ ಯೋಜನಾ ವಿಭಾಗದ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಯಲ್ಲಿ ದುಡಿದು ಕಾಯಕಲ್ಪ ನೀಡಬೇಕೆಂಬ ಒತ್ತಡ ಬಂದಿತು. ಅದು ದಕ್ಷಿಣ ಕನ್ನಡದ ವೀರಪ್ಪ ಮೋಯಿಲಿ ಮುಖ್ಯಮಂತ್ರಿಗಳಾಗಿದ್ದ ಸುಸಮಯ. ಅವರ ಊರಿನಲ್ಲಿ ಈ ಸಂಸ್ಥೆ ಗಟ್ಟಿಗೊಳ್ಳಬೇಕೆಂಬ ಆಶಯವೂ ಅದರ ಹಿಂದೆ ಇದ್ದುದು ಸತ್ಯ.
ಸಮಾಜ ಕಲ್ಯಾಣದ ಅತ್ಯುನ್ನತ ಆಶಯಗಳನ್ನು ಹೊತ್ತ ಸಂಸ್ಥೆಗಳು ಎಷ್ಟೇ ಇದ್ದರೂ ಅವುಗಳು ತಾನಾಗಿ ಬೆಳೆದ ಇತಿಹಾಸವಿಲ್ಲ. ಅದರ ಹೊಣೆ ಹೊತ್ತಿರುವ ಅಧಿಕಾರಿಯ ಚಾಕಚಕ್ಯತೆಗಳೇ ಸಂಸ್ಥೆಯ ಆಶಯಗಳನ್ನು ಜನರ ಬಳಿ ತಲುಪಿಸಬೇಕು. ರೊಕ್ಕ ಬರುವುದಕ್ಕಷ್ಟೇ ದುಡಿದರೆ ಯಶಸ್ಸು ದಕ್ಕುವುದಿಲ್ಲ.ನನ್ನ ಅನ್ನದ ದಾರಿ ತೋರಿದ ಸಂಸ್ಥೆಯ ಋಣ ತೀರಿಸಬೇಕೆಂಬ ಬದ್ಧತೆ ಇರಬೇಕು. ಸಾಮಾಜಿಕ ಕಳಕಳಿಯಿಂದ ನನ್ನಂತಿರುವ ಈ ಸಮಾಜದ ಜನರ ಸೇವೆಯ ಮಾಡಬೇಕೆಂಬ ತ್ಯಾಗಭಾವ ತುಂಬಿರಬೇಕು. ಹಾಗಿದ್ದಾಗ ಬರಬಹುದಾದ ಒಂದಷ್ಟು ಅಪಾಯಗಳನ್ನು ಸವಾಲಾಗಿ ಸ್ವೀಕರಿಸಿ, ದುಡಿಯಬಲ್ಲವರಿದ್ದಾಗ ಸಂಸ್ಥೆಯು ಮೇಲೆದ್ದು ಬರುವುದು.
ಡಾ ಪದ್ಮನಾಭರ ಉತ್ಸಾಹ, ಸೇವಾ ಭಾವಕ್ಕೆ ಪರಮಭಾಗ್ಯವೆನಿಸಿದಂತೆ ಸಿಕ್ಕ ಅವಕಾಶವನ್ನು ತನ್ನ ತಾಯ್ನೆಲದ ಸೇವೆಗಾಗಿ ಮುಡಿಪಾಗಿಟ್ಟರು. ಜನ ತನ್ನತ್ತ ಬರಬೇಕೆಂದು ಕಾಯಲಿಲ್ಲ. ಜನರ ಬಳಿ ಇವರು ನಡೆದರು. ಲಯನ್ಸ್- ರೋಟರಿ - ಜೆ.ಸಿ ಇನ್ನೂ ಅನೇಕ ಸಭೆ ಸಮಾರಂಭಗಳ ಬಳಿ ಹೋದರು. ಯುವಕರಿಗೆ ಇರುವ ಸೌಲಭ್ಯಗಳ ಮಾಹಿತಿ ತೆರೆದಿಟ್ಟರು. ಸೌಲಭ್ಯಗಳು ಇಲ್ಲದಿದ್ದ ತಾಲೂಕಿನ ಮೂಲೆ ಮೂಲೆಗೂ ಕರಪತ್ರಗಳ ಹೊತ್ತು ನಡೆದರು. ಅನೇಕ ಸಭೆಗಳ ನಡೆಸಿದರು. ಜನರು ಕಣ್ಣರಳಿಸಿ ನೋಡುವಂತಾಯಿತು . ತಮ್ಮ ಬದುಕಿನ ಭಾಗವಾಗಿದ್ದ ಮೆಚ್ಚಿನ ಬ್ಯಾಂಕುಗಳನ್ನು ಬದಿಗೆ ಸರಿಸಿ ಇವರ ಬಳಿ ಬರಲಾರಂಭಿಸಿದರು. ಶಾಖೆಯನ್ನು ಎತ್ತರೆತ್ತರಕ್ಕೇರಿಸಿ ಬಿಟ್ಟರು.
ಜೀವನದಲ್ಲಿ ಬೆಳೆಯಬೇಕಾದರೆ ಹಣವನ್ನು ಮಿತವಾಗಿ ಬಳಸಬೇಕು. ಎಂಬ ತತ್ವದಡಿಯಲ್ಲಿ ಬೆಳೆದವರು ಮಂಗಳೂರಿಗರು. ಸಮಾಜದಲ್ಲಿ ಬೆಳೆಯಬೇಕಿದ್ದರೆ ಮನ ಸೆಳೆಯುವ ಪದಗಳನ್ನು ಮಿತವಾಗಿ ಬಳಸಬೇಕೆಂದು ಅರಿತ ತಜ್ಞ ಪದ್ಮನಾಭರು. ಸಂಸ್ಥೆಯ ಯಶಸ್ಸು ನಾನು ಹೊರುವ ಭಾರದಲ್ಲಿ ಅಡಗಿದೆ ಎಂಬುದನ್ನು ಅರಿತಿದ್ದರು . ಪರಿಪೂರ್ಣ ಬದುಕಿಗಾಗಿ ಬೇಕಿರುವುದು ಪದವಿಗಳಲ್ಲ. ಪವಿತ್ರವಾದ ಮನಸ್ಸು ಹಾಗೂ ಹೃದಯ ವೈಶಾಲ್ಯತೆ ಎಂಬ ಮನ: ಶಾಸ್ತ್ರದ ಅರಿವು ಇವರಿಗಿತ್ತು.
ಕೇವಲ ಅರ್ಜಿ ಪಡೆದು ಸಾಲ ಮಂಜೂರಾದರೆ ನೀಡುವುದಷ್ಟನ್ನೇ ಮಾಡಲಿಲ್ಲ. ನನ್ನ ಮೇಲೆ ನಂಬಿಕೆ ಇಟ್ಟು, ಮುಂದಿಟ್ಟ ಬೇಡಿಕೆಗಳ ಅರ್ಜಿಗಳು ಮೇಲಧಿಕಾರಿಗಳಿಂದ ಮಂಜೂರಾತಿ ಪಡೆಯದೆ ಹೋದಲ್ಲಿ, ನನ್ನ ಮಾತಿನ ತೂಕ ಇಳಿಯುವುದೆಂಬ ಅರಿವಿತ್ತು. ಮೇಲಧಿಕಾರಿಗಳ ಮನಮುಟ್ಟಿಸಿ -ಮನವೊಲಿಸಿ, ಮಂಜೂರಾತಿ ಪಡೆಯುವ ಹೊಣೆಯನ್ನು ಹೆಗಲೇರಿಸಿಕೊಂಡು ಸಂಸ್ಥೆಯ ಸೇನಾನಿಯಂತೆ ಮೈಬಗ್ಗಿಸಿ ದುಡಿದರು. ಫಲಾನುಭವಿಗಳ ಕೈಗಿತ್ತು ಬಳಕೆಯತ್ತ ಕಣ್ಣಿಟ್ಟು ಸಕಾಲಕ್ಕೆ ಸರಕಾರದ ಧನ ಹಿಂದುರಿಗಿ ಬರುವವರೆಗೂ ಹೆಜ್ಜೆ ಹೆಜ್ಜೆಗೆ ಕಣ್ಣಿಟ್ಟು ಜನರ ಮನವನ್ನು ಗೆದ್ದರು.
ಕಾರು ಬಾಡಿಗೆಗೆ ಓಡಿಸುವ ಕನಸು ಹೊತ್ತ ಯುವಕರು ಟ್ಯಾಕ್ಸಿ - ಲಾರಿಗಳಿಗೆ ಸಾಲ ಪಡೆದರು. ಹೋಟೆಲ್ ಉದ್ಯಮದ ತವರೂರು ದಕ್ಷಿಣ ಕನ್ನಡ. ಅನೇಕ ಯುವಕರು ಸಾಲವೆತ್ತಿ ಹೋಟೆಲ್ ನಡೆಸಿ ಪ್ರಖ್ಯಾತಿ ಪಡೆದರು. ಸರಕಾರಿ ಸಂಸ್ಥೆಗಳ ಸೇವೆ ಎಂದರೆ ಮೂಗು ಮುರಿದು, ಕಣ್ಣೆತ್ತಿ ನೋಡದಂತಿದ್ದ ವೈದ್ಯರು - ಉದ್ಯಮ ಪತಿಗಳು - ವ್ಯಾಪಾರಿಗಳು ದಂಡು ದಂಡಾಗಿ ಸಂಸ್ಥೆಯ ಬಳಿ ಬರುವಂತೆ ಮಾಡಿದ ಇವರ ಸಾಧನೆ ರಾಜ್ಯಕ್ಕೇ ಮಾದರಿಯಾಯಿತು. ಬುದ್ಧಿವಂತರ ಜಿಲ್ಲೆಯ - ಬುದ್ಧಿವಂತ ಮಂದಿಯನ್ನು ಹೃದಯವಂತ ಅಧಿಕಾರಿಯೊಬ್ಬ ಬೆಳೆಸಿದ ಪರಿ ಕಂಡು ಉನ್ನತ ಅಧಿಕಾರಿಗಳು ಇವರ ಆದರ್ಶ ಸೇವೆಯನ್ನು ರಾಜ್ಯಕ್ಕೆಲ್ಲ ಸಾರಿದರು.
ಯಾವುದೇ ಸಂಸ್ಥೆಗಳಲ್ಲಿ ಸಿಬ್ಬಂದಿ ದುಡಿದೇ ದುಡಿಯುತ್ತಾರೆ. ಆದರೆ ಪ್ರೀತಿ ಕರುಣೆ ತುಂಬಿದ ಹೃದಯ, ಸೇವೆ ಮಾಡುವ ಕೈಗಳು ಮಹತ್ತರ ಬದಲಾವಣೆ ತರುತ್ತವೆ. ಇಂತಹ ವ್ಯಕ್ತಿತ್ವ ರೂಪಿಸಿಕೊಂಡವರು ಕೆಲವೇ ಕೆಲವು ಮಂದಿ ಮಾತ್ರ. ಪೋಣಿಸುವುದು ಕಷ್ಟ ತುಂಡರಿಸುವುದು ಸುಲಭ. ಗೆಲ್ಲುವ ಮಾತು ನಮ್ಮದಾಗಬೇಕು. ನಮ್ಮ ನಡೆ-ನುಡಿ ಸ್ನೇಹ ಸೇತುವೆ ಕಟ್ಟುವಂತಿರಬೇಕು. ಮಾತಿನಲ್ಲಿ ಮಮತೆ ತುಂಬಿರಬೇಕು. ತಿಳಿಯದವರಿಗೆ ತಿಳಿ ಹೇಳುವ ಹೃದಯ ನಮಗಿರಬೇಕು. ಕಾಲು ಜಾರುವುದರಿಂದಾಗುವ ಅನಾಹುತಕ್ಕಿಂತ ನಾಲಿಗೆ ಜಾರಿದರೆ ಅಪಾಯ ಅಧಿಕ ಎಂಬ ಅರಿವಿರಬೇಕು. ತಾಳ್ಮೆ ನಮ್ಮನ್ನು ಮಾನಸಿಕವಾಗಿ ಗಟ್ಟಿಗೊಳಿಸಿದರೆ, ಮೌನದಿಂದ ಉದಿಸಿ ಬರುವ ಮಾತು ಭಾವನಾತ್ಮಕವಾಗಿ ಗಟ್ಟಿಗೊಳಿಸುತ್ತದೆ.
ಇವೆಲ್ಲವೂ ಸಂಸ್ಕಾರವಂತ ಕುಟುಂಬದಲ್ಲಿ ಬೆಳೆದು ಬಂದ ಇವರಿಗೆ ಹೊಸದಾಗಿರಲಿಲ್ಲ. ಜನಮಾನಸದಲ್ಲಿ ಚಿರನೂತನವಾಗಿ ನೆಲೆಯಾದ ವಿಶ್ವೇಶತೀರ್ಥರಂತಹ ಮಹಾನ್ ಸಂತರನ್ನು ಲೋಕ ಕಲ್ಯಾಣಕ್ಕೆ ಅರ್ಪಿಸಿದ ಕುಟುಂಬದ ಇನ್ನೊಂದು ಕುಡಿ ಡಾ. ಪದ್ಮನಾಭರು. ಇಂತಹ ಮೌಲ್ಯಯುತ ಗುಣಗಳೆಲ್ಲ ಸಹಜವಾಗಿ ಇವರ ಮೈಗೂಡಿ ಹೋಗಿತ್ತು. ಹುಟ್ಟೂರಲ್ಲಿ ಇಂದಿಗೂ ನನ್ನ ಸೇವೆ ಸ್ಮರಿಸುವ ಅನೇಕ ಹಿರಿಯರು ಬದುಕಿನ ದೊಡ್ಡ ಗಳಿಕೆ ಎಂದು ಸಂತಸದಿಂದ ಸ್ಮರಿಸುವರು. ಇವರು ಮಂಗಳೂರಿನ ವಿಶಿಷ್ಟ ಅನುಭವದಿಂದ ಹುಬ್ಬಳ್ಳಿ- ತುಮಕೂರು -ಬೆಂಗಳೂರು ಹೀಗೆ ಅನೇಕ ಕಡೆ ದುಡಿದು ಹೆಸರಾದರು. 2008ರಲ್ಲಿ ಜನರಲ್ ಮ್ಯಾನೇಜರ್ ಇನ್ಚಾರ್ಜ್ ಹುದ್ದೆಯಲ್ಲಿ ನಿವೃತ್ತರಾದರು.
ನಿವೃತ್ತರೆಂದು ಅನುಭವ ಸಂಪತ್ತನ್ನು ಕ್ಷಯಿಸಲು ಬಿಡಲಿಲ್ಲ.ಐಸೆಕ್ ಎಂಬ ಎನ್ ಜಿ ಓ ಸಂಸ್ಥೆ ಇವರ ಸೇವೆಯನ್ನು ಬಳಸಿಕೊಂಡಿತು. ತಾಲೂಕು ಪಂಚಾಯತ್- ಜಿಲ್ಲಾ ಪಂಚಾಯತ್ ಮುಂತಾದ ಸಮಾಜ ಕಲ್ಯಾಣ ಯೋಜನೆಗಳ ಆರ್ಥಿಕ ಸಮೀಕ್ಷೆ ನಡೆಸುವ ಸಂಸ್ಥೆ ಇದಾಗಿತ್ತು. ಪ್ರಗತಿ ವರದಿ, ಒಳಿತು- ಕೆಡುಕುಗಳ ಅವಲೋಕನ ವರದಿಗಳನ್ನು ಸರಕಾರ ಬಯಸಿದಾಗ ಕೊಡುವ ಹೊಣೆ ಈ ಸಂಸ್ಥೆಯದು.ಅಧ್ಯಯನ ನಿರತರಾಗಿ ಸಾಮಾಜಿಕ ಕಳಕಳಿಯಿಂದ ಸುಮಾರು 15 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಾ ಹಣಕಾಸು ಕ್ಷೇತ್ರದ ಅನುಭವಗಳನ್ನು ಧಾರೆ ಎರೆದರು. ಸಮಾಜದ ಆರ್ಥಿಕ ಕ್ಷೇತ್ರಕ್ಕೆ ಇವರು ನೀಡಿದ ಸೇವೆ ಅಪಾರ.
ಶ್ರೀಯುತರ ಪತ್ನಿ ಸುಮನ. ತಂದೆ ದಾಮೋದರ ಪೆಜತ್ತಾಯ. ತಾಯಿ ಲೀಲಾವತಿ. ಸುರತ್ಕಲ್ಲು ಮೂಲದ ಮನೆತನ. ಬಿಎಸ್ಸಿ ಬಿಎಡ್ ಪದವೀಧರೆ. ಶಿಕ್ಷಕಿಯಾಗಿ ಕೆಲವು ಕಾಲ ದುಡಿದಿರುವರು. ಪತಿಯದು ಸದಾ ವರ್ಗಾವಣೆಗೊಳ್ಳುವ ಉದ್ಯೋಗ. ಮಗನ ವಿದ್ಯಾಭ್ಯಾಸ ನಿರ್ವಹಣೆಯ ಕಾರಣದಿಂದ ವೃತ್ತಿ ತೊರೆದು ಉದ್ಯಮ ಕಟ್ಟಿ ಬೆಳೆಸಿದ ಸಾಹಸಿಗರು ಇವರು. ಪತಿಯ ಯಶಸ್ಸಿಗೆ ಜೊತೆ ಜೊತೆಯಾಗಿ ಹೆಜ್ಜೆ ಹಾಕಿದರು.
ಇವರಿಗೊಬ್ಬನೇ ಮಗ ಸಂಕರ್ಷಣ. ಕಲಿಕೆಯಲ್ಲಿ ಮುಂಚೂಣಿಯ ಹುಡುಗ. ರಾಷ್ಟ್ರೀಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯಂತ ಉತ್ತಮ ಸ್ಥಾನ ಪಡೆದು ದೇಶದಲ್ಲೇ ಕೇವಲ ನಾಲ್ಕು ಕಾಲೇಜುಗಳಲ್ಲಿ ಒಂದಾದ ನ್ಯಾಷನಲ್ ಲಾ ಕಾಲೇಜಿನಲ್ಲಿ ಮೆರಿಟ್ ವಿದ್ಯಾರ್ಥಿಯಾಗಿ ಓದಿದರು. ಇಂದು ಮಲ್ಟಿ ನ್ಯಾಷನಲ್ ಕಂಪನಿಯ ಡೈರೆಕ್ಟರ್ ಹುದ್ದೆಯಲ್ಲಿ ದುಡಿಯುತ್ತಿರುವ ಮೇಧಾವಿ.
ವಿಶ್ವೇಶತೀರ್ಥ ಶ್ರೀ ಪಾದರ ಅನೇಕ ಸಂಸ್ಥೆಗಳ ಬೆಳವಣಿಗೆಯಲ್ಲಿ, ಅನೇಕ ರೀತಿಯಲ್ಲಿ ಸಹಾಯ ಹಸ್ತ ಚಾಚಿರುವರು. ರಾಮಕುಂಜ ವಿದ್ಯಾಸಂಸ್ಥೆಗಳ ನೆರವಿಗೆ ಧಾವಿಸಿ ಬಂದ ಹೃದಯವಂತರು. ತನ್ನ ಹುಟ್ಟೂರ ನಂಟು ಬಿಡದೆ ಋಣ ತೀರಿಸುತ್ತಿರುವ ನಮ್ಮೆಲ್ಲರ ಒಡನಾಡಿಗಳು.
*ರಾಜ್ಯ- ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರು ಹಾಗೂ ಲೇಖಕರು.*
Post a Comment