ಪ್ರಕೃತಿ ವಿಕೋಪ ಪೂರ್ವಭಾವಿ ಸಭೆಸಮಸ್ಯೆಗಳ ಬಗ್ಗೆ ಕರೆ ಬಂದರೆ ಅಧಿಕಾರಿಗಳನ್ನೇ ಟಾರ್ಗೆಟ್ ಮಾಡಲಾಗುವುದು: ಶಾಸಕಿ ಭಾಗೀರಥಿ ಮುರುಳ್ಯ ಎಚ್ಚರಿಕೆ

ಕಡಬ,ಜೂ.10: ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಎಲ್ಲಾ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದೆ, ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಕೆಲವು ಪಂಚಾಯಿತಿ ಅಧಿಕಾರಿಗಳು ಮಾಹಿತಿ ನೀಡಿದಾಗ ಗರಂ ಆದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಒಂದು ವೇಳೆ ಯಾವುದಾದರೂ ಗ್ರಾಮದಿಂದ ಸಮಸ್ಯೆ ಇದೆ ಎಂದು ದೂರವಾಣಿ ಕರೆ ಬಂದರೆ ಅಲ್ಲಿನ ಅಧಿಕಾರಿಗಳನ್ನೇ ಟಾರ್ಗೆಟ್ ಮಾಡುತ್ತೇನೆ ಎಂದರು.

ಅವರು ಮಂಗಳವಾರ ಸಂಜೆ ಕಡಬ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪ್ರಕೃತಿ ವಿಕೋಪದ ಬಗ್ಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಶಾಲೆ ಅಂಗನವಾಡಿ, ಸರಕಾರಿ ಕಛೇರಿಗಳ ಬಳಿ ಅಪಾಯಕಾರಿ ಮರಗಳಿದ್ದರೆ ತಕ್ಷಣ ತೆರವಿಗೆ ಕ್ರಮ ಕೈಗೊಳ್ಳಬೇಕು, ಇದಕ್ಕೆ ಅರಣ್ಯ ಇಲಾಖೆ ಅಡ್ಡಿಪಡಿಸಬಾರದು , ಕಾನೂನು ಸಮಸ್ಯೆಗಳಿದ್ದರೆ ಪರಿಹರಿಸಿಕೊಂಡು ಅಪಾಯವಾಗದಂತೆ ನೊಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ, ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ ಎಂದು ಹೇಳಿದ ಶಾಸಕರು ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಸಿಕೊಳ್ಳುವಾಗ ಅಲ್ಲಿ ಹಿಂದೆ ಸೇವೆ ಮಾಡಿರುವವರನ್ನು ಪರಿಗಣಿಸಿ ಅವರಿಗೆ ನ್ಯಾಯ ಒದಗಿಸಬೇಕು, ಅನಾರೋಗ್ಯ ಪೀಡಿತರಾಗಿರುವ ದೋಳ್ಪಾಡಿ ಶಾಲಾ ಮುಖ್ಯ ಶಿಕ್ಷರನ್ನು ಶಿಕ್ಷಣ ಇಲಾಖಾ ಕಛೇರಿಗೆ ನಿಯೋಜನೆ ಮಾಡಿ ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಸೂಚಿಸಿದರು.
 ತಾಲೂಕಿನ ೪೫ ಶಾಲೆಗಳ ಕಟ್ಟಡ ದುರಸ್ತಿಗೆ ಮೂರು ಕೋಟಿ ರೂನ ಅಂದಾಜುಪಟ್ಟಿ ತಯಾರಿಸಲಾಗಿದೆ, ಶಿಥಿಲಾವಸ್ಥೆಯ ಏಳು ಶಾಲಾ ಕಟ್ಟಡಗಳ ತೆರವಿಗೆ ಶಿಫಾರಸ್ಸು ಮಾಡಲಾಗಿದೆ. ಶಾಲಾ ಬಳಿಯಿರುವ ಅಪಾಯಕಾರಿ ಮರಗಳ ತೆರವಿಗೆ ಕ್ರಮ ಕೈಗೊಳ್ಳಲಾಗಿದೆ. ಶಿಕ್ಷಕರ ಕೊರತೆ ಇದ್ದರೂ ಶಾಲೆಗಳಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಹೇಮಳ ಹಾಗೂ ಕುಲ್ಕುಂದ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿರುವುದರಿಂದ ಅದನ್ನು ಮುಚ್ಚಲು ವರದಿ ಸಲ್ಲಿಸಲಾಗಿದೆ ಎಂದು ಶಿಕ್ಷಣ ಇಲಾಖಾಧಿಕಾರಿಗಳು ವಿವರ ನೀಡಿದರು.
 ಮೆಸ್ಕಾಂಗೆ ಸಂಬಂಧಪಟ್ಟಂತೆ ಈಗಾಗಲೇ ಅಪಾಯಕಾರಿ ಮರಗಳನ್ನು ತೆರವು ಮಾಡಿ ಸಮಸ್ಯೆಯಾಗದಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು. ರಸ್ತೆ ಬದಿಯ ಕೆಲವೇ ಕೆಲವು ಅಪಾಯಕಾರಿ ಮರಗಳ ಹೊರತುಪಡಿಸಿ ಬಹುತೇಕ ಅಪಾಯಕಾರಿ ಮರಗಳನ್ನು ತೆರವುಗೊಳಿಸಲಾಗಿದೆ ಎಂದು ಅರಣ್ಯ ಇಲಾಖಾಧಿಕಾರಿಗಳು ವಿವರ ನೀಡಿದರು. ಅಪಾಯಾಕಾರಿ ಅಂಗನವಾಡಿ ಕಟ್ಟಡಗಳಿಂದ ಮಕ್ಕಳನ್ನು ಈಗಾಗಲೇ ಬೇರಡೆಗೆ ಸ್ಥಳಾಂತರ ಮಾಡಲಾಗಿದೆ ಎಂದು ಶಿಶು ಅಭಿವೃದ್ಧಿ ಇಲಾಖಾಧಿಕಾರಿಗಳು ಹೇಳಿದರು. ಬೆಳೆ ಸಮೀಕ್ಷೆಯನ್ನು ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ಮಾಡಬೇಕು ಎಂದು ಶಾಸಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್, ಕಡಬ ತಾಲೂಕು ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಮಾತನಾಡಿ ಈಗಾಲೇ ಮಳೆಯಿಂದಾಗಿ ಹಾನಿಯಾದಲ್ಲಿಗೆ ಸೂಕ್ತ ಪರಿಹಾರ ನೀಡು ನಿಟ್ಟಿನಲ್ಲಿ ಅಧಿಕಾರಿಗಳು ತುರ್ತು ಕ್ರಮ ಜರಗಿಸಬೇಕು, ಅಪಾಯಕಾರಿ ಸ್ಥಳಗಳಲಿರುವ ಮನೆ ಹಾಗೂ ಇತರ ಕಟ್ಟಡಗಳ ಮಾಲಿಕರಿಗೆ ನೋಟೀಸ್ ನೀಡಿ ಮುಂಜಾಗೃತ ಕ್ರಮ ಜರಗಿಸಬೇಕು, ಅಗತ್ಯ ಬಿದ್ದಲ್ಲಿ ಸ್ಥಳಾಂತರ ಮಾಡಲು ಸಿದ್ದರಿರಬೇಕು, ಅಹಿತಕರ ಘಟನೆಗಳು ಸಂಭವಿಸದAತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಕಡಬ ತಹಸೀಲ್ದಾರ್ ಪ್ರಭಾಕರ ಖಜೂರೆ ಉಪಸ್ಥಿತರಿದ್ದರು. . 
  ಶಿಕ್ಷಣ ಇಲಾಖಾಧಿಕಾರಿಗಳಾದ ಲೋಕೇಶ್ ಸಿ.ಆರ್, ವಸಂತ್, ಮೆಸ್ಕಾಂ ಇಂಜಿನಿಯರ್‌ಗಳಾದ ಸಜಿಕುಮರ್, ಸತೀಶ್ ಸಫಲ್ಯ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೀಲಾವತಿ ಇ, ಅರಣ್ಯ ಇಲಾಖಾಧಿಕಾರಿಗಳಾದ ವಿಮಲ್ ಬಾಬು, ಸಂಧ್ಯಾ, ತೋಟಗಾರಿಕಾ ಇಲಾಖಾ ಅಧಿಕಾರಿ ರೇಖಾ, ವಿವಿಧ ಇಲಾಖಾ ಇಂಜಿನಿಯರ್‌ಗಳಾದ ಸಂಗಪ್ಪ ಹುಕ್ಕೇರಿ, ಪ್ರಮೋದ್ ಕುಮಾರ್ ಕೆ.ಕೆ, ಭರತ್ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳಾದ ಮಂಗಳ ಕಾಳೆ, ಶೈಲಜಾ, ಸಮಾಜ ಕಲ್ಯಾಣ ಇಲಾಖೆಯ ವಿನಯಕುಮಾರಿ, ಗ್ರಾಮ ಪಂಚಾಯಿತಿ ಪಿಡಿಒಗಳು ಸೇರಿದಂತೆ ವಿವಿಧ ಇಲಾಖಾಧಿಕಾರಿಗಳ ಮಾಹಿತಿ ನೀಡಿದರು. ತಾಲೂಕು ಪಂಚಾಯಿತಿ ವ್ಯವಸ್ಥಾಪಕ ಭುವನೇಂದ್ರ ಕುಮಾರ್ ಹಾಗೂ ತಾಲೂಕು ಕಛೇರಿಯ ಕೌಶಿಕ್ ಕುಳ ಕಾರ್ಯಕ್ರಮ ನಿರೂಪಿಸಿದರು.

Post a Comment

أحدث أقدم