ಕಾಂಚನ ಈಶ್ವರ ಭಟ್ ಕರ್ನಾಟಕ ಕರಾವಳಿ ಭಾಗದಿಂದ ಉದಿಸಿ ಬಂದ ಸಂಗೀತ ಲೋಕದ ಧ್ರುವತಾರೆ. ಕೆಲವೊಮ್ಮೆ ಒಂದೂರಲ್ಲೋ, ಪ್ರಾಂತ್ಯದಲ್ಲೋ, ದೇಶದಲ್ಲೋ ಅದ್ಭುತ ಸಂಸ್ಕೃತಿ ಹುಟ್ಟು ಹಾಕುವ ತಪಸ್ವಿಗಳು ಮರೆಯಾಗಿ ಬಿಡುವರು. ಊರಿಗೆ ಹೆಸರು ತರುವವರು. ಮರೆಯಾದಂತೆ ಮುಗಿದೇ ಹೋಯಿತು ಅಂತ ಜನ ಗೋಳಿಡುವುದು ಸಹಜ. ಆದರೆ ಸತ್ವಯುತ ಸಂಸ್ಕಾರಗಳು ಆತನ ವಂಶಸ್ಥರಿಂದಲೋ, ಶಿಷ್ಯರಿಂದಲೋ ಮತ್ತೊಂದು ರೂಪದಲ್ಲಿ ಹುಟ್ಟಿ ಬರುವುದಂತೆ. ಆದ್ದರಿಂದಲೇ ಸತ್ಯಕ್ಕೆ ಸಾವಿಲ್ಲ.
ಸತ್ವಯುತವಾದದ್ದಕ್ಕೆ ಸಾವಿಲ್ಲ ಎಂಬ ಮಾತು ಮತ್ತೆ ಮತ್ತೆ ನಮ್ಮ ಅನುಭವಕ್ಕೂ ಬರುತ್ತದೆ. ಕಾಂಚನ ಆನಂದ ಲಕ್ಷ್ಮಿ ಅಮ್ಮಾಳ್, ಕಾಂಚನ ವೆಂಕಟಸುಬ್ರಹ್ಮಣ್ಯಂ, ಕಾಂಚನ ಸುಬ್ಬರತ್ನಂ ಸಂಗೀತಕ್ಕಾಗಿ ಕಾಂಚನವೆಂಬ ಹಳ್ಳಿಗಾಡಿನಲ್ಲಿ ತಮ್ಮ ಬದುಕನ್ನು ಗಂಧದ ಕೊರಡಿನಂತೆ ಸವೆದವರು. ಆ ಪುಣ್ಯ ನೆಲದಲ್ಲಿ ಬಾಲ ಸೂರ್ಯನಂತೆ ಉದಿಸಿ ಬಂದವರು ಕಾಂಚನ ಈಶ್ವರ ಭಟ್. ಸತತ ಅಭ್ಯಾಸದಿಂದ ಮಾತ್ರ ಸರಸ್ವತಿ ಒಲಿದು ಬರಲು ಸಾಧ್ಯ. ಶಕ್ತಿ ಸ್ವರೂಪಿ ಸಂಗೀತ ಸರಸ್ವತಿ ಇವರ ಸುಂದರ ವ್ಯಕ್ತಿತ್ವ ಮುಖೇನ ಸಾವಿರ ಸಾವಿರ ಹೃದಯ ಮಂದಿರಗಳಲ್ಲಿ ಅನುರಣಿಸುತ್ತಿರುವಳು. ಕಂಡು ಕೇಳಿದ ಅನೇಕಾನೇಕರು ಹೃದಯ ತುಂಬಿ ನೆನೆಯುವರು.
ಸಂಗೀತ ಎಂದಿಗೂ ಸುರಗಂಗೆಯಂತೆ...... ಸಂಗೀತ ಎಂದಿಗೂ ರವಿ ಕಾಂತಿಯಂತೆ....... ಬಿಸಿಲಲ್ಲಿ ತಂಗಾಳಿ ಹೊಸ ಜೀವ ತಂದಂತೆ......... ಹೌದು, ಬಿಂಬದಂತೆ ಪ್ರತಿಬಿಂಬ......... ಗುರುವಿನ ಸ್ಫೂರ್ತಿಯ ಸೊಲ್ಲುಗಳೇ ಶಿಷ್ಯರ ಪ್ರತಿಭೆ ಚಿಮ್ಮುವಂತೆ ಮಾಡುವುದಂತೆ. ಕೇವಲ ಪ್ರತಿಭೆ ಮಾತ್ರವೇ ಸೃಷ್ಟಿ ಕಾರ್ಯ ಮಾಡೀತು. ಇದಕ್ಕೆ ಅಪ್ಪಟ ಸಾಕ್ಷಿಯಾಗಿ ಕಣ್ಣ ಮುಂದೆ ನಿಂತವರು ಕಾಂಚನ ಈಶ್ವರ ಭಟ್. ಇವರು ಯೌವನಕ್ಕೆ ಕಾಲಿಡುತ್ತಿದ್ದಂತೆ ಎಲ್ಲಾ ಯುವಕರಲ್ಲಿ ಕಂಡುಬರುವ ಸ್ವರ ಅಸಮತೋಲನ ಇವರನ್ನು ಕಾಡಿತಂತೆ. ಸಹಪಾಠಿಗಳ ಮುಂದೆ ನಾಚಿ ಹೋದರು. ಸಂಗೀತ ಕಲಿಕೆಗೆ ಬೆನ್ನು ತೋರುವುದೇ ಉಚಿತವೆಂದು ಭಾವಿಸಿದರು.ಆಗ ದೇವತೆಯಂತೆ ಗುರು ಪತ್ನಿ ರೋಹಿಣಿ ಸುಬ್ಬರತ್ನಂ ಒಂದು ಮಾತು ಹೇಳಿದರಂತೆ. ನೋಡು...... ಸಂಗೀತ ಲೋಕದ ಮೇರು ವ್ಯಕ್ತಿತ್ವ ಸುಬ್ಬಲಕ್ಷ್ಮಿ ಅವರ ಗುರುವಿಗೂ ಹೀಗೆ ಆಗಿತ್ತಂತೆ. ಆದರೂ ಭಾರತ ರತ್ನ ಸುಬ್ಬುಲಕ್ಷ್ಮಿಯ ಸಂಗೀತ ಶಿಲ್ಪ ರೂಪಿಸಿದವರು ಗುರು ಶೆಮ್ಮಂಗುಡಿ ಶ್ರೀನಿವಾಸ ಐಯ್ಯರ್ ಅವರು. ಬೆನ್ನು ತೋರಬೇಡ ಎಂದರಂತೆ. ನಾನು ಇಂದು ಸಹಸ್ರಾರು ವಿದ್ಯಾರ್ಥಿಗಳಿಗೆ ಸಂಗೀತದ ಧಾರೆ ಹರಿಸಲು ಮತ್ತು ಈ ಮಟ್ಟಕ್ಕೇರ ಬೇಕಿದ್ದರೆ ಅದೊಂದೇ ಮಾತು ಸ್ಪೂರ್ತಿಯ ಸೆಲೆಯಾಯಿತು.ಆ ಮಹಾಗುರು ಹಾಗೂ ಮಹಾತಾಯಿ ದೇವತಾ ಸ್ವರೂಪಿಗಳು ಎನ್ನುತ್ತಾ ಭಾವುಕರಾಗುವರು .ನೀರ ಹನಿಗಳಿಂದ ಕಣ್ಣು ತುಂಬಿ ಬರುವುದು. ಇದುವೇ ಗುರು ಮಹಿಮೆ ಎನ್ನುತ್ತಾರೆ.
ಸಂಗೀತ ಕ್ಷೇತ್ರದಲ್ಲಿ ಇಷ್ಟು ಕಾಲ ಗಟ್ಟಿಯಾಗಿ ನೆಲೆಯೂರಲು ಅಪ್ಪ ಅಮ್ಮನ ಪ್ರಯತ್ನ ಅಪಾರ. ನನ್ನ ಸಂಗೀತ ಗುರು ಕರ್ನಾಟಕ ಕಲಾಶ್ರೀ ವಿದ್ವಾನ್ ಕಾಂಚನ ವಿ ಸುಬ್ಬರತ್ನಂ ಸಂಗೀತದ ಎಲ್ಲಾ ಪಟ್ಟುಗಳನ್ನು ಮುಕ್ತ ಮನದಿಂದ ಧಾರೆ ಎರೆದರು. ಮೃದಂಗ ಕಲಿಸಿದ ಗುರುಗಳು ವಿದ್ವಾನ್ ಕೆ ವಿ ಕಾರಂತ ಮತ್ತು ಕರ್ನಾಟಕ ಕಲಾ ಶ್ರೀ ಪಿ ಜಿ ಲಕ್ಷ್ಮೀನಾರಾಯಣ ಮೈಸೂರು ಇವರು ಕರ್ಣಾನಂದಕರ ನಾದ ಹೊಮ್ಮಿಸಿದರು. ನನ್ನ ಸಂಗೀತದ ಬದುಕು ರೂಪಿಸಿದ ಗುರು ಶ್ರೇಷ್ಠರಿಗೆ ಚಿರಋಣಿ.
ದಕ್ಷಿಣ ಕನ್ನಡ ಜಿಲ್ಲೆಯ, ಬಜತ್ತೂರು ಗ್ರಾಮದ ಹಳ್ಳಿಯ ಮೂಲೆಯಲ್ಲಿ ಕಾಂಚನ ಈಶ್ವರ ಭಟ್ ಜನಿಸಿದರು. ವಾಹನಗಳಿಗಾಗಿ ಕೆಲವು ಮೈಲು ಪಾದಯಾತ್ರೆ ಮಾಡಬೇಕಿತ್ತು. ತಂದೆ ನಾರಾಯಣ ಭಟ್ ತಾಯಿ ಪಾರ್ವತಿ ಅವರು ತನ್ನ ಆಸ್ತಿಪಾಸ್ತಿ ಗಿಂತ ಮಿಗಿಲಾದ ಸಂಸ್ಕಾರ -ಸಂಸ್ಕೃತಿ ಹೃದಯದಂಗಳದಲ್ಲಿ ಬಿತ್ತಿ ಬೆಳೆಸಿದರು. ಮನೆ ತುಂಬಾ ಚೆಂಡೆ- ಮದ್ದಲೆ- ಮೃದಂಗಗಳದೇ ಸದ್ದು. ನಿತ್ಯವೂ ಗುನುಗುತ್ತಿದ್ದುದು ಸಂಗೀತ -ಯಕ್ಷಗಾನದ ಹಾಡುಗಳನ್ನು. ಕಲಿಯಲು ಸನಿಹದ ಕಾಂಚನ ಲಕ್ಷ್ಮೀನಾರಾಯಣ ಪ್ರಾಥಮಿಕ ಶಾಲೆಗೆ ಸೇರುವುದೆಂದರೆ ಸಂಗೀತ ಶಾಲೆಗೂ ಸೇರಿದಂತೆಯೇ ಸರಿ. ಬೆಳಗ್ಗೆ ಎದ್ದು ಸರಸರನೆ ನಡೆದು ಬೇಗನೆ ಸಂಗೀತ ಪಾಠ ಕೇಳಿ, ಆಟ - ಊಟ- ಓಟಗಳ ಪಾಠ ಕಲಿಯಬೇಕಿತ್ತು. ಸಂಗೀತವೆಂಬುದು ಸಹಜವಾಗಿ ಇವರ ನರನಾಡಿಗಳಲ್ಲಿ ಪ್ರವಹಿಸಿತು. ಎಷ್ಟೆಂದರೆ ಉಣ್ಣುವಾಗ -ತಿನ್ನುವಾಗ - ನಿಂತಲ್ಲಿ -ಕುಂತಲ್ಲಿ ಆಟದಂಗಳದಿಂದ ಅಡಿಕೆಯಂಗಳದವರೆಗೂ ಸಂಗೀತವನ್ನೇ ಗುನುಗುತ್ತಿದ್ದನಂತೆ ಈ ಹುಡುಗ..... ಈತನಿಗೆ ಸಂಗೀತದ ಹುಚ್ಚು ಮಿತಿಮೀರಿ ಹೋಯಿತೋ ಎಂದು ಭಯಭೀತರಾದ ತಂದೆ ಕಲಿತದ್ದು ಸಾಕು..... ನಿಲ್ಲಿಸು ನಿನ್ನ ಸಂಗೀತ ಎಂದು ಕಟ್ಟಪ್ಪಣೆ ಹೊರಡಿಸಿ ಬಿಟ್ಟರಂತೆ. ಹೌದು....... ಒಳ್ಳೆಯ ಹುಚ್ಚುಗಳು ಬೆನ್ನತ್ತಿದಾಗ ಮಾತ್ರ ಅಂತರಂಗದ ಆಳಕ್ಕೆ ಇಳಿಯ ಬಲ್ಲವು. ಆಗಲೇ ಒಸರಾಗಿ ಹೊರಹೊಮ್ಮಬಲ್ಲದು. ಹುಚ್ಚು ಇವರನ್ನು ಬೀಳಿಸಲಿಲ್ಲ..... ಬೆಳೆಸಿತು.
ಉಪ್ಪಿನಂಗಡಿಯ ಸರಕಾರಿ ಶಾಲೆಗಳಲ್ಲಿ ಓದಿ ಕಲಿತು ಬಿಕಾಂ ಪದವಿ ಪಡೆದರು.ಸಂಗೀತದ ಕಣ್ಮಣಿಯಾಗಿದ್ದ ಕಾಂಚನ ಊರ ಹೆಸರು ಸಂಗೀತದ ಪರ್ಯಾಯ ನಾಮವಾಗಿತ್ತು. ಈ ಸುಂದರಾಂಗ ಜಾಣ ಶಾಲಾ ದಿನಗಳಲ್ಲಿ ಸಂಗೀತ ಪಾಠ ಹೇಳ ಬೇಕೆಂದು ಅನೇಕರು ಬೆನ್ನು ಬಿದ್ದರಂತೆ. ಮಂಚಿ - ಉಪ್ಪಿನಂಗಡಿ ಅಲ್ಲಿ ಇಲ್ಲಿ ಅನಿವಾರ್ಯವಾಗಿ ಸಂಗೀತ ಪಾಠ ಹೇಳಲಾರಂಭಿಸಿದರು. ಪದವಿ ಮುಗಿಸಿ ಸರಕಾರಿ ವೃತ್ತಿಯಲ್ಲಿ ಬದುಕು ಕಟ್ಟಿಕೊಳ್ಳಬೇಕೆಂಬ ಭಯಕೆ ಇವರಿಗೆ ಕೈಗೂಡಲಿಲ್ಲ. ಮನೆಯ ಪಿತ್ರಾರ್ಜಿತ ಆಸ್ತಿಯ ಕೃಷಿಯ ಜೊತೆಗೆ ಸಂಗೀತದ ಕೃಷಿ ಬದುಕಾಯಿತು. ಚಿಕ್ಕ ವಯಸ್ಸಿನಲ್ಲೇ ದೇವತಾ ಸ್ವರೂಪಿ ಅಮ್ಮನನ್ನು ಕಳೆದುಕೊಂಡ ನತದೃಷ್ಟರಾದರು. ಹಿರಿಯ ಮಗ ಪ್ರತ್ಯೇಕ ಬದುಕು ಕಟ್ಟಿಕೊಂಡಿದ್ದರು. ಮನೆಗೊಬ್ಬ ಮಗ..... ಮನೆ ನಡೆಸಲು ಹೆಣ್ಣೊಬ್ಬಳು ಮನೆಯಲ್ಲಿರದೆ ಹೋದರೆ ಅದು ಕತ್ತಲೆಯ ಕೂಪವಾದೀತೆಂದು ತಿಳಿದ ಅಪ್ಪ, ಮಗನಿಗೆ ಇಪ್ಪತ್ತ ಮೂರನೆಯ ವಯಸ್ಸಿನಲ್ಲಿ ಸಮೀಪದ ಸಂಬಂಧಿಗಳ ಮಮತೆಯ ಮಗಳೊಂದಿಗೆ ಸಪ್ತಪದಿ ತುಳಿಸಿದರು. ಅವರ ತಂದೆ ಗೋಪಾಲಕೃಷ್ಣ ಭಟ್ ತಾಯಿ ರತ್ನಾವತಿಯರ ಸ್ಫುರದ್ರೂಪಿ ಪುತ್ರಿ ವಿಜಯಶ್ರೀ ಆಕೆಯ ಹೆಸರು.
ದಂಪತಿಗಳಿಬ್ಬರೂ ಪದವೀಧರರು ಹಾಗೂ ಸಂಗೀತ ವಿದ್ವಾನ್ ಮತ್ತು ವಿದುಷಿ. ಇನ್ನು ಕೇಳಬೇಕೆ ? ಸಮಾನ ಆಸಕ್ತಿ ಬದುಕಿಗೆ ಬೆಂಗಾವಲಾಯಿತು . ಉತ್ತರ ಧ್ರುವದಿಂದ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ ಎಂಬ ಹಾಡಿನಂತೆ..... ಸಂಗೀತದ ಗಾಳಿ ಇವರಿಬ್ಬರ ಮೇಲು ಚೆನ್ನಾಗಿ ಬೀಸಲಾರಂಭಿಸಿತು. ಅದು ಉಸಿರಾಯಿತು. ಅದುವೇ ಬಸಿರಾಯಿತು. ಅದುವೇ ಕರುಳ ಕುಡಿಗಳಾಯಿತು. ಇಂತಹ ಸಂಗೀತದ ಕುಟುಂಬ ಭುವನದ ಬೆಡಗಾಯಿತು. ಸಂಗೀತ ಪ್ರಪಂಚದ ಮನ ಮನಗಳ ಗುಡಿಯಲ್ಲಿ ಬಂದು ನಿಂತಾಯಿತು. ಪಾಶ್ಚಾತ್ಯ ಸಂಗೀತಕ್ಕೆ ಮರುಳಾಗುವವರನ್ನು ಸೆಳೆದು ಭಾರತೀಯ ಸಂಸ್ಕೃತಿಯ ಸವಿರುಚಿ ತೋರಿದರು. ಕಾಂಚನದ ಈ ಶಿಷ್ಯ ತನ್ನೂರ ಹೆಸರಿಗೆ ಮತ್ತೆ ಜೀವ ತುಂಬಿದರು. ಶತಮಾನದಿಂದ ಸಂಗೀತ ಲೋಕದಲ್ಲಿ ಸಂಚಲನ ತುಂಬುವ ಕಾಂಚನ ಶತಶತಮಾನಗಳ ಕಾಲ ಚಿರಸ್ಥಾಯಿಯಾಗಿರಲೆಂಬ ಹಾರೈಕೆ ನನ್ನಂತಹ ಸಹಸ್ರ ಸಹಸ್ರ ಅಭಿಮಾನಿಗಳದು.
ಸಂಗೀತ ಲೋಕದಲ್ಲಿ ದಕ್ಷಿಣ ಭಾರತದ ಎರಡನೆಯ ತಿರುವಯ್ಯಾರ್ ಎಂದೇ ಹೆಸರಾಗಿದ್ದ ಸಂಗೀತ ಕಾಶಿ ಕಾಂಚನ. ಅಂತಹ ಸತ್ವಯುತ ಮಣ್ಣಿನಲ್ಲಿ ಜನಿಸಿದ ಇವರ ತಂದೆ- ಅಜ್ಜ ಮಹಾ ಕಲಾವಿದರು.ಅವರ ಗರಡಿಯಲ್ಲಿ ಪಳಗಿದ ಈ ಹುಡುಗನಿಗೆ ಸಂಗೀತದ ಮನೋಧರ್ಮ ತನಗರಿವಿಲ್ಲದೆಯೇ ಮೈಗೂಡಿ ಹೋಗಿತ್ತು. ಅದುವೇ ವಂಶಪಾರಂಪರ್ಯ ಶಿಕ್ಷಣದ ಶಕ್ತಿ.ಮೊದಮೊದಲು ಸಂಗೀತ ಪಾಠ ಹೇಳುವುದು ಹವ್ಯಾಸವಾದರೆ ಮತ್ತೆ ಅದು ವೃತ್ತಿಯಾಯಿತು. ಹತ್ತಾರು ಮಕ್ಕಳ ಕೂಟ ಕಟ್ಟಿ ನಮ್ಮೂರಲ್ಲಿ ಸಂಗೀತ ಪಾಠಶಾಲೆ ನಡೆಸಬೇಕೆಂದು ಸಂಗೀತ ಪ್ರೇಮಿಗಳು ಕರೆಯಲಾರಂಬಿಸಿದರು. ಸುಬ್ರಹ್ಮಣ್ಯ - ಸುಳ್ಯ - ಕುಂತೂರು- ಪುತ್ತೂರು - ಉಪ್ಪಿನಂಗಡಿ - ಕೊಯಿಲ - ಕಲ್ಮಡ್ಕ - ಪಾಣೆಮಂಗಳೂರು - ನೆಲ್ಯಾಡಿ ಇನ್ನೂ ಅನೇಕ ಹಳ್ಳಿ ಹಳ್ಳಿಗಳಲ್ಲಿ ಸಂಗೀತ -ಮೃದಂಗ - ಪಿಟೀಲು- ಮದ್ದಲೆಗಳ ನಾದ, ಸುನಾದ ಸಂಗೀತ ಶಾಲೆಯ ಹೆಸರಿನಲ್ಲಿ ಮಾರ್ದನಿಸಿತು. ನಾದ ದೇವತೆಯ ಸ್ವರ ಸಂಚಾರಕ್ಕೆ ಇಂದು ಮೂವತ್ತೈದು ವರ್ಷಗಳ ಹರೆಯ.
ಈಶ್ವರ ಭಟ್ಟರ ಮಾಂತ್ರಿಕ ಸ್ಪರ್ಶಕ್ಕೆ ಒಳಗಾದ ವಿದ್ಯಾರ್ಥಿಗಳು ಹತ್ತಿರ ಹತ್ತಿರ ಇಪ್ಪತ್ತೈದು ಸಹಸ್ರಗಳಾಗಬಹುದು. ನೂರಕ್ಕೊಬ್ಬ ಶೂರ -ಧೀರ, ಸಾವಿರಕ್ಕೊಬ್ಬ ವಿದ್ವಾಂಸ ರಾಗಬಲ್ಲರಂತೆ.ಅವರೆಲ್ಲರೂ ವಿದ್ವಾನ್ - ವಿದುಷಿಯರಾಗ ದಿರಬಹುದು. ಇವರ ಬಳಿ ಸಂಗೀತ - ಸಂಗೀತ ವಾದ್ಯಗಳ ಪಾಠ ಕಲಿತವರ,ಸಂಗೀತದ ಪ್ರೀತಿ ಅನುಕರಣೀಯ. ಅವರೆಲ್ಲರೂ ಹಾಡುಗಳ ಗುನುಗುತ್ತಲೇ ಬದುಕಿನ ಪಾಡನ್ನು ಸೈರಿಸುವ ಬಲ ತುಂಬಿಕೊಂಡರು. ಅಂತರಂಗದ ಅರಿವಿನ ಮಹಾ ಬೆಳಕಲ್ಲಿ ಪ್ರಾಣ ವೀಣೆಯನ್ನು ಮೀಠ ಬಲ್ಲ ಮಹಾಗುರು ಇವರಾದರು. ಉಷೆ ಪುರಾತನಳಾಗಿದ್ದರು ಮತ್ತೆ ಮತ್ತೆ ಹುಟ್ಟುವಳು. ಒಂದೇ ಬಣ್ಣದಿಂದ ಕಂಗೊಳಿಸುವಳು. ನಿತ್ಯ ನೂತನವೆನಿಸುವಳು. ಅದರಂತೆ ಈಶ್ವರ ಭಟ್ಟರ ಸಂಗೀತ ಪಾಠಕ್ಕೆ ಸರಿಸಾಟಿಯಿಲ್ಲ. ದಕ್ಷಿಣ ಕನ್ನಡದ ನಾಲ್ಕೈದು ತಾಲೂಕುಗಳಲ್ಲಿ ಸಂಗೀತವನ್ನು ತಪಸ್ಸಿನಂತೆ ಎತ್ತರಕ್ಕೆ ಬಿತ್ತರಿಸಿದರು. ವೀಣೆ ನಾನು ವೈಣಿಕ ನೀನು ಎಂಬಂತಿದ್ದು..... ಮನದ ತಂತಿ ಮೀಟಿ ಭಾವ ತುಂಬುವರು. ಅವರ ಬದುಕಿನ ಭಾಗವಾಗಿ ಸುಖ ದುಃಖಗಳ ಭಾಗಿಯಾಗಿಯೂ ನಿಲ್ಲುವರು. ಹಾಡು ಕೇಳುವುದು ಧ್ಯಾನವಿದ್ದಂತೆ. ಮುಂದೆ ಹಾಡು ಕೇಳುತ್ತಾ ನಾವೇ ಹಾಡಾಗಿ ಬಿಡುವೆವು. ಕೆಲವೊಂದು ಕಾಡುವ ಹಾಡುಗಳಿವೆ ಎನ್ನುವರು. ಮಕ್ಕಳ ಮುಗ್ಧ ಮನದಲ್ಲಿ ಅದ್ಭುತ ಕನಸುಗಳ ಬಿತ್ತುವರು.
ಈಶ್ವರ ಭಟ್ ಮನದ ಗುಡಿಯಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಗುರು, ವಿದ್ವಾನ್ ಕಾಂಚನ ವಿ ಸುಬ್ಬರತ್ನಂ. ಅವರ ಪ್ರತಿ ಮಾತು ಚಿಪ್ಪಿನಿಂದ ಚಿಮ್ಮಿ ಬಂದ ಮುತ್ತಿನಂತಿರುತ್ತಿತ್ತು. ಪ್ರಶಂಸೆಯ ಮಾತುಗಳಿಂದ ಗುರಿ ತೋರುತ್ತಿದ್ದರು. ಗುರುವಿನದೇ ಸಂಗೀತ ಕಛೇರಿಯಲ್ಲಿ ಮೃದಂಗದ ನಾದ ಹೊಮ್ಮಿಸುವ ಭಾಗ್ಯ ನನ್ನದಾಯಿತು. ಗುರು ಕರೆದಲ್ಲಿಗೆ ಹೆಜ್ಜೆ ಹಾಕಿದೆ. ನಮ್ಮದು ಗುರು ಶಿಷ್ಯ ಪರಂಪರೆಗೆ ಮೀರಿದ ಋಣಾನುಬಂಧ. ಹೋದಲ್ಲೆಲ್ಲ ಇದು ನಿಮ್ಮ ಮಗನೋ ಎನ್ನುತ್ತಿದ್ದರಂತೆ. ನನ್ನ ಗುರುವಿಗೆ ಮಗನಿರುತ್ತಿದ್ದರೆ ಆತ ಮಾಡಬೇಕಾಗಿದ್ದ ಪಿತೃ ಕಾರ್ಯ..... ನನ್ನ ಕೈಯಿಂದ ದೇವರು ಮಾಡಿಸುತ್ತಿರುವನು. ಹೌದು ಗುರುವಿನ ಮಾನಸ ಪುತ್ರ ನಾನು ಎನ್ನುತ್ತಾರೆ.
ಬಾಲ್ಯಕಾಲದಲ್ಲಿ ಸಂಗೀತ ಕೇಳಲು ಇರುತ್ತಿದ್ದ ಏಕೈಕ ಸಾಧನ ರೇಡಿಯೋ. ಆನಂತರ ಒಂದೊಂದೇ ಬರಲಾರಂಭಿಸಿತು. ಅಂದು ಆಕಾಶವಾಣಿಯಲ್ಲಿ ಕೇಳಿ ಬರುತ್ತಿದ್ದ ಚಿತ್ತವರಳಿಸುವ ಹಾಡುಗಳೆಂದರೆ ಪದ್ಮವಿಭೂಷಣ ಡಾ. ಬಾಲಮುರಳಿ ಕೃಷ್ಣ, ಪದ್ಮವಿಭೂಷಣ ಟಿ ವಿ ಶಂಕರನಾರಾಯಣ ಅವರದು. ಅದನ್ನೇ ಕಿವಿ ತುಂಬಿಸಿಕೊಂಡು ಬೆಳೆದೆ ನಾನು. ದೃಶ್ಯ ಮಾಧ್ಯಮ ವಿಲ್ಲದ ಕಾಲವದು. ಕಂಡಿದ್ದರೆ ಪತ್ರಿಕೆಗಳಲ್ಲಿ ಭಾವಚಿತ್ರಗಳನ್ನು ಮಾತ್ರ. ಅವರಿಗೆ ಪಕ್ಕ ವಾದ್ಯ ನುಡಿಸುವ ಕನಸು ಕಂಡೆನು. ಅಂತಹ ಮೇರು ಸಂಗೀತ ಕಲಾವಿದರ ಬಳಿ ಮೃದಂಗ ನುಡಿಸುವುದು ಸುಲಭದ ಮಾತಾಗಿರಲಿಲ್ಲ. ನನ್ನ ಗುರು ಹಿರಿಯರ ಅನುಗ್ರಹ ಭಾಗ್ಯದಿಂದ ಅಂತಹ ಮಹಾನ್ ಕಲಾವಿದರ ಹೆಸರಾಂತ ಕಛೇರಿಗಳಲ್ಲಿ ಪಕ್ಕ ವಾದ್ಯ ನುಡಿಸುವ ಮಹೋನ್ನತ ಭಾಗ್ಯ ನನ್ನದಾಯಿತು. ಪರದೇಶದಲ್ಲೂ ಸಂಗೀತ ಪ್ರೇಮಿಗಳ ಮನತಣಿಸುವ ಸುವರ್ಣಾವಕಾಶ ಲಭಿಸಿತು.
ಸಂಗೀತದಲ್ಲಿ ಸಂಸ್ಕಾರ - ಸ್ವಂತಿಕೆ ಬರಬೇಕು. ಗುರು ಮುಖದಿಂದ ಕಲಿಯುವ ಪಾಠ ಉತ್ಕೃಷ್ಟವಾದುದು. ಗುರುವಿನ ಗುಲಾಮನಾದಂತೆ ಧ್ವನಿ ಮಾಧುರ್ಯ ಪಕ್ಟಗೊಳ್ಳುತ್ತಾ ಸಾಗುವುದು. ನನ್ನ ಶಿಷ್ಯ ಸಮೂಹದಲ್ಲಿ ಅದೆಷ್ಟೋ ವೈದ್ಯರು - ಇಂಜಿನಿಯರ್ ಗಳು - ಶಿಕ್ಷಕರು - ವಕೀಲರು - ವಿಜ್ಞಾನಿಗಳು - ಕೃಷಿಕರು - ತಾಯಂದಿರು ಅಪಾರ ಸಾಧನೆ ಮಾಡಿರುವರು. ಅವರೆಲ್ಲರ ಅಂತರಂಗದ ನುಡಿ ಹೀಗಿದೆ.....ಸಂಗೀತವು ಶಾಲಾ ಕಲಿಕೆಗೆ ವೇಗವರ್ಧಕವಾಗುವುದು. ಸಂಗೀತ ಏಕಾಗ್ರತೆ ತುಂಬ ಬಲ್ಲದು....... ಸಂಸ್ಕಾರ ಕಲಿಸುವುದು. ನಮ್ಮ ಬದುಕಿಗೆ ಶಿರೋಭೂಷಣದಂತಿರುವುದು. ಬದುಕಿಗೆ ಚೆಲುವು ತುಂಬುವುದು. ಶಿಷ್ಯರು ಹೇಳುವ ಈ ಮಾತು ನನ್ನ ಬದುಕಿಗೆ ಸಾರ್ಥಕತೆಯ ಭಾವ ತುಂಬಿದೆ.
ಈಶ್ವರ ಭಟ್ಟರದು ಬಿಡುವಿಲ್ಲದ ಬದುಕು. ಒಂದೆಡೆ ಹಿರಿಯರ ಆಸ್ತಿಪಾಸ್ತಿಯ ರಕ್ಷಣೆಯಾದರೆ ಸಂಗೀತ ಪಾಠ- ಕಛೇರಿ ಹೀಗೆ ನಿತ್ಯ ಸಂಚಾರಿ. ಪತ್ನಿ ವಿಜಯಶ್ರೀ ಅತ್ತ ಪಾರಂಪರಿಕ ಕೃಷಿ- ಮನೆ ವಾರ್ತೆ - ಮಕ್ಕಳ ಆರೈಕೆ- ಜೊತೆಗೆ ಸಂಗೀತ ಪಾಠಗಳಲ್ಲೂ ಪತಿಯ ಒತ್ತಾಸೆಯಾಗಿ ನಿಲ್ಲುವರು. ಅವರು ಸೂತ್ರಧಾರಿ ನಾನು ಪಾತ್ರಧಾರಿ ಎಂಬಂತಿರುವರು. ಇವರ ಪುತ್ರ ವಿದ್ವಾನ್ ಡಾ. ಅಕ್ಷಯನಾರಾಯಣ ವೈದ್ಯರಾಗಿ- ಕೃಷಿಕರಾಗಿ- ಸಂಗೀತ ಸಾಧಕರಾಗಿ- ಹಳ್ಳಿಗಾಡಿನಲ್ಲಿ ತಂದೆಯ ಆಧಾರ ಸ್ಥಂಭದಂತಿರುವರು. ಮನೆ ತುಂಬಿದ ಸೊಸೆ ಯಶಸ್ವಿನಿ ಬಿ ಬಿ ಎ ಪದವಿ ಪಡೆದವರು. ತಾನು ಕಾಲಿಟ್ಟ ಮನೆಯ ಪರಂಪರೆಯಲ್ಲೇ ಸಂಗೀತ ಸಾಧನೆಗೆ ತೊಡಗಿರುವರು.ಅತ್ತೆಯ ಜೊತೆ ಹೆಜ್ಜೆ ಹಾಕುವರು. ಈಶ್ವರ ಭಟ್ಟರ ಮಗಳು ಆಕಾಂಕ್ಷ ಎಂಜಿನಿಯರಿಂಗ್ ಓದುತ್ತಿರುವ ಸಂಗೀತ ಸಾಧಕಿ.
ಶ್ರೀಯುತರು ಸಂಗೀತ ಹಾಗೂ ಮೃದಂಗ ಎರಡರಲ್ಲೂ ವಿದ್ವಾನ್ ಪದವಿ ಪಡೆದು ಮೈಸೂರು ಆಕಾಶವಾಣಿಯ ಎ ಗ್ರೇಡ್ ಕಲಾವಿದರು.ಸಂಗೀತ ಗುರು ಕರ್ನಾಟಕ ಕಲಾ ಶ್ರೀ ಕಾಂಚನ ವಿ.ಸುಬ್ಬರತ್ನಂ, ಗಾನ ಕಲಾಭೂಷಣ ಪಿ ಜಿ ಲಕ್ಷ್ಮೀನಾರಾಯಣ ಮೈಸೂರು, ಪದ್ಮಭೂಷಣ ಟಿ ಎನ್ ಶೇಷ ಗೋಪಾಲನ್, ವಿದ್ವಾನ್ ಒ. ಎಸ್ ತ್ಯಾಗರಾಜನ್, ವಿದ್ವಾನ್ ಟಿ ಎಂ ಕೃಷ್ಣ,ವಿದ್ವಾನ್ ಸಂಜಯ್ ಸುಬ್ರಹ್ಮಣ್ಯಂ, ವಿದ್ವಾನ್ ಉಣ್ಣಿಕೃಷ್ಣನ್,ವಿದ್ವಾನ್ ಸಂದೀಪ ನಾರಾಯಣ್, ವಿದುಷಿ ಗಾಯತ್ರಿ ವೆಂಕಟ ರಾಘವನ್, ವಿದ್ವಾನ್ ಚಂದನ್ ಕುಮಾರ್,ವಿದ್ವಾನ್ ಮೈಸೂರು ನಾಗರಾಜ್ ಹಾಗೂ ಡಾ. ಮಂಜುನಾಥ್ ಮೈಸೂರು ಇಂತಹ ಸಂಗೀತ ಲೋಕದ ದಿಗ್ಗಜರಿಗೆ ಮೃದಂಗ ಸಾಥ್ ನೀಡಿರುವ ಕಲಾವಿದ ಇವರು.
ಇವರ ಶಿಷ್ಯರು ಅನೇಕ ಸಂಗೀತ ಶಾಲೆಗಳನ್ನು ನಡೆಸುತ್ತಾ ತಮ್ಮ ಗುರುವಿನ ಮಹಿಮೆಗಳನ್ನು ಸಾರುತ್ತಿರುವವರು . ಈಶ್ವರ ಭಟ್ಟರು ಪ್ರತಿ ವರ್ಷವೂ ನೂರಾರು ಕಛೇರಿಗಳ ಮೂಲಕ ಸಂಗೀತದ ಕಂಪು ಹರಿಸುವರು. ಸುನಾದ ಗೃಹ ಸಂಗಮ, ಗುರು ಸಂಸ್ಮರಣೆ, ಮುತ್ತು ಸ್ವಾಮಿ ದೀಕ್ಷಿತರ ಆರಾಧನೋತ್ಸವ, ಸುನಾದ ಸಂಗೀತೋತ್ಸವ, ಸುನಾದ ರಜತಕಲರವ ಇವೆಲ್ಲ ಶ್ರೀಯುತರ ಸಂಗೀತ ಪ್ರಸಾರ ಕ್ಷೇತ್ರದಲ್ಲಿ ಗುರುತಿಸಲ್ಪಡುವ ಶ್ರೇಷ್ಠ ಸೇವಾ ಕಾರ್ಯಗಳು. ಪುತ್ತೂರಿನಲ್ಲಿ ಜರುಗಿದ ಸುನಾದ ಸಂಗೀತ ಕಲಾ ಶಾಲೆಯ ಬೆಳ್ಳಿ ಹಬ್ಬ ವರ್ಷದ ಸಂಗೀತ ಮಹೋತ್ಸವ ಇವರ ಬದುಕಿನ ಸಾಧನೆಗಳ ಅನಾವರಣಗೊಳಿಸಿತು. ಕರ್ನಾಟಕ ಪರೀಕ್ಷಾ ಮಂಡಳಿಯ ಸಂಗೀತ ಪರೀಕ್ಷಕರಾಗಿ ಹಾಗೂ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿಯೂ ಹೆಸರಾಗಿರುವರು .
ಶ್ರೀಯುತರಿಗೆ ಒಲಿದು ಬಂದ ಗೌರವ ಪುರಸ್ಕಾರಗಳು ಅನೇಕ. ಪ್ರಮುಖವಾದುದೆಂದರೆ ತ್ಯಾಗರಾಜ ಸಂಗೀತ ಸಭಾ ಮೈಸೂರು ಇವರ ಕಲಾ ದೀಪ್ತಿ ಪ್ರಶಸ್ತಿ, ಜೆ ಎಸ್ ಎಸ್ ಸಂಗೀತ ಸಭಾ ಮೈಸೂರು ಇವರ ಗೌರವ ಪುರಸ್ಕಾರ, ಮಲ್ನಾಡು ವಿದ್ಯಾಸಂಸ್ಥೆ, ಚಿಕ್ಕಮಂಗಳೂರು ಇವರಿಂದ ವಾದನ ಕಲಾನಿಧಿ, ಇನ್ನು ಅನೇಕ ಸಂಘ-ಸಂಸ್ಥೆಗಳಿಂದ ದೊರೆತ ಪ್ರಶಸ್ತಿ ಪುರಸ್ಕಾರಗಳು ಇವರ ಪ್ರತಿಭೆಗೆ ಸಾಕ್ಷಿಯಾಗಿವೆ.
ಸಂಗೀತ ಗುರು ಈಶ್ವರ ಭಟ್ಟರ ಸಂಗೀತ ಪಾಠದ ವೈಖರಿ, ಸಂಗೀತ ವಿದ್ಯಾರ್ಥಿಗಳ ಆಪ್ತ ಒಡನಾಟ, ಗುರು ಶಿಷ್ಯ ಹಾಗೂ ಪೋಷಕರೊಂದಿಗಿನ ಮಧುರ ಬಾಂಧವ್ಯ ಇವರನ್ನು ಗುರುತ್ವಕ್ಕೇರಿಸಿದೆ. ನನ್ನ ಮಗಳ ಸಂಗೀತ ಗುರು ಇವರು. ಇವರ ಗುರುತನಕ್ಕೆ ಮನಸೋತವನು ನಾನು. ನಮ್ಮಿಬ್ಬರದು ನಿಡುಗಾಲದ ನಂಟು. ಇವರ ಸಂಗೀತ ವೈಭವವನ್ನು - ಖ್ಯಾತ ಕಲಾವಿದರ ಕಛೇರಿಗಳನ್ನು ಬಲು ಸನಿಹದಿಂದ ಕಂಡವನು ನಾನು.
*ಟಿ ನಾರಾಯಣ ಭಟ್ ರಾಮಕುಂಜ*
*ರಾಜ್ಯ -ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರು ಹಾಗೂ ಲೇಖಕರು*
إرسال تعليق