ಆಧ್ಯಾತ್ಮಿಕ ಹಾಗೂ ಆಧುನಿಕ ಶಿಕ್ಷಣದ ಮೇಳದಲ್ಲಿ ಮುನ್ನಡೆಸಿದ ಪಾಂಡಿತ್ಯಶಾಲಿ ವ್ಯಕ್ತಿತ್ವ – ಪ್ರೊ. ಶ್ರೀನಿವಾಸ ವರಖೇಡಿ.

ಶ್ರೀನಿವಾಸ ವರಖೇಡಿಯವರು ದೆಹಲಿ ಸಂಸ್ಕೃತ ವಿಶ್ವವಿದ್ಯಾನಿಲಯದ ಉಪಕುಲಪತಿಗಳು. ಪ್ರಕಾಂಡ ಪಂಡಿತರು. ತನ್ನನ್ನೇ ಬಯ್ಯುವ... ಟೀಕಿಸುವ... ಹೊಗಳುವ... ಎಡಪಂಥೀಯ - ಬಲಪಂಥೀಯ ಚಿಂತಕರನ್ನು ಅರಗಿಸಿಕೊಳ್ಳಬಲ್ಲ, ವಿಶ್ವೇಶ ತೀರ್ಥರ ಪೂರ್ಣಪ್ರಜ್ಞ ವಿದ್ಯಾಪೀಠದ ಗರಡಿಯಲ್ಲಿ ಪಳಗಿದ ಆಚಾರವಾದಿಗಳು ಹೌದು- ಅಷ್ಟೇ ಮುಕ್ತ ವಿಚಾರವಾದಿಗಳು ಹೌದು. ಬದುಕಿನ ಹಾದಿಯಲ್ಲಿ ಅನೇಕ ತಿರುವುಗಳ ಕಂಡು ಉನ್ನತ ಸ್ಥಾನವೇರಿದ ಚಿಂತನಶೀಲ ವ್ಯಕ್ತಿತ್ವ ಇವರದು.

 ಯಾವ ಹೂವು ಯಾರ ಮುಡಿಗೋ.....ಯಾರ ಒಲವು ಯಾರ ಕಡೆಗೋ..... ಯಾವ ಕಡೆಗೋ? ಎಂಬಂತೆ ಭವಿಷ್ಯ ಅರಿತವರು ಯಾರೂ ಇಲ್ಲ. ಒಂದಂತೂ ಸತ್ಯ - ಸಂಸ್ಕಾರ ಎಡವಲು ಬಿಡದು, ಸಂಸ್ಕೃತಿ ಕೆಡಲು ಬಿಡದು ಎನ್ನಬಹುದಷ್ಟೇ. ಸಂಸ್ಕಾರಗಳಿಂದ ರೂಪುಗೊಂಡ ನಡೆ- ನುಡಿ ಬೆಳೆಯುವ ಹಾದಿಯ ದಿಕ್ಸೂಚಿಯಾಗಲು ಸಾಧ್ಯ. ಅಸಂಖ್ಯ ಸಂಖ್ಯೆಯ ಪರ್ವತ ಶಿಖರಗಳ ನಡುವೆ ನಾವೇರಬಹುದಾದ ಶಿಖರವನ್ನು ಹುಡುಕಿಕೊಳ್ಳಬೇಕು. ನಾವೇರಬಾರದ ಶಿಖರವನ್ನು ಒಮ್ಮೆ ಏರಲಾರಂಬಿಸಿದರೆ ಮರಳಿ ಇಳಿಯುವುದು ಅಷ್ಟು ಸುಲಭವಲ್ಲ. ಗುರಿ ಮುಟ್ಟುವುದಕ್ಕಿಂತ ಗುರಿ ಯಾವುದೆಂದು ಸ್ಪಷ್ಟವಾಗಿ ನಿರ್ಧರಿಸುವುದು ಮುಖ್ಯ. ವರಖೇಡಿ ಅವರು ಗುರಿಮುಟ್ಟುವ ಮೊದಲೇ ಗುರಿ ಯಾವುದೆಂದು ಸ್ಪಷ್ಟವಾಗಿ ನಿರ್ಧರಿಸಿಬಿಟ್ಟರು. ಭಗವಂತನ ಒಲುಮೆ - ಬಲುಮೆಗಳಿಂದ ಗುರಿ ಮುಟ್ಟಿದರು. 

 ವರಖೇಡಿ ಎಂಬುದು ಉತ್ತರ ಕರ್ನಾಟಕದ ಒಂದೂರು. ಶ್ರೀನಿವಾಸ ವರಖೇಡಿಯವರು ಅಲ್ಲಿನ ದೇಶಸ್ತ ಬ್ರಾಹ್ಮಣ ಕುಟುಂಬದ ಕುವರ. ತಂದೆ ಹನುಮಂತ ವರಖೇಡಿ - ತಾಯಿ ಭಾರತಿ. ಈ ದಂಪತಿಗಳ ಮೂವರು ಮಕ್ಕಳಲ್ಲಿ ಇವರೊಬ್ಬನೇ ಸುಪುತ್ರ.ಮಾಧ್ವ ಮತಾನುವಾಯಿಗಳು. ತಲೆಮಾರುಗಳ ಹಿನ್ನೆಲೆ ಹುಡುಕುತ್ತಾ ಹೊರಟರೆ ಮಹಾರಾಷ್ಟ್ರ ಕಡೆಯಿಂದ ಬಂದು ಧಾರವಾಡ ಪ್ರಾಂತದಲ್ಲಿ ನೆಲೆಯೂರಿದವರು. ಆಚಾರ- ವಿಚಾರ, ಏಕಾದಶಿ ವ್ರತ, ಅಧ್ಯಯನ ಇವರ ಕುಟುಂಬದ ಆಧ್ಯಾತ್ಮಿಕ ಸಂಪತ್ತು. ಶ್ರೀಮಂತ ಕುಟುಂಬವಲ್ಲದೆ ಹೋದರು ತಂದೆ -ತಾಯಿ ಆಳ ಅಧ್ಯಯನ ನಡೆಸದೇ ಇದ್ದರು, ಸಂಸ್ಕೃತ ಅಧ್ಯಯನದ ಒಲವು ಹೆಚ್ಚು ಇತ್ತು.ಇದುವೇ ಬದುಕಿನ ಅಡಿಪಾಯವಾಗಿ ಬಿಟ್ಟಿತು.

 ವರಖೇಡಿಯವರ ಅಜ್ಜ ಮೇಷ್ಟ್ರು. ಸಹಸ್ರಾರು ಬಡ ಮಕ್ಕಳಿಗೆ ಪಾಠ ಹೇಳಿದವರು. ಒತ್ತಾಸೆಗಳಿಗೆ ಆಸರೆಯಾದವರು. ಸಂಸ್ಕೃತ ವಿದ್ವಾಂಸರು. ತ್ಯಾಗ ಜೀವಿ. ಊರಿಗೆಲ್ಲ ಇವರ ಮೇಲೆ ಅಪಾರ ಗೌರವ. ಮಕ್ಕಳ ಪಾಠಕ್ಕೆ ಮಾತ್ರವಲ್ಲ ಹಿರಿಯರಿಗೂ ಮೇಷ್ಟ್ರೇ ಆಗಿದ್ದರು. ಊರಿಗೊಂದು ಗೌರವ ತಂದಿಟ್ಟ ಮಹಾನುಭಾವರು. ಅಷ್ಟಮಠಾಧೀಶರು, ಉತ್ತರಾದಿ ಮಠಾಧೀಶರು ಊರಿಗೆ ಯಾವುದೇ ಶ್ರೀಗಳು ಭೇಟಿ ನೀಡಿದರೂ ಪೂಜೆ -ಭಿಕ್ಷೆಗೆ ಇವರ ಮನೆಯೇ ಆಸರೆ. ಅದೊಂದು ದಿನ ವಿಶ್ವೇಶ ತೀರ್ಥರು ವಿದ್ವಾಂಸರ ಜೊತೆ ವರಖೇಡಿಯವರ ಮನೆಗೆ ಬಂದಿದ್ದರಂತೆ. ಈ ಚುರುಕು ಹುಡುಗನ ಮೇಲೆ ಎಲ್ಲರ ಕಣ್ಣು ಬಿತ್ತು. ಹಾವೇರಿಯಲ್ಲಿ ಐದನೇ ತರಗತಿಯಲ್ಲಿ ಓದುತ್ತಿದ್ದ ಈತನನ್ನು ಬಾ ವಿದ್ಯಾಪೀಠಕ್ಕೆ ಎಂದು ಗುರುಗಳು ಕರೆದರು. ಮೊದಲೇ ಗುರುಗಳ ಭಕ್ತರಾಗಿದ್ದ ಕುಟುಂಬವದು. ಇರೋ ಒಬ್ಬ ಗಂಡು ಮಗನನ್ನು ಕಳುಹಿಸಿದರೆ ಹೇಗೆ ಎಂದು ದಿಗ್ಬ್ರಾಂತರಾದರು.ಪೇಜಾವರರು, ವಿದ್ಯಾಪೀಠ, ಬೆಂಗಳೂರು........ ಇದು ಬಾಲಕ ಶ್ರೀನಿವಾಸನಿಗೂ ಖುಷಿ ಅನಿಸಿತು. ತಂದೆ- ತಾಯಿಗೂ..... ಸಂಸ್ಕಾರ ಕೇಂದ್ರ - ಮಗು ಶಾಸ್ತ್ರಾಧ್ಯಯನ ಮಾಡುವಂತಾಗಲೆಂದು ಒಪ್ಪಿಸಿ ಬಿಟ್ಟರು.

 ಚುರುಕು ನಡೆಯ ಬುದ್ಧಿವಂತ ಬಾಲಕ ವರಖೇಡಿ ಸಹಪಾಠಿಗಳ ಕಣ್ಮಣಿಯಾದ. ಏಕಪಾಠಿ ಹುಡುಗನ ಕಂಡು ಶ್ರೀಗಳು ಖುಷಿಯಾದರು. ಪರೀಕ್ಷೆಯಲ್ಲಿ ಉತ್ತಮ ಅಂಕವು ಬಂದಿತು. ಹಬ್ಬವೆಂದು ಮನೆಗೆ ಹೋದಾಗ ಮಗನ ಕಂಡು ಅಮ್ಮನು ಭಾವುಕರಾದರು. ಸಂಸ್ಕೃತ ಕಲಿತು ಹೇಗೆ ಬದುಕು ಕಟ್ಟಿಕೊಳ್ಳಬಲ್ಲನೆಂದು ಆಪ್ತರೆಲ್ಲ ಆಗಲೇ ಅವರ ತಲೆ ತುಂಬಿಸಿಬಿಟ್ಟಿದ್ದರು. ಇಲ್ಲೇ ಇದ್ದು ಶಾಲಾ ಶಿಕ್ಷಣ ಕಲಿ ಎಂದು ಮನೆಯಲ್ಲಿ ಕುಳ್ಳಿಸಿದರು. ಕೆಲವು ದಿನ ಕಳೆದಂತೆ ವಿದ್ಯಾಪೀಠದಿಂದ ಪತ್ರ ಒಂದು ಕೈ ಸೇರಿತು. ಮಗನ ಜಾಣತನ - ಚುರುಕತನ ಚೆನ್ನಾಗಿದೆ, ಮೊದಲ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಿರುವನು. ಕೂಡಲೇ ಅವನನ್ನು ಕಳುಹಿಸಿ, ಅವನ ಭವಿಷ್ಯದ ಜವಾಬ್ದಾರಿ ನನಗಿರಲಿ ಎಂದು ಅದರಲ್ಲಿ ಬರೆದಿತ್ತು. ಅಂತಹ ಮಹಾನ್ ಯತಿಗಳ ಮನದಿಛ್ಛೆ   ಹೀಗಿರುವಾಗ ಕಳುಹಿಸದೆ ಹೇಗಿರಲಿ ಎಂದು ಮತ್ತೆ ದೇವರ ಮೇಲೆ ಭಾರ ಹಾಕಿ ವಿದ್ಯಾಪೀಠಕ್ಕೆ ಕಳುಹಿಸಿಕೊಟ್ಟರು.

 ವಿದ್ಯಾಪೀಠ ರಾಜ್ಯದ ಅನೇಕರ ಸಂಸ್ಕಾರ ಸಂಸ್ಕೃತಿಗಳ,ವಿವಿಧ ಮಠ ಸಂಸ್ಕೃತಿಗಳ ಸಂಗಮ ಸ್ಥಳ. ಮಡಿ -ಮೈಲಿಗೆ, ಏಕಾದಶಿ ವ್ರತ ಹೀಗೆ ಕಟ್ಟಾ ಆಚಾರ- ಮುಕ್ತ ವಿಚಾರ ಇಲ್ಲಿನ ವೈಶಿಷ್ಟ್ಯ. ಹಯವದನ  ಪುರಾಣಿಕರು, ಪ್ರಭಂಜನ ಆಚಾರ್ಯರು, ಬನ್ನಂಜೆ ಇಂತಹ ಪಂಡಿತೋತ್ತಮರ ಉಪನ್ಯಾಸಗಳ ಸವಿರುಚಿ ಅಲ್ಲಿತ್ತು. ವಿದ್ಯಾರ್ಥಿಗಳೊಳಗೆ ಚಿಂತನ ಮಂಥನಕ್ಕೆ ಪುಷ್ಕಳ ಅವಕಾಶ ಇರುತ್ತಿತ್ತು. ಯುವಕರು ಆಧುನಿಕತೆಯ ಸಿದ್ದಾಂತಗಳು, ಎಡ-ಬಲ ಪಂಥದ ವಿಚಾರಧಾರೆಗಳು ಚರ್ಚಿಸಲ್ಪಡುತ್ತಿದ್ದವು. ಗುರುಗಳು ಇವೆಲ್ಲವುಗಳಿಗೆ ಮುಕ್ತ ಅವಕಾಶ ಕೊಡುತ್ತಾ, ಚರ್ಚೆಯಲ್ಲಿ ಭಾಗವಹಿಸುತ್ತಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದರು. ವರಖೇಡಿ ಸಂಘಟನಾ ಚತುರ, ಧೈರ್ಯವಂತ, ಅಂಜಿಕೆ ಇಲ್ಲದೆ ಮನದ ಭಾವನೆಗಳನ್ನು ವಿಮರ್ಶೆಗೆ ಒಡ್ಡಿಕೊಳ್ಳುವ ಹುಡುಗ ಮಾತ್ರವಲ್ಲ ಶಾಸ್ತ್ರಾಧ್ಯಯನದ ಜೊತೆ ಲೌಕಿಕ ಶಿಕ್ಷಣವನ್ನು ಜೊತೆಯಾಗಿ ಓದಿ ಎಂಎ ಪದವಿ ಪಡೆದವರು.

 ಈತನಲ್ಲಿ ವಿಶ್ವೇಶತೀರ್ಥರಿಗೆ ವಿಶೇಷ ಒಲವು. ಆತನ ಚಾಣಾಕ್ಷತೆ,ಕಲಿಯುವ ಹಂಬಲ, ಸೂಕ್ಷ್ಮಮತಿತ್ವ, ನಿಷ್ಠೆ, ನಿಯತ್ತು,ಗುರು ಭಕ್ತಿ ಎಲ್ಲವೂ ಎಲ್ಲರನ್ನೂ ಗೆಲ್ಲುವಂತಹ ವ್ಯಕ್ತಿತ್ವ ಕಂಡು ಭವಿಷ್ಯದ ಬಗೆಗೆ ಭರವಸೆ ಇಟ್ಟುಕೊಂಡಿದ್ದರು. ಗುರುಗಳು ದೇಶದಾದ್ಯಂತ ಸಂಚಾರ ಕಾಲದಲ್ಲೂ ಕರೆದೊಯ್ಯುತ್ತಿದ್ದರು.ವಿಶೇಷ ಜವಾಬ್ದಾರಿಯನ್ನು ಹೆಗಲೇರಿಸಿದರು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದನು. ಸಮಯ ಪಾಲನೆ -ಸಮಯ ಪ್ರಜ್ಞೆ - ಲೆಕ್ಕಾಚಾರಗಳು ನಿಖರವಾಗಿರುತ್ತಿದ್ದವು. ವಿದ್ಯಾಪೀಠದ ಅತ್ಯುನ್ನತ ಶಿಕ್ಷಣ ಸುಧಾ ಪಾಠವನ್ನು ಅತ್ಯುತ್ತಮ ರೀತಿಯಲ್ಲಿ ಪೂರೈಸಿದನು. ಒಂದಷ್ಟು ಕಾಲ ಅಲ್ಲೇ ಪ್ರಾಧ್ಯಾಪಕನಾಗಿಯೂ ಸೇವೆ ಸಲ್ಲಿಸಿದರು. 

 ಅಂದಿನ ದಿನಗಳಲ್ಲಿ ಕಂಪ್ಯೂಟರ್ ಶಿಕ್ಷಣ ಜ್ಞಾನ ಲೋಕದಲ್ಲಿ ಸಂಚಲನ ಮೂಡಿಸಿತ್ತು. ಅದರ ಜ್ಞಾನ ಅನಿವಾರ್ಯವಾಗಿತ್ತು. ತನ್ನ ಪಾಂಡಿತ್ಯಕ್ಕೆ ಅದು ಶಿರೋಭೂಷಣವಾಗಬಲ್ಲದೆಂದು ಹೈದರಾಬಾದಿಗೆ ಗೆಳೆಯರ ಜೊತೆ ತೆರಳಿ, ವಿಶೇಷ ತರಬೇತಿ ಪಡೆದು ಸಂಶೋಧನೆಗೆ ತೊಡಗಿದರು. ಇದು ಅವರ ಬದುಕಿಗೆ ತಿರುವು ನೀಡಿತು. ಮನೆಯಲ್ಲೇ ಉಳಿದು ಕುಟುಂಬ ನಡೆಸಬೇಕೆಂಬ ಒತ್ತಡವು ಅಪ್ಪ ಅಮ್ಮನದಾಗಿತ್ತು. ಅಪ್ಪ ಭಾರತ್ ಸಂಚಾರ ನಿಗಮದ ಉದ್ಯೋಗಿ. ನಿವೃತ್ತಿಯ ಅಂಚಿನಲ್ಲಿದ್ದರು. ಮಧ್ಯಮ ವರ್ಗದ ಆಚಾರವಂತ ಕುಟುಂಬ ಅವರದು. ಹೈದರಾಬಾದ್ ನಲ್ಲಿ ಸಂಶೋಧನಾ ಕಾರ್ಯ ಅಂತಿಮ ಹಂತಕ್ಕೆ ಬರುತ್ತಿದ್ದಂತೆ ವಿದ್ಯಾಪೀಠ ಮತ್ತೆ ಅವರನ್ನು ಕೈಬೀಸಿ ಕರೆಯಿತು. ಅನುದಾನ ಸಹಿತ ಅಧ್ಯಾಪಕ ಹುದ್ದೆ ಇವರ ಪಾಲಿಗೆ ಒದಗಿ ಬಂತು. ಸುಮಾರು ಎರಡು ವರ್ಷ ದಾಟುತ್ತಿದ್ದಂತೆ ತಿರುಪತಿ ವಿಶ್ವವಿದ್ಯಾನಿಲಯದಲ್ಲಿ ಅಸಿಸ್ಟೆಂಟ್ ಕಂಟ್ರೋಲರ್ ಆಫ್ ಎಕ್ಸಾಮಿನೇಷನ್ ಹುದ್ದೆಗೆ ಕಂಪ್ಯೂಟರ್ ತಜ್ಞರು ಬೇಕೆಂದು ಗುರು ಪ್ರಹ್ಲಾದಾಚಾರ್ಯರಿಂದ ಕರೆ ಬಂತು. ಅದು ಹಲವಾರು ಕಾಲೇಜುಗಳ ಪರೀಕ್ಷಾಂಗ ವಿಭಾಗದ ವಿಶೇಷ ಜವಾಬ್ದಾರಿ ಆಗಿತ್ತು. ಇದರಿಂದ ಆಡಳಿತಾತ್ಮಕ ಅನುಭವಗಳಾದ ಸಂಪರ್ಕ - ಸಂಬಂಧ -ಸಂವಹನ- ಸಂಚಾರ -ಸಂಘಟನೆ ಎಲ್ಲವೂ ಮಿಳಿತವಾಗಿದ್ದ ಉದ್ಯೋಗ ಅದು.ಉತ್ಸಾಹದ ಬುಗ್ಗೆಯಂತಿದ್ದ ವರಖೇಡಿಯವರಿಗೆ  ಪ್ರತಿಭೆ ಪ್ರಕಾಶಗೊಳ್ಳಲು ಅತ್ಯಂತ ಪ್ರಶಸ್ತ ತಾಣವಾಯಿತು. ತಿರುಪತಿ ವಿಶ್ವವಿದ್ಯಾನಿಲಯದ ವಿಶೇಷ ದುಡಿಮೆಯಿಂದಾಗಿ ಸಂಸ್ಕೃತ ವಿಭಾಗದ ಮತ್ತೊಂದು ಶಾಖೆ ತೆರೆಯಲ್ಪಟ್ಟಿತು. ಅದರಲ್ಲಿ ಪ್ರಾಧ್ಯಾಪಕರಾದರು. ವಾಲ್ಮೀಕಿ ರಾಮಾಯಣ- ಪುರಾಣ ಗ್ರಂಥಗಳನ್ನು ಇಂಟರ್ನೆಟ್ ನಲ್ಲಿ ದಾಖಲಿಸುವಂತಹ ಕೆಲಸ ಕಾರ್ಯಗಳು ತನ್ನ ಬಳಗದೊಂದಿಗೆ ನಡೆಸುವ ಅಪೂರ್ವ ಅವಕಾಶ ಲಭಿಸಿತು. ಸುಮಾರು 2007 ರವರೆಗೆ ಅಧ್ಯಯನ - ಅಧ್ಯಾಪನ - ಆಡಳಿತ -ಸಂಶೋಧನೆ ಎಲ್ಲಾ ಪಟ್ಟುಗಳ ಅರಿತು - ಬೆರೆತು ವಿಶ್ವವಿದ್ಯಾನಿಲಯ ಮುನ್ನಡೆಸಬಲ್ಲ ಸಾಮರ್ಥ್ಯ ಮೈಗೂಡಿಸಿಕೊಂಡ ದಿಟ್ಟೆದೆಯ ಯುವಕ ಈತ. ಯುವ ಸಾಧಕರಿಗೆ ರಾಷ್ಟ್ರಪತಿಗಳು ನೀಡುವ ಬಾದರಾಯಣ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವರು. ಇವರ ನಿಷ್ಠಾವಂತ ಸೇವೆಗೆ ಸಿಕ್ಕ ಪುಣ್ಯಫಲ.

 2008ರಲ್ಲಿ ಉಸ್ಮಾನಿಯ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತ ಅಕಾಡೆಮಿಯ ನಿರ್ದೇಶಕ ಹುದ್ದೆಗೆ ಕರೆ ಬಂತು. ಅನುದಾನವಿಲ್ಲ - ಕಟ್ಟಡವಿಲ್ಲ - ಖಾಲಿ ಹುದ್ದೆಗಳದೇ ರಾಶಿ, ಬಂದಿರುವ ಅನುದಾನವನ್ನು ಸದುಪಯೋಗ ಪಡಿಸದೆ ಅಭಿವೃದ್ಧಿ ಕಾರ್ಯಗಳೆಲ್ಲ ಕುಂಠಿತವಾಗಿದ್ದ ಅದನ್ನು ಪುನರುತ್ಥಾನಗೊಳಿಸಿ ಕಾಯಕಲ್ಪ ನೀಡಬೇಕಾದ ಸವಾಲು ಅದಾಗಿತ್ತು. ಎದೆಗುಂದದೆ ಕಟ್ಟಿ ಬೆಳೆಸಬಲ್ಲ ಛಾತಿ ತೋರಿದರು. ಛಾಪು ಮೂಡಿಸಿದರು. ರಾಷ್ಟ್ರಮಟ್ಟದ ಒಡನಾಟದಿಂದ ನೋಡ ನೋಡುತ್ತಿದ್ದಂತೆ ಅಚ್ಚರಿ ಪಡುವಂತೆ ವೈಭವ ಕಂಡಿತು. ಇವೆಲ್ಲ ಕಂಡು ಗುರುಗಳು  ಸಂಭ್ರಮಿಸಿದರು. ನೀನು ಯಾವಾಗ ಡೈರೆಕ್ಟರ್ ಆಗುವೆ ? ಉಪಕುಲಪತಿ ಆಗುವೆ ? ಎಂಬ ಗುರಿತೋರುವ ನುಡಿಗಳನ್ನಾಡುತ್ತಾ ಹರಸುತ್ತಿದ್ದ ಪೂಜ್ಯರ ಆಶಯ ನುಡಿಗಳೇ ನನ್ನ ವಿಜಯದ ಮೆಟ್ಟಿಲುಗಳಾದವು ಎನ್ನುವರು. ನಿರ್ಮಲ ಚಿತ್ತದಿಂದ ಗುರುಗಳಾಡಿದ ಅನುಗ್ರಹದ ನುಡಿ ಬೆಂಗಾವಲಾಯಿತು ಎನ್ನುತ್ತಾ ವರಖೇಡಿ ಭಾವುಕರಾಗಿ ಬಿಡುವರು.

 ಬದುಕಿನ ಎಲ್ಲಾ ಕ್ಷಣಗಳು ಯೋಚನೆ ಮೀರಿ ಎತ್ತರಕ್ಕೆರುತ್ತಿದ್ದಂತೆ ವಿಧಿಯ ಆಟ ಬೇರೆಯೇ ಆಗಿ ಹೋಯಿತು. ಅದೊಂದು ದಿನ ಹೈದರಾಬಾದ್ ನಗರದಲ್ಲಿ ತನ್ನ ಪತ್ನಿ ಸಮನಾ ಹಾಗೂ ಮೂವರು ಹೆಣ್ಣು ಮಕ್ಕಳ ಜೊತೆ ಕಾರಲ್ಲಿ ಸಾಗುತ್ತಿದ್ದಂತೆ ಜವರಾಯನ ಭೀಕರ ಹೊಡೆತದಿಂದ ಪತ್ನಿ ಹಾಗೂ ಇಬ್ಬರು ಮಕ್ಕಳಾದ ಶ್ರದ್ಧಾ -ಪ್ರಜ್ಞ ಇವರನ್ನು ಮೃತ್ಯು  ಕರೆಯಿತು. ಸುಖ ಸಂಸಾರದ ನೆನಪಿಗಾಗಿ ಮೇಧಾ ಎಂಬ ಮಗಳನ್ನು ಕೈಗಿಟ್ಟು ಹೋದನು ಯಮಧರ್ಮರಾಯ. ನನ್ನೊಬ್ಬನನ್ನೇ ಉಳಿಸಿ ಕೊರಗುವಂತೆ ಮಾಡದೆ ಸೋಲಲ್ಲು ಗೆಲುವನ್ನೇ ಕಂಡೆ ನೆನ್ನುವರು. ಕೇಳಿ ದಂಗಾಗಿ ಹೋದ ವಿಶ್ವೇಶತೀರ್ಥರು ಬೆಂಗಳೂರಿನಿಂದ ಹಾರಿ ವರಖೇಡಿ ಅವರ ಬಳಿ ಬಂದರು. ದುಃಖದಿಂದ ಬಾಡಿ ಹೋಗಿದ್ದ ಶಿಷ್ಯನ ಮುಂದೆ ಕುಳಿತು ನೀನು ಹಿಂದಿನಂತೆಯೇ ಉತ್ಸಾಹದಿಂದ ಇರಬೇಕು, ಅದನ್ನು ನಾನು ಕಾಣಬೇಕು. ಶ್ರೀ ಕೃಷ್ಣ ಮಂತ್ರ ಜಪಿಸು ಎಂದಷ್ಟೇ ಹೇಳಿ ಹೊರಟುಬಿಟ್ಟರಂತೆ. ನನ್ನ ಭಾಗ್ಯಾಧಿಪತಿ ಗುರುವಿನ ಅದೊಂದೇ ಮಾತು,ಮೃತ್ಯು ಕೂಪದಿಂದ ನನ್ನನ್ನು ಮೇಲೇರಿಸಿತು ಎನ್ನುವರು. 

 ಮಗಳು ಮೇಧಾ ಅಂತರಾಷ್ಟ್ರೀಯ ಭರತನಾಟ್ಯ ಕಲಾವಿದೆ. ಅಳಿಯ ಪೂರ್ಣಪ್ರಜ್ಞ ಖ್ಯಾತ ಪ್ರಭಾತ್ ಕಲಾವಿದರು. ಬೆಂಗಳೂರಿನ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ದುಡಿಯುತ್ತಿರುವರು.

 ಬದುಕೇ ಮುಗಿದು ಹೋಯಿತು ಎಂದಿದ್ದಾಗ ಗುರುಗಳು ಮತ್ತೆ ಬಳಿ ಕರೆದರು. ಕೈಕಾಲುಗಳ ಗಾಯಗಳಿಗೆ ಹಾಕಿದ್ದ ಬ್ಯಾಂಡೇಜ್ ನೋಡುತ್ತಾ ಊಟಕ್ಕೆ ಏನು ಮಾಡುವೆ, ಬೆಂಗಳೂರು ವಿಶ್ವವಿದ್ಯಾನಿಲಯಕ್ಕೆ ಬರುವಂತೆ ಮಾಡುವೆನೆಂದರು. ಒಬ್ಬ ಸನ್ಯಾಸಿಯ ಮಾತೃ ಹೃದಯದ ಕಾರುಣ್ಯಕ್ಕೆ ಅವರಿಗೆ ಅವರೇ ಸಾಟಿ. ಬೆಂಗಳೂರಿಗೆ ಬರುವಂತಾಯಿತು . ಅಲ್ಲಿ ರಾತ್ರಿ ಗಂಟೆ ಎಂಟರವರೆಗೂ ದುಡಿದರು ಮುಗಿಯದ ಅಷ್ಟು ಕೆಲಸಗಳ ರಾಶಿ ನನ್ನ ನೋವೆಲ್ಲವನ್ನು ಮರೆಸಿತು. ರಾಜ್ಯದ ಅನೇಕ ಸಂಸ್ಕೃತ ಪಾಠ ಶಾಲೆಗಳು - ಅಧ್ಯಾಪಕರ ಸಮಸ್ಯೆಗಳು - ಬಡ್ತಿ - ನಿವೃತ್ತಿ ಸಮಸ್ಯೆಗಳು ಇವೆಲ್ಲವನ್ನು  ಪರಿಹರಿಸುವ ಅವಕಾಶ ಸಿಕ್ಕಿತು. ವಿಶ್ವವಿದ್ಯಾನಿಲಯವನ್ನು ಜನಸ್ನೇಹಿಯನ್ನಾಗಿ ಪುನರ್ ರೂಪಿಸುವ ಮಹತ್ತರ ಜವಾಬ್ದಾರಿ ಆನಂದ ನೀಡಿತು ಎನ್ನುವರು. 

 ಈ ಜಗತ್ತಿನಲ್ಲಿ ಕೆಲವರು ಕಟ್ಟುವವರಾದರೆ ಕೆಲವರು ಮುರಿಯುವವರು. ನೀನು ಯಾವುದನ್ನು ಮನಸ್ಸಿನಲ್ಲಿ ನಿರಂತರ ಯೋಚಿಸುತ್ತಿ ಅದೇ ಆಗುವೆ  ಎಂಬ ಒಂದು ಮಾತಿದೆ. ಬೆಳೆಯುವ ಯೋಗ ಕೂಡಿ ಬಂದಾಗ ದೇವನು ಹೇಳದೆ ಅವಕಾಶಗಳನ್ನು ಮುಂದಿಡುವನಂತೆ. ಯಶಸ್ಸು ಗುರಿಯಲ್ಲ. ಸುಧೀರ್ಘ ಪಯಣ. ಯಶಸ್ಸು ನಮ್ಮನ್ನು ಜಗತ್ತಿಗೆ ಪರಿಚಯಿಸಿದರೆ, ಸೋಲು ನಮಗೆ ಜಗತ್ತನ್ನು ಪರಿಚಯಿಸುತ್ತದೆ. ಕಷ್ಟಗಳು - ಕೊರತೆಗಳು ಇವರ ಯಶಸ್ಸಿನ ಮೆಟ್ಟಿಲುಗಳಾದವು. ತನ್ನತನವನ್ನೇ ಕಳೆದುಕೊಂಡು, ಏನು ಹೊಸತನ್ನು ಸಮಾಜಕ್ಕೆ ನೀಡಬೇಕೋ ಅದನ್ನು ನೀಡದೆ, ಸೊರಗುವ ವಿಶ್ವವಿದ್ಯಾನಿಲಯಗಳಲ್ಲಿ ಸೃಷ್ಟಿ ಕಾರ್ಯ ನಡೆಸಿ ವರಖೇಡಿಯವರ ಪ್ರತಿಭೆ ಅನಾವರಣ ಗೊಳಿಸಿ ಸಾಕ್ಷಿಯಾದವು. ತನಗೆ ಒಲಿದು ಬಂದ ಪ್ರೊಫೆಸರ್, ರಿಜಿಸ್ಟ್ರಾರ್, ಡೈರೆಕ್ಟರ್, ಡೀನ್, ಉಪಕುಲಪತಿ ಇನ್ನೂ ಅನೇಕ ಜವಾಬ್ದಾರಿ ಸ್ಥಾನಗಳ ಅನುಭವಗಳ ಧಾರೆಯನ್ನು ಅಂತರಂಗದಲ್ಲಿ ಸುರಿದವು. ತಿರುಪತಿ- ಉಸ್ಮಾನಿಯ - ಬೆಂಗಳೂರು ವಿಶ್ವವಿದ್ಯಾನಿಲಯಗಳಲ್ಲಿ ಮೈಬಗ್ಗಿಸಿ ದುಡಿದ ಆಡಳಿತಾತ್ಮಕ ಹಾಗೂ ಲೋಕಾನುಭವಗಳು ಅರಿವಿಲ್ಲದಂತೆ ವ್ಯಕ್ತಿತ್ವಕ್ಕೆ ಹೊಳಪು ನೀಡಿದವು. ಹೋದಲ್ಲೆಲ್ಲ ಪ್ರಾಂಜಲ ಮನದಿಂದ ದುಡಿದ ಫಲವಾಗಿ ಶೈಕ್ಷಣಿಕ ಲೋಕದಲ್ಲಿ ಧ್ರುವತಾರೆಯಂತೆ ಮೆರೆದರು. 

 ಇವೆಲ್ಲದರ ಫಲವಾಗಿ ಒದಗಿ ಬಂದ ನಾಗಪುರದ ಕಾಳಿದಾಸ ವಿಶ್ವವಿದ್ಯಾನಿಲಯವನ್ನು ದೇಶವೇ ಕಣ್ಣರಳಿಸಿ ನೋಡುವಂತೆ ಕಟ್ಟಿ ಬೆಳೆಸಿದರು. ಆರ್ಥಿಕ ಕೊರತೆಗಳು ನಿತ್ಯ ಪಾಡಾಗಿದ್ದರೆ ಇದು ಆರ್ಥಿಕ ಭದ್ರತೆಯ ಮಟ್ಟಕ್ಕೇರಿತು. ಅಲ್ಲಿಂದ ಗೊಂಡ್ವಾನ ವಿಶ್ವವಿದ್ಯಾನಿಲಯ, ಕಾಲ್ವಿಡಾಸ್ ಸಂಸ್ಕೃತ ವಿಶ್ವವಿದ್ಯಾನಿಲಯ, ದೆಹಲಿ ವಿಶ್ವವಿದ್ಯಾನಿಲಯಗಳು ಇವರ ಶಕ್ತಿ ಸ್ವರೂಪಿ ಸೇವೆಯನ್ನು ಅಪೇಕ್ಷಿಸಿದವು. ಒಂದು ಮಾತಿದೆ - ಅತಿಯಾದ ಕಾಯುವಿಕೆ ಒಮ್ಮೊಮ್ಮೆ ನಮ್ಮ ತನವನ್ನು ಮರೆಮಾಚುವುದಂತೆ. ನಮ್ಮಲ್ಲಿನ ಹುರುಪು, ಶಕ್ತಿ, ಚೈತನ್ಯ ಮುಗಿದ ನಂತರ ಪಡೆಯುವ ಪದವಿ -ಹುದ್ದೆ - ಜವಾಬ್ದಾರಿ ಎಲ್ಲವೂ ನಮ್ಮೊಳಗಿಹ ನಮ್ಮನ್ನು ಕೊಂದುಬಿಡುವುದಂತೆ. ಸಕಾಲಕ್ಕೆ ಸಿಗದ ಯಾವ ವಸ್ತುವೇ ಇರಲಿ ಅದು ಪರಿಪೂರ್ಣ ಸಂತೋಷ ನೀಡದು. ವರಖೇಡಿಯವರ ಪ್ರತಿಭೆಗೆ ಗುರು ಅನುಗ್ರಹ ದೇವಪ್ರಸಾದವಾಯಿತು. ಹುದ್ದೆ - ಪದವಿಗಳು ತಾನಾಗಿ ಒಲಿದು ಬಂದವು. ವಿದ್ಯೆ ಪಡೆದವರಿಗೆಲ್ಲ ಅದರ ಫಲ ಸಿಗದು. ದೈವಾನುಗ್ರಹ ಮಾತ್ರ ಒದಗಿಸಿ ಬಲ್ಲುದೆನ್ನುವರು.

 ವಿಗ್ರಹ ಕೊಂಡುಕೊಳ್ಳಬಹುದು, ಅನುಗ್ರಹ ಕೊಂಡುಕೊಳ್ಳಲು ಅಸಾಧ್ಯ. ಪೇಜಾವರರೊಬ್ಬ ಮಹಾತ್ಮ ಸಂತ.ದೈವೀ ಪುರುಷ. ಹೃದಯ ತುಂಬಿ ಅನುಗ್ರಹಿಸಿದರೆಂದರೆ ನಡೆದೇ ನಡೆಯುವುದು. ಬಾಲ್ಯದಲ್ಲೇ ಅವನ ಜವಾಬ್ದಾರಿ ನನಗಿರಲಿ ಎಂದು ವಚನವಿತ್ತರು. ಅಂತೆಯೇ ನಡೆದು ತೋರಿದರು. ಅವರ ಆಶಯ ನುಡಿಗಳೇ ದಿಕ್ಸೂಚಿಯಾದವು. ಬದುಕಿನ ಭಾಗವಾಗಿ ಸುಖ ದುಃಖಗಳ ಬಾಗಿಯಾಗಿ  ನಿಂತರು. 

 ಇರಬೇಕು, ಇರುವಂತೆ ತೊರೆದು ಸಾವಿರ ಚಿಂತೆ ಎಂಬಂತೆ ಜೀವಿಸಿದರು ವರಖೇಡಿ.ಜೀವನ ಜಂಜಾಟಗಳಿಗೆ ಕಹಿಯಾಗಲಿಲ್ಲ. ತನ್ನ ಸುತ್ತಲ ಕಪಟ,ಸ್ವಾರ್ಥ,ದುರಾಸೆಗಳಿಗೆ ರೋಸಿ ಸಿನಿಕನಾಗಲಿಲ್ಲ. ಇಂಥ ಪರಿಸರದಲ್ಲೂ ವಿರಳವಾಗಿ ಉಳಿದ ಚೆಲುವು- ಗೆಲುವು, ಪ್ರೀತಿ - ಅಂತ:ಕರಣಗಳನ್ನು ತನ್ನದಾಗಿಸಿಕೊಂಡರು. ತನ್ನ ಪರಿವಾರದ ಮನುಷ್ಯರ ಘನತೆಗಳನ್ನು ಗುರುತಿಸಿ ಕಠೋರ ನಿರ್ಧಾರಗಳನ್ನು ಮೃದು ಮಧುರ ಸನ್ನಡತೆಗಳಿಂದ ಗೆದ್ದು ಮೇಲೆದ್ದು  ಬಂದರು. ಬೆಳಕಿಲ್ಲದ ದಾರಿಯಲ್ಲೂ ಕನಸು ಕಂಡು ನಡೆದರು. ಮಾತಿಗೆ ಮಮತೆ ಘನತೆ ಇರಿಸಿಕೊಂಡರು.ಅಧಿಕಾರಕ್ಕೆ ಅನುಕಂಪ ಬೆರೆಸಿದರು. ಆಧ್ಯಾತ್ಮಿಕತೆಗೆ ಆಧುನಿಕತೆ ಬೆರೆಸಿದರು. ಬಿಟ್ಟು ಹೋಗುವುದಕ್ಕಿಂತ ಕೊಟ್ಟು ಹೋಗುವುದು ಲೇಸೆಂದು ತಿಳಿದರು. ಯಾರೊಂದಿಗೆ ಜ್ಞಾನಿಗಳಿರುವರೋ ಅಂತವರ ಮಣಿಸಲು ಸಾಧ್ಯವಿಲ್ಲವಂತೆ. ನನ್ನಿಂದಲೇ ಎಲ್ಲವೂ ಎಂಬ ಭಾವ ಇವರಿಗಿಲ್ಲ.

 ಇಂದು ದೇಶದೆಲ್ಲೆಡೆ ಸಂಚರಿಸುತ್ತಾ ವಿಶ್ವ ಪ್ರಸನ್ನ ತೀರ್ಥರು ಸಮಾಜಮುಖಿ ಸೇವೆಯಲ್ಲಿ ತೊಡಗಿರುವರು. ಪೂಜ್ಯರಿಂದ ಪಾಠ ಕೇಳಿದ ದಿನಗಳು, ಅವರ ಮಾರ್ಗದರ್ಶನ ನನ್ನ ಬದುಕಿಗೆ ದಾರಿ ದೀಪವಾಗಿದೆ. ವಿದ್ಯಾಪೀಠದ ಗುರುಗಳಾದ  ಹರಿದಾಸ್ ಭಟ್, ಗುರು ವೆಂಕಟಾಚಾರ್ ( ಡಾ ಸುವಿದ್ಯೇಂದ್ರ ತೀರ್ಥರು ) ಹಾಗೂ ಎಲ್ಲಾ ಗುರುಗಳನ್ನು ಮರೆಯಲು ಸಾಧ್ಯವಿಲ್ಲ ಎನ್ನುತ್ತಾರೆ.

 ಇವರೊಬ್ಬ ಆಧ್ಯಾತ್ಮಿಕ  ಹಾಗೂ ಆಧುನಿಕ ಶಿಕ್ಷಣಗಳ ಸಂಗಮ. ಶಾಸ್ತ್ರಾಧ್ಯಯನವು ತಿಳಿದಿದೆ. ಕಂಪ್ಯೂಟೇಶನಲ್ ಭಾಷಾ ಕ್ಷೇತ್ರದ ಪ್ರಖ್ಯಾತ ಶಿಕ್ಷಣ ಶಾಸ್ತ್ರಜ್ಞನು ಹೌದು. ಬೋಧನೆಯು - ಸಂಶೋಧನೆಯು ತಿಳಿದಿದೆ. ಕಂಪ್ಯೂಟರ್ ವಿಜ್ಞಾನ,ಕೃತಕ ಬುದ್ಧಿಮತ್ತೆ, ಪಾಶ್ಚ್ಯಾತ್ಯ ತರ್ಕ, ಭಾಷಾ ಮತ್ತು ಭಾರತೀಯ ಶಾಸ್ತ್ರಗಳು ತಿಳಿದ ಜ್ಞಾನ ಸಾಗರ ಇವರು. 

 ಪಂಡಿತೋತ್ತಮರಿಗೇ ಮೀಸಲಾದ ಅನೇಕರು ಕಂಡು ಕೇಳರಿಯದ  ಪ್ರಶಸ್ತಿ ಪುರಸ್ಕಾರಗಳನ್ನು ರಾಷ್ಟ್ರಪತಿಗಳಿಂದ ಪಡೆದುಕೊಂಡ ಮಹಾನುಭಾವರು. ಬಾದರಾಯಣ ವ್ಯಾಸ ಸನ್ಮಾನ, ಡಾ ಗೋಸ್ವಾಮಿ ಗಿರ್ದಾರಿಲಾಲ್  ಸಂಸ್ಕೃತ ಪುರಸ್ಕಾರ, ಅಟಲ್ ರತ್ನ, ಹಲವು ವಿಶ್ವವಿದ್ಯಾನಿಲಯಗಳ ಗೌರವ ಪುರಸ್ಕಾರ,ಪೇಜಾವರ - ಪಲಿಮಾರು - ಪುತ್ತಿಗೆ - ಉತ್ತರಾದಿಮಠ ಇನ್ನು ಅನೇಕ ಮಠಾಧಿಪತಿಗಳ ಪಂಡಿತ ಸನ್ಮಾನಗಳು ದೊರೆತಿವೆ. ಆರು ವಿಶ್ವವಿದ್ಯಾನಿಲಯಗಳ ಗೌರವ ಡಿ.ಲಿಟ್, ವಿದ್ಯಾ ವಾಚಸ್ವತಿ ಬಿರುದು ಇವರ ಪ್ರತಿಭೆಗೆ ಸಾಕ್ಷಿಯಾಗಿದೆ. 16 ಪುಸ್ತಕಗಳು, ಸಂಸ್ಕೃತ ತತ್ವಶಾಸ್ತ್ರ, ನ್ಯಾಯ ಭಾಷಾ ಶಾಸ್ತ್ರ,ತರ್ಕ ಇವುಗಳಿಗೆ ನೂರಾರು ಕೃತಿಗಳು, ಹಲವಾರು ಸಂಶೋಧನಾ ಪ್ರಬಂಧಗಳನ್ನು ಬರೆದಿರುವರು. 25ಕ್ಕೂ ಹೆಚ್ಚು ವಿದ್ವಾಂಸರಿಗೆ ಸಂಶೋಧನಾ ಮಾರ್ಗದರ್ಶಕರು, ರಾಷ್ಟ್ರದ ಸಂಪನ್ಮೂಲ ವ್ಯಕ್ತಿಗಳಾಗಿರುವರು. 110ಕ್ಕೂ ಹೆಚ್ಚು ರಾಷ್ಟ್ರೀಯ ಸಮಿತಿಗಳು, ನೀತಿ ರಚನಾ ಸಂಸ್ಥೆಗಳ ಅಧ್ಯಕ್ಷರು ಹಾಗೂ ಸದಸ್ಯರಾಗಿರುವರು. ಇವರ ಅಗಾಧ ಪಾಂಡಿತ್ಯಕ್ಕೆ ತಲೆಬಾಗಲೇಬೇಕು. ಇವರ ಅಗಾಧ ಜ್ಞಾನ ಸಾಗರದಿಂದ ಕೆಲವು ಮುತ್ತುಗಳನ್ನಷ್ಟೇ ಪೋಣಿಸಲು ನಾನು ಸಮರ್ಥನಾಗಿರುವೆ. ಮಗನ ಸಾಧನೆಗಳ ಕಂಡು ಸಂಭ್ರಮಿಸುವ ಮಾತಾಪಿತರು ನಿಜವಾಗಿಯೂ ಪುಣ್ಯವಂತರು.

 ನಮ್ಮಿಬ್ಬರ ನಂಟು- ಗಂಟು ಬೀಳಲು ಕಾರಣ ವಿಶ್ವೇಶತೀರ್ಥರು ಹಾಗೂ ಶ್ರೀಯುತರ ಸಹಪಾಠಿ, ವಿದ್ಯಾಪೀಠ ವಾಸದ ಕೊಠಡಿಯ ಜೊತೆಗಾರ ಪ್ರಕಾಶ ಆಚಾರ್ಯ ರಾಮಕುಂಜ ಮತ್ತು ಡಾ. ಡಿ ಪಿ ಅನಂತ ಬೆಂಗಳೂರು. ಗುರುಗಳ ಹುಟ್ಟೂರ ಅಭಿಮಾನಿ ಆಗಿರುವ ಶ್ರೀನಿವಾಸ ವರಖೇಡಿ ಒಬ್ಬ ಶ್ರೇಷ್ಠ ಮಾನವತಾವಾದಿ.

 *ಟಿ ನಾರಾಯಣ ಭಟ್ ರಾಮಕುಂಜ*.
 *ರಾಜ್ಯ- ರಾಷ್ಟ್ರ  ಪ್ರಶಸ್ತಿ ಪುರಸ್ಕೃತ ಶಿಕ್ಷಕರು ಹಾಗೂ ಲೇಖಕರು.*

Post a Comment

أحدث أقدم