*ಡಾ. ಎಸ್. ಎಲ್.ಭೈರಪ್ಪ.* *ವಿಶ್ವ ದರ್ಜೆಯ ಕಾದಂಬರಿ ಕಾರರು.*

 ಬಹು ವಿಧದ ಕಾದಂಬರಿ ಬರೆದು ಜನಮಾನಸದಲ್ಲಿ ನೆಲೆಯಾದವರು. ಬಹು ಭಾಷಿಕರಲ್ಲಿ ಪ್ರಸಿದ್ಧರಾದವರು. ಜಗತ್ತಿನಲ್ಲಿ ಅನೇಕ ಪ್ರಸಿದ್ಧ ಕಾದಂಬರಿಕಾರರು ಇರಬಹುದು. ಆದರೆ ಭಾರತೀಯ ಸಂಸ್ಕೃತಿಯ ತಳಹದಿಯಲ್ಲಿ ದೇಶದ ಅಸ್ಮಿತೆಯನ್ನು ಕಟ್ಟಿಕೊಟ್ಟ ಕಾದಂಬರಿಕಾರ ಇವರೊಬ್ಬರೇ. ದೇಶ ಉಂಡ ನೋವನ್ನು- ಮಣ್ಣಿನ ಸಂಸ್ಕೃತಿಯನ್ನು - ಪೂರ್ವಜರ ತ್ಯಾಗ ಬಲಿದಾನಗಳನ್ನು - ಸಾಧನೆಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿ ನಾವೆಲ್ಲ ಮತ್ತೆ ಮತ್ತೆ ಓದಬೇಕಾದ ಕೃತಿ ರತ್ನಗಳನ್ನು ಬಿಟ್ಟು ಹೋಗಿದ್ದಾರೆ. ಅವರು ಸಾವನ್ನಪ್ಪಿದ್ದರೂ, ಅವರ ಅಕ್ಷರಕ್ಕೆ ಸಾವಿಲ್ಲ. ದೇಶಭಕ್ತಿ, ಮಣ್ಣಿನ ಪ್ರೀತಿ ಯಾಕೆ ಬೇಕೆಂಬುದನ್ನು, ಘಟನೆಗಳನ್ನು ನಮ್ಮ ಮುಂದಿಟ್ಟು ಒಂದಷ್ಟು ಯೋಚಿಸುವಂತಹ ಹತ್ತಾರು ಕೃತಿಗಳನ್ನು ರಚಿಸಿದ್ದಾರೆ. ಅವರದು ಕಾಲ್ಪನಿಕ ಕಥೆಯಲ್ಲ. ಘಟನೆಗಳಲ್ಲ. ವಾಸ್ತವದ ಕಥೆ. ಬದುಕಿನ ಕಥೆ. ಬದುಕು ಬದಲಿಸಬಲ್ಲ ಕಥೆ. ಬದುಕಲ್ಲಿ ರೂಪಿಸಿಕೊಳ್ಳಬೇಕಾದ ಕಥೆ.

 ಅವರು ಪಡೆದ ಅನೇಕ ಪ್ರಶಸ್ತಿಗಳು ಅವರ ಕಾದಂಬರಿಗೆ ಸರಿಸಾಟಿಯಲ್ಲ. ಕನ್ನಡದ ಮಣ್ಣಿನ ಕುವರನಿಗೆ ಸಿಗಬೇಕಿದ್ದ ಜ್ಞಾನಪೀಠ ಪ್ರಶಸ್ತಿ 94 ವರ್ಷಗಳ ಕಾಲ ಬದುಕಿದರೂ ಎಡ -ಬಲ ಪಂತಗಳೆಂಬ ಹುಳುಕು ಹುಡುಕುವ ಮಾನಸಿಕತೆಯಿಂದ ಸಿಗದೇ ಹೋಯಿತು. ಅನೇಕ ಹೃದಯಗಳಲ್ಲಿ ಅವರು ಬಿತ್ತಿದ ರಾಷ್ಟ್ರ ಪ್ರಜ್ಞೆಗೆ ಜ್ಞಾನಪೀಠ ಪ್ರಶಸ್ತಿ ಸಿಗಲೇಬೇಕಿತ್ತು. ಸಿಗಲಿಲ್ಲವೆಂಬ ಮಾತ್ರಕ್ಕೆ ಅವರು ಬೀರಿದ ಪ್ರಭಾವ ಕಡಿಮೆಯಾಗದು. ಇವರಂತಹ ಪಂಡಿತ ಪರಂಪರೆಯನ್ನು ಅಥವಾ ಪಾಂಡಿತ್ಯಪೂರ್ಣ ಲೇಖಕರನ್ನು ಮುಂದಿನ ದಿನಗಳಲ್ಲಿ ಕಾಣುವ ಭಾಗ್ಯ ನಮಗೆ ಒದಗಿ ಬರಲಿ.

 *ಟಿ ನಾರಾಯಣ ಭಟ್ ರಾಮಕುಂಜ*

Post a Comment

Previous Post Next Post