ಸುಬ್ರಹ್ಮಣ್ಯ, ಆಗಸ್ಟ್ 6:ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಪ್ರತಿದಿನ ಸಾವಿರಾರು ಭಕ್ತಾದಿಗಳು ಹರಕೆ ಹಾಗೂ ದರ್ಶನಕ್ಕಾಗಿ ಆಗಮಿಸುತ್ತಿದ್ದಾರೆ. ದೇವಸ್ಥಾನದ ವಸತಿಗೃಹಗಳ ಕೊರತೆಯ ಹಿನ್ನೆಲೆಯಲ್ಲಿ ಬಹುತೇಕ ಭಕ್ತರು ಖಾಸಗಿ ವಸತಿಗೃಹಗಳಲ್ಲಿ ತಂಗುವ ಸ್ಥಿತಿಯಲ್ಲಿದ್ದಾರೆ. ಆದರೆ, ಕೆಲ ಅನಧಿಕೃತ ಖಾಸಗಿ ವಸತಿಗೃಹಗಳಲ್ಲಿ ಭಕ್ತರಿಗೆ ಕಿರುಕುಳ, ಅನೌಪಚಾರಿಕ ವರ್ತನೆ ಸೇರಿದಂತೆ ಹಲವಾರು ಸಮಸ್ಯೆಗಳು ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಉಪನಿರೀಕ್ಷಕ ಎಸ್.ಐ. ಕಾರ್ತಿಕ್ ಅವರು ಗಂಭೀರ ಎಚ್ಚರಿಕೆ ನೀಡಿರುವರು.
ಬುಧವಾರ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಖಾಸಗಿ ವಸತಿಗೃಹ ಮಾಲಕರು, ನಿರ್ವಾಹಕರು ಮತ್ತು ಸಹಾಯಕರ ಸಭೆಯಲ್ಲಿ ಮಾತನಾಡಿದ ಅವರು, "ಭಕ್ತಾದಿಗಳ ಸುರಕ್ಷತೆ ನಮಗೆ ಮೊದಲ ಆದ್ಯತೆ. ವ್ಯವಸ್ಥಿತ ಮತ್ತು ಮಾನವೀಯ ಸೇವೆ ಒದಗಿಸುವುದು ಖಾಸಗಿ ವಸತಿಗೃಹಗಳ ಕರ್ತವ್ಯ" ಎಂದು ಹೇಳಿದರು.
ಈ ವೇಳೆ ಮಾಲಕರಿಗೆ ನೀಡಲಾದ ಪ್ರಮುಖ ಸೂಚನೆಗಳು ಈ ಪ್ರಕಾರ:
1. ಭಕ್ತರೊಂದಿಗೆ ಶಿಷ್ಟ, ಸೌಜನ್ಯಪೂರ್ಣ ವರ್ತನೆ ಇರಬೇಕು.
2. ಒಬ್ಬರೇ ಆಗಮಿಸಿದ ಭಕ್ತರ ಸಂಪೂರ್ಣ ಮಾಹಿತಿ ಪಡೆದು ಮಾತ್ರ ಕೊಠಡಿ ನೀಡಬೇಕು.
3. ಅನ್ಯಾಯವಾಗಿ ಹೆಚ್ಚು ಬಾಡಿಗೆ ವಸೂಲಿಸಬಾರದು.
4. ಲೈಸೆನ್ಸ್, ಬಿಲ್ ಪುಸ್ತಕ, ರಿಜಿಸ್ಟರ್ ಪುಸ್ತಕ, ಆಧಾರ್ ಕಾರ್ಡ್, ಸಿಸಿಟಿವಿ ಕ್ಯಾಮೆರಾ ಕಡ್ಡಾಯ.
5. ದಲ್ಲಾಳಿಗಳ ಮೂಲಕ ಕೊಠಡಿ ನೀಡುವ ಕೆಲಸ ನಿಷಿದ್ಧ.
6. ಮಹಿಳಾ ಭಕ್ತರಿಗೆ ಕಿರುಕುಳ ಅಥವಾ ಅಶ್ಲೀಲ ಮೆಸೇಜ್ ಕಳಿಸುವುದು ಕಠಿಣವಾಗಿ ನಿಷೇಧ.
7. ದೇವಸ್ಥಾನದ ವಸತಿಗೃಹದ ಎದುರುಗಡೆ ಖಾಸಗಿ ರೂಂ ಕರೆ ಮಾಡುವುದಿಲ್ಲ.
8. ತಾವು ಹೊಂದಿರುವ ವಸತಿ ಗೃಹದಲ್ಲಿಯೇ ಪಾರ್ಕಿಂಗ್ ವ್ಯವಸ್ಥೆ ಇರಬೇಕು.
9. ಯಾವುದೇ ಸಮಸ್ಯೆ ಉದ್ಭವಿಸಿದರೆ ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು.
10. ಈ ನಿಯಮಗಳನ್ನು ಉಲ್ಲಂಘಿಸಿದರೆ ವಸತಿಗೃಹ ಮಾಲಕರನ್ನು ಮೊದಲ ಆರೋಪಿಗಳೆಂದು ಪರಿಗಣಿಸಲಾಗುವುದು.
ಈ ಸಭೆಯಲ್ಲಿ ಸುಬ್ರಹ್ಮಣ್ಯದ ಪ್ರಮುಖ ಖಾಸಗಿ ವಸತಿಗೃಹ ಮಾಲಕರು ಮತ್ತು ನಿರ್ವಾಹಕರು ಹಾಜರಿದ್ದು, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಸಭಾಧ್ಯಕ್ಷತೆ ವಹಿಸಿದ್ದ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಕಲ್ಲಾಜೆ ಅವರು ಭದ್ರತೆ ಹಾಗೂ ಶಿಸ್ತಿನ ಪೈಕಿ ಸುಂದರ ಪವಿತ್ರ ಕ್ಷೇತ್ರ ನಿರ್ಮಿಸಲು ಎಲ್ಲರೂ ಸಹಕರಿಸಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ರಾಜೇಶ್ ಎನ್.ಎಸ್., ಸದಸ್ಯ ದಿಲೀಪ್ ಉಪ್ಪಳಿಕೆ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಹಿಂಜಾಡಿ, ಸದಸ್ಯರಾದ ಅಶೋಕ ನಕ್ರಾಜೆ, ಸೌಮ್ಯ ಭರತ್, ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಮಾಜಿ ಸದಸ್ಯ ಶಿವರಾಮ ರೈ ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಮೋನಪ್ಪ ಡಿ ಧನ್ಯವಾದ ಹೇಳಿದರು.
إرسال تعليق