ಸುಬ್ರಹ್ಮಣ್ಯ, ಜೂನ್ 7, 2025 – ಸುಳ್ಯ ತಾಲೂಕು ಕೊಲ್ಲಮೊಗ್ರು ಗ್ರಾಮದ ಚಾಳೆಪ್ಪಾಡಿ ಮನೆ ಎಂಬಲ್ಲಿ ಜೂನ್ 6ರಂದು ಸಂಜೆ ಕಳ್ಳತನದ ಘಟನೆ ನಡೆದಿದೆ. ದೂರುದಾರ ಸುರೇಶ್ ಕೆ (ವಯಸ್ಸು 54), ತಮ್ಮ ಪತ್ನಿ ಹಾಗೂ ಮಗನೊಂದಿಗೆ ವಾಸವಿದ್ದು, ಸ್ಥಳೀಯವಾಗಿ ಸಲೂನ್ ಅಂಗಡಿಯನ್ನು ನಡೆಸುತ್ತಿದ್ದಾರೆ.
ಪೊಲೀಸ್ ವರದಿಯ ಪ್ರಕಾರ, ಜೂನ್ 6ರಂದು ಬೆಳಿಗ್ಗೆ 9:30ಕ್ಕೆ ಸುರೇಶ್ ಅವರು ತಮ್ಮ ಅಂಗಡಿ ತೆರೆಯುತ್ತಿದ್ದಾಗ ಮನೆಯಲ್ಲಿದ್ದರು. ಸಂಜೆ ಸುಮಾರು 5:30ಕ್ಕೆ ಅವರ ಮಗ ಶಾಲೆಯಿಂದ ಮನೆಗೆ ಬಂದಿದ್ದು, 6:15ಕ್ಕೆ ಪತ್ನಿ ಮೀನಾಕ್ಷಿಯವರೊಂದಿಗೆ ಫ್ಯಾನ್ಸಿ ಅಂಗಡಿಗೆ ತೆರಳಿದ್ದರು. ನಂತರ ಇಬ್ಬರೂ 8:15ಕ್ಕೆ ಮನೆಗೆ ವಾಪಸ್ಸು ಬಂದಾಗ, ಮನೆಯ ಮುಂಬಾಗಿಲಿನ ಚಿಲಕ ಮುರಿದ ಸ್ಥಿತಿಯಲ್ಲಿ ಕಂಡುಬಂದಿದೆ.
ಅದರಿಂದಾಗಿ ಯಾರೋ ಕಳ್ಳರು ಮನೆಯೊಳಗೆ ಪ್ರವೇಶಿಸಿ ಗಾಡ್ರೆಜ್ ಕಪಾಟ್ ತೆರದು, ಅದರೊಳಗೆ ಇರಿಸಿದ ಸುಮಾರು 25 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವುಗೊಂಡ ಚಿನ್ನದ ಮೌಲ್ಯವನ್ನು ಸುಮಾರು ರೂ. 2 ಲಕ್ಷ ಎಂದು ಅಂದಾಜಿಸಲಾಗಿದೆ. ಚಿನ್ನವಿದ್ದ ಬ್ಯಾಗ್ ಅನ್ನು ಹಿಂಬಾಗಿಲಿನ ಬಳಿ ಬಿಸಾಕಿ ಹೋಗಿದ್ದಾರೆ ಎಂಬುದಾಗಿ ಪಿರ್ಯಾದಿದಾರರು ಪೊಲೀಸರಿಗೆ ತಿಳಿಸಿದ್ದಾರೆ.
ಈ ಕುರಿತು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ. ಸಂಖ್ಯೆ: 30/2025, ಕಲಂ 331(4), 305 BNS-2023ರಂತೆ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮುಂದುವರಿಸುತ್ತಿದ್ದಾರೆ.
ಸುರಕ್ಷತೆಯ ದೃಷ್ಟಿಯಿಂದ ನಿವಾಸಿಗಳು ತಮ್ಮ ಮನೆಗಳನ್ನು ಬಿಟ್ಟು ಹೋಗುವಾಗ ಸೂಕ್ತ ಬೀಗ ಮತ್ತು ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಪೊಲೀಸರು ವಿನಂತಿಸಿದ್ದಾರೆ.
إرسال تعليق