ಮಂಗಳೂರು:"ನಮ್ಮ ಹಳೆಯ ವಿದ್ಯಾರ್ಥಿಗಳು ಜೀವನದಲ್ಲಿ ಮಹತ್ತರ ಸಾಧನೆಗೈಯುವುದನ್ನು ನೋಡುವುದೇ ನಮ್ಮ ಶಿಕ್ಷಕ ವೃತ್ತಿಯ ನಿಜವಾದ ಧನ್ಯತೆ" ಎಂದು ಶಾರದಾ ವಿದ್ಯಾಲಯದ ನಿವೃತ್ತ ಶಿಕ್ಷಕಿ ಶ್ರೀಮತಿ ಭಾಗ್ಯಲಕ್ಷ್ಮೀ ರಾವ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಮಂಗಳೂರಿನ ತಮ್ಮ ನಿವಾಸದಲ್ಲಿ ಸಲ್ಲಿಸಿದ ಗೌರವವನ್ನು ಸ್ವೀಕರಿಸಿ ಅವರು ಮಾತನಾಡಿದರು.
"ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದುದು. ಅದರಿಂದ ಸಿಗುವ ಶಿಷ್ಯ ಸಂಪತ್ತೇ ನಿಜವಾದ ಸಂಪತ್ತು. ನಮ್ಮ ಅನೇಕ ಶಿಷ್ಯರು ಉನ್ನತ ಸಾಧನೆ ಮಾಡಿ, ತಮ್ಮ ಎಳವೆಯಲ್ಲಿ ಕಲಿಸಿದ ಗುರುಗಳನ್ನು ನೆನಪಿಸಿಕೊಳ್ಳುವುದು ಪದಗಳಲ್ಲಿ ಹಿಡಿದಿಡಲಾಗದ ಅನನ್ಯ ಅನುಭವ" ಎಂದು ಅವರು ಭಾವೋದ್ರಿಕ್ತರಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಕಸಾಪ ಕೇಂದ್ರ ಮಾರ್ಗದರ್ಶಕ ಸಮಿತಿ ಸದಸ್ಯ ಡಾ. ಮುರಲೀಮೋಹನ ಚೂಂತಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ತಾಲೂಕು ಘಟಕದ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀಮತಿ ರತ್ನಾವತಿ ಬೈಕಾಡಿ, ಶ್ರೀಮತಿ ಮೀನಾಕ್ಷ್ಮೀ ರಾಮಚಂದ್ರ, ಜಿಲ್ಲಾ ಘಟಕದ ಶ್ರೀ ಸನತ್ ಜೈನ್, ಶ್ರೀ ಸುರೇಶ್ ರಾವ್ ಹಾಗೂ ಡಾ. ರಾಜಶ್ರೀ ಮೋಹನ್ ಉಪಸ್ಥಿತರಿದ್ದರು.
ಘಟಕದ ಕಾರ್ಯದರ್ಶಿ ಎನ್. ಗಣೇಶ್ ಪ್ರಸಾದ್ ಸ್ವಾಗತಿಸಿ, ಕೋಶಾಧಿಕಾರಿ ಎನ್. ಸುಬ್ರಾಯ ಭಟ್ ವಂದಿಸಿದರು.
إرسال تعليق