ಗುತ್ತಿಗಾರ ಬಸ್ ತಂಗುದಾಣದಲ್ಲಿ ಕುಡುಕರ ಹಾವಳಿ – ಸಾರ್ವಜನಿಕರ ಅಸಮಾಧಾನ.

ಗುತ್ತಿಗಾರು: ಪಟ್ಟಣದ ಹೃದಯ ಭಾಗದಲ್ಲಿರುವ ಬಸ್ ನಿಲ್ದಾಣದಲ್ಲಿ ಕುಡುಕರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಾರ್ವಜನಿಕರಿಗೆ ತೀವ್ರ ತೊಂದರೆಯನ್ನುಂಟುಮಾಡುತ್ತಿದೆ.


ಆಗಸ್ಟ್‌ 20ರಂದು ಮೂವರು ಕುಡುಕರು ದಿನಪೂರ್ತಿ ಬಸ್ ತಂಗುದಾಣದಲ್ಲೇ ಮಲಗಿ ಕಾಲ ಕಳೆಯುವ ಘಟನೆ ಸಾರ್ವಜನಿಕರ ಕಣ್ಣಿಗೆ ಬಿದ್ದಿದೆ. ಇವರಲ್ಲಿ ಒಬ್ಬ ವ್ಯಕ್ತಿ ನಿಲ್ದಾಣದಲ್ಲೇ ಮಲಮೂತ್ರ ವಿಸರ್ಜನೆ ಮಾಡಿ ಪರಿಸರವನ್ನು ಅಸಹ್ಯಗೊಳಿಸಿದ್ದಾನೆ. ಇದೊಂದು ದಿನದ ವಿಷಯವಲ್ಲದೆ, ಕಳೆದ ಎರಡು-ಮೂರು ತಿಂಗಳಿನಿಂದ ಒಬ್ಬ ಕುಡಿದ ವ್ಯಕ್ತಿ ಇದೇ ತಂಗುದಾಣದಲ್ಲೇ ವಾಸವಾಗಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ –
“ಕುಡುಕರು ಅಬಕಾರಿ ಇಲಾಖೆಯೇ ಗ್ರಾಹಕರಲ್ಲವೇ?
ಅವರು ಕಂಠಪೂರ್ತಿ ಕುಡಿದು ಬಸ್ ನಿಲ್ದಾಣದಲ್ಲಿ ಬಿದ್ದುಕೊಳ್ಳುವ ಸ್ಥಿತಿ ಬಂದಾಗ, ಜಾಗರೂಕರಾಗಿ ಅವರನ್ನು ಮನೆಗೆ ತಲುಪಿಸುವ ಜವಾಬ್ದಾರಿಯೂ ಅಬಕಾರಿ ಇಲಾಖೆಯದ್ದೇ ಅಲ್ಲವೇ? ಆದ್ದರಿಂದ ಅಧಿಕಾರಿಗಳು ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು” ಎಂದು ಸ್ಥಳೀಯರು ಒತ್ತಾಯ ವ್ಯಕ್ತಪಡಿಸಿದ್ದಾರೆ.

ನೂರಾರು ಮಕ್ಕಳು, ಮಹಿಳೆಯರು ಹಾಗೂ ಹಿರಿಯರು ಪ್ರತಿದಿನ ಈ ಬಸ್ ನಿಲ್ದಾಣವನ್ನು ಬಳಸುವ ಪರಿಸ್ಥಿತಿಯಲ್ಲಿ, ಕುಡುಕರ ಉಪಟಳದಿಂದ ಸಾರ್ವಜನಿಕರು ನಿಲ್ದಾಣವನ್ನು ತಪ್ಪಿಸಿ ರಸ್ತೆ ಬದಿ ಅಥವಾ ಅಂಗಡಿ ಮುಂದೆ ನಿಲ್ಲಬೇಕಾದ ದುಸ್ಥಿತಿ ಉಂಟಾಗಿದೆ.

👉 ಸಾರ್ವಜನಿಕರ ಒತ್ತಾಯ: ಅಬಕಾರಿ ಇಲಾಖೆ ತಕ್ಷಣ ಕ್ರಮ ಕೈಗೊಂಡು ಬಸ್ ನಿಲ್ದಾಣವನ್ನು ಸಾರ್ವಜನಿಕರ ಸುರಕ್ಷಿತ ಸ್ಥಳವನ್ನಾಗಿ ಮಾಡಬೇಕು.

Post a Comment

أحدث أقدم