ಕುಕ್ಕೆ ಸುಬ್ರಹ್ಮಣ್ಯ, ಆ.6:ಶ್ರದ್ಧಾ ಹಾಗೂ ಸಾಂಪ್ರದಾಯಿಕ ಶಕ್ತಿಯ ಕೇಂದ್ರವಾಗಿ ಬೆಳೆದಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಧಾರ್ಮಿಕ ಮತ್ತು ಮಾನವೀಯ ಸೇವಾ ಯೋಜನೆಗೆ ಶ್ರೀಕುಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಅಸ್ತಿತ್ವ ನೀಡುತ್ತಿದೆ. ದೇವಸ್ಥಾನದ ಅಧ್ಯಕ್ಷರಾದ ಹರೀಶ್ ಇಂಜಾಡಿ ಅವರ ನೇತೃತ್ವದಲ್ಲಿ ಶೀಘ್ರದಲ್ಲೇ ವಿನೂತನ ಶೈಲಿಯ ಗೋಶಾಲೆ ನಿರ್ಮಾಣಗೊಳ್ಳಲಿದೆ.
ಗ್ರಾಮಸಭೆಯಲ್ಲಿ ಈ ಬಗ್ಗೆ ಮೊದಲಬಾರಿಗೆ ಸುಳಿವು ನೀಡಿದ ಅಧ್ಯಕ್ಷರು, "ಈ ಯೋಜನೆಯ ಉದ್ದೇಶ ದೇವಸ್ಥಾನದ ಗೋಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವುದು ಮಾತ್ರವಲ್ಲ, ಆ ಪ್ರದೇಶದ ವಾರಿಸುದಾರರಿಲ್ಲದ ಬೀಡಾಡಿ ಹೋರಿಗಳಿಗೆ ಪುನರ್ವಸತಿ ಕಲ್ಪಿಸುವುದು ಕೂಡ ಆಗಿದೆ" ಎಂದು ತಿಳಿಸಿದರು.
ವ್ಯವಸ್ಥಾಪನ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗಿದ್ದು, ತಾತ್ಕಾಲಿಕವಾಗಿ ವಲ್ಲೀಶ ಸಭಾಭವನದ ಎದುರು ಇರುವ ನಕ್ಷತ್ರವನ ಎಂಬ ಸ್ಥಳದಲ್ಲಿ ಪ್ರಾಥಮಿಕ ಗೋಶಾಲೆ ನಿರ್ಮಾಣ ಮಾಡಿ, ಸುಮಾರು 50 ರಿಂದ 60 ಗೋಗಳನ್ನು ಅಲ್ಲಿ ಆಶ್ರಯ ನೀಡಲು ತೀರ್ಮಾನಿಸಲಾಗಿದೆ.
ಈ ಯೋಜನೆಯ ವಿಶೇಷ ಅಂಶವೆಂದರೆ, ಇದು ಯಾವುದೇ ಒಂದು ದಿನದ ಆರಂಭವಲ್ಲ. ದೇವಾಲಯದ ಪಾರಂಪರಿಕ ಆಚರಣೆಯೊಂದಿಗೆ ಹೊಂದಿಕೆಯಾಗುವಂತೆ, 'ಲಕ್ಷಕ್ಕೆ ದೀಪಕ್ಕಿಂತ ಮುಂಚಿನ ಹುಣ್ಣಿಮೆ ದಿನ', ಅದೇ ಅಂದರೆ ಅನಾದಿಕಾಲದಿಂದಲೂ ನಡೆಯುವ 'ಕುಲ್ಕುಂದ ಜಾನುವಾರು ಜಾತ್ರೆ' ದಿನದಂದು ಹೊಸ ಗೋಶಾಲೆ ಉದ್ಘಾಟನೆಯಾಗುವಂತೆ ಗುರಿ ಇಡಲಾಗಿದೆ.
ಇದೇ ಸಂದರ್ಭದಲ್ಲಿ ದೇವಾಲಯದಲ್ಲಿ ಮೊದಲು ಸೇವೆ ಸಲ್ಲಿಸಿದ ಪವಿತ್ರ ಆನೆಯಾದ ಇಂದುಮತಿ ಆನೆಗೆ ಸ್ಮಾರಕ ನಿರ್ಮಿಸುವ ತೀರ್ಮಾನವೂ ಆಗಿದೆ. ಇದು ದೇವಾಲಯದ ಪೂರ್ವಸ್ಮೃತಿಯ ಜೊತೆಗೆ ಪ್ರಾಣಿಗಳ ಮೇಲಿನ ಕೃತಜ್ಞತೆಯೂ ಆಗಿರಲಿದೆ.
ಭವಿಷ್ಯದ ದಿಟ್ಟ ಯೋಜನೆ: ಈಗಾಗಲೇ ಸರಕಾರ ಸುಮಾರು 15 ಎಕ್ರೆ ಜಮೀನನ್ನು ಗೋ ಶಾಲೆ ನಿರ್ಮಾಣ ಮಾಡುವ ಉದ್ದೇಶದಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಂಜೂರು ಮಾಡಿದೆ ಆದರೆ ಅರಣ್ಯ ಇಲಾಖೆಯ ಕೆಲವೊಂದು ಆಕ್ಷೇಪಣೆಯಿಂದ ಹತ್ತಾಂತರ ಇನ್ನೂ ಆಗಿಲ್ಲ, ಈ ಸಮಸ್ಯೆ ಬಗೆಹರಿದಲ್ಲಿ ಸುಬ್ರಹ್ಮಣ್ಯ ದಿಂದ 5 ಕಿಲೋ ಮೀಟರ್ ದೂರದಲ್ಲಿರುವ ಐನೇಕಿದು ಗ್ರಾಮದಲ್ಲಿ ಸುಮಾರು 15 ಎಕರೆ ಪ್ರದೇಶದಲ್ಲಿ
ವಿಶೇಷ ವಿನ್ಯಾಸದ, ವೈಶಾಲ್ಯವಾದ, ಸುಸಜ್ಜಿತ ಸ್ಥಾಯಿ ಗೋಶಾಲೆ ನಿರ್ಮಿಸುವ ಯೋಜನೆಗೆ ಕಾರ್ಯರೂಪ ನೀಡಲಾಗುತ್ತಿದೆ. ಇದು ನಾಡು ಮತ್ತು ಧರ್ಮಕ್ಕೆ ಕೊಡುಗೆ ನೀಡುವ, ಶ್ರದ್ಧಾವಂತ ಭಕ್ತರಿಗೆ ಹಾಗೂ ಗ್ರಾಮೀಣ ಸಮುದಾಯಗಳಿಗೆ ಆಶಾಕಿರಣವಾಗಲಿದೆ.
ಈ ಪ್ರಾರಂಭ ಹಂತದ ಯೋಜನೆಯ ಮೂಲಕ ಕುಕ್ಕೆ ದೇವಾಲಯವು ಧಾರ್ಮಿಕ ಸೇವೆಯೊಂದಿಗೆ ಸಾಮಾಜಿಕ ಜವಾಬ್ದಾರಿಯೂ ಹೊತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ.
إرسال تعليق