*ನೆಲ್ಯಾಡಿ 2028 ನೇ ಮದ್ಯ ವರ್ಜನ ಶಿಬಿರಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಬೇಟಿ,ಸಂಭ್ರಮದ ಸ್ವಾಗತ*

ನೆಲ್ಯಾಡಿ: ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ನೆಲ್ಯಾಡಿ-ಕೌಕ್ರಾಡಿ ಇದರ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕಡಬ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ತಾಲೂಕು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯುತ್ತಿರುವ ೨೦೩೮ನೇ ಮದ್ಯವರ್ಜನ ಶಿಬಿರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ಜ.೨೫ರಂದು ಭೇಟಿ ನೀಡಿದರು.

ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು, ಮದ್ಯವರ್ಜನ ಶಿಬಿರದ ಮೂಲಕ ಪಾನಮುಕ್ತರಾದವರ ಕುಟುಂಬದ ಹೆಣ್ಣು ಮಕ್ಕಳ ಮುಖದಲ್ಲಿ ನಗು ಕಾಣುತ್ತಿದ್ದೇವೆ. ಇಂತಹ ಶಿಬಿರಗಳ ಬಗ್ಗೆ ಮಹಿಳೆಯರು ಹೆಚ್ಚು ಸಂತಸ ಪಡುತ್ತಿದ್ದಾರೆ. ಶಿಬಿರದಲ್ಲಿ ಮದ್ಯ ವ್ಯಸನಿಗಳು ವ್ಯಕ್ತಪಡಿಸುವ ಅನಿಸಿಕೆ ಕೇಳುವಾಗ ತುಂಬಾ ವ್ಯಥೆಯಾಗುತ್ತಿದೆ. ಆದ್ದರಿಂದ ಮದ್ಯವರ್ಜನ ಶಿಬಿರದಲ್ಲಿ ಪಾಲ್ಗೊಂಡವರೆಲ್ಲರೂ ಮನಸ್ಸು ಗಟ್ಟಿ ಮಾಡಿಕೊಂಡಿರಬೇಕು. ಮತ್ತೆ ಮದ್ಯ ವ್ಯಸನಿಗಳು ಆಗಬಾರದು. ಯಾವುದೋ ತ್ಯಾಗಕ್ಕೂ ಸಿದ್ಧರಾಗಿರಬೇಕು ಎಂದು ಡಾ| ಡಿ.ವೀರೇಂದ್ರ ಹೆಗ್ಗಡೆ ಕರೆ ನೀಡಿದರು.
ಪಾನಮುಕ್ತರಾದವರ ಮಕ್ಕಳೂ ಉನ್ನತ ವ್ಯಾಸಂಗ ಪಡೆದು ಉದ್ಯೋಗದಲ್ಲಿದ್ದಾರೆ. ಇದೆಲ್ಲಾ ಮದ್ಯವರ್ಜನ ಶಿಬಿರ ಆದ ಬಳಿಕದ ಬೆಳವಣಿಗೆಯಾಗಿದೆ. ೫೦ ಜನ ಪಾನಮುಕ್ತರಾದಲ್ಲಿ ೧ ವರ್ಷದಲ್ಲಿ ಅವರಿಗೆ ಒಟ್ಟು ೧ ಕೋಟಿ ರೂಪಾಯಿಗೂ ಹೆಚ್ಚು ಉಳಿತಾಯ ಆಗುತ್ತಿದೆ. ಆದರೆ ಇದರಿಂದ ನಷ್ಟ ಆಗುವವರು ಮದ್ಯವರ್ಜನ ಶಿಬಿರವನ್ನು ದೂಷಿಸುತ್ತಾರೆ. ಇದಕ್ಕೆ ನಾವು ಹೆದರಬಾರದು. ಯಾರೋ ಬೈಯುತ್ತಾರೆ ಎಂದು ಮದ್ಯವರ್ಜನ ಶಿಬಿರ ನಿಲ್ಲಿಸುವುದಿಲ್ಲ ಎಂದು ಹೇಳಿದ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು, ಮದ್ಯವರ್ಜನ ಶಿಬಿರ ಮುಗಿದ ಮೇಲೆ ಹಳೆಯ ಸ್ನೇಹಿತರು ಕರೆದರೂ ಹೋಗಬಾರದು. ಒಮ್ಮೆ ತಪ್ಪು ಮಾಡಿ ನೋವು ಅನುಭವಿಸಿದ್ದೀರಿ. ಮತ್ತೆ ಜಾಗೃತರಾಗಿರಿ. ಮದ್ಯವ್ಯಸನಿಗಳಾಗಬಾರದು. ಸ್ನೇಹಿತರನ್ನು, ಬಂಧುಗಳನ್ನೂ ಇಂತಹ ಶಿಬಿರಕ್ಕೆ ಸೇರ್ಪಡೆಗೊಳಿಸಿ. ಇನ್ನಷ್ಟೂ ಮಂದಿಯನ್ನು ಶಿಬಿರಕ್ಕೆ ಸೇರಿಸುವ ಮೂಲಕ ಜಾಗೃತಿ ಮಿತ್ರ ಪ್ರಶಸ್ತಿ ಪಡೆಯಿರಿ ಎಂದು ಡಾ| ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. 
ಅತಿಥಿಯಾಗಿದ್ದ ನೆಲ್ಯಾಡಿ ಜ್ಞಾನೋದಯ ಬೆಥನಿ ಪ.ಪೂ.ಕಾಲೇಜಿನ ಪ್ರಾಂಶುಪಾಲ ರೆ.ಫಾ.ವರ್ಗೀಸ್ ಕೈಪನಡ್ಕ ಮಾತನಾಡಿ, ಒತ್ತಡ, ನಿರಾಸೆ ಸಹಿತ ಹಲವಾರು ಕಾರಣಗಳಿಂದ ಆರಂಭಗೊಂಡ ಮದ್ಯಪಾನ ಮುಂದೆ ಮದ್ಯ ವ್ಯಸನಕ್ಕೆ ಕಾರಣವಾಗುತ್ತಿದೆ. ಮದ್ಯಪಾನದಿಂದ ಆರೋಗ್ಯ, ಸಂತೋಷ, ನೆಮ್ಮದಿ ಕೈತಪ್ಪುತ್ತದೆ. ಆದ್ದರಿಂದ ಮದ್ಯಪಾನ ತ್ಯಜಿಸಿ ಆರೋಗ್ಯ ಜೀವನ ನಡೆಸುವಂತೆ ಹೇಳಿದರು. 
ಪುತ್ತೂರು ಎಸ್‌ಆರ್‌ಕೆ ಲ್ಯಾಡರ್‍ಸ್ ಮಾಲಕ ಕೇಶವ ಅಮೈ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ ಇದರ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ದ.ಕ.ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ನೆಲ್ಯಾಡಿ-ಕೌಕ್ರಾಡಿ ಇದರ ಗೌರವಾಧ್ಯಕ್ಷ ಶ್ರೀಧರ ಗೋರೆ, ಶಿಬಿರದ ವೈದ್ಯಾಧಿಕಾರಿ ಡಾ.ಮೋಹನ್‌ದಾಸ್ ಗೌಡ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನೆಲ್ಯಾಡಿ ವಲಯಾಧ್ಯಕ್ಷ ಜಯಾನಂದ ಬಂಟ್ರಿಯಾಲ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ದ.ಕ.-೨ ಇದರ ನಿರ್ದೇಶಕ ಬಾಬು ನಾಯ್ಕ, ಕಡಬ ತಾಲೂಕು ಯೋಜನಾಧಿಕಾರಿ ಪ್ರಕಾಶ್‌ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಶಿಬಿರಾರ್ಥಿ ಸುರೇಶ್ ಅನಿಸಿಕೆ ವ್ಯಕ್ತಪಡಿಸಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಉಡುಪಿ ಪ್ರಾದೇಶಿಕ ಕಚೇರಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ನೆಲ್ಯಾಡಿ-ಕೌಕ್ರಾಡಿ ಇದರ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು ಸ್ವಾಗತಿಸಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ತಾಲೂಕು ಅಧ್ಯಕ್ಷ ಮಹೇಶ್ ಕೆ.ಸವಣೂರು ವಂದಿಸಿದರು. ಶಿವಪ್ರಸಾದ್ ರೈ ಮೈಲೇರಿ, ರವಿಪ್ರಸಾದ್ ಆಲಾಜೆ ನಿರೂಪಿಸಿದರು. ಅಶೋಕ ಆಚಾರ್ಯ ಬಲ್ಯ ಪ್ರಾರ್ಥಿಸಿದರು. ಡಾ| ಹೆಗ್ಗಡೆಯವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. 


ಕೇಶವ ಅಮೈಯವರಿಗೆ ಸನ್ಮಾನ;
ಸಮಾರಂಭದಲ್ಲಿ ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ವತಿಯಿಂದ ಉದ್ಯಮಿ, ಎಸ್‌ಆರ್‌ಕೆ ಲ್ಯಾಡರ್‍ಸ್‌ನ ಮಾಲಕ ಕೇಶವ ಅಮೈ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕ ಚೇತನ್ ಆನೆಗುಂಡಿ ಅವರು ಕೇಶವ ಅಮೈ ಅವರನ್ನು ಪರಿಚಯಿಸಿದರು.

ಸವಲತ್ತು ವಿತರಣೆ;
ಶೌರ್ಯ ವಿಪತ್ತು ನಿರ್ವಹಣಾ ನೆಲ್ಯಾಡಿ ಘಟಕದ ಸದಸ್ಯರಿಗೆ ಸಾಂಕೇತಿಕವಾಗಿ ಬ್ಯಾಗ್ ವಿತರಣೆ ಮಾಡಲಾಯಿತು. ಯೋಜನೆಯ ಜನಮಂಗಳ ಕಾರ್ಯಕ್ರಮದಡಿ ಸುರೇಂದ್ರ ಪಡುಬೆಟ್ಟು ಇವರಿಗೆ ವಾಕರ್, ತಿಮ್ಮಪ್ಪ ರೈ ಪಿಜಕ್ಕಳರವರಿಗೆ ವಾಟರ್ ಬೆಡ್, ಅಕ್ಕಮ್ಮ ಅಬ್ರಹಾಂ ಇವರಿಗೆ ವೀಲ್ ಚೆಯರ್ ವಿತರಣೆ ಮಾಡಲಾಯಿತು.
---------------------------

Post a Comment

Previous Post Next Post