*ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ* *ಶ್ರೀ ಪೇಜಾವರ ಮಠ ಉಡುಪಿ*
********************* *ಸಂಸ್ಮರಣೆ* *ಜನ್ಮದಿನ 27-04-1931* ಅವರದು 95ನೆಯ ಜನ್ಮದಿನೋತ್ಸವ. ಅವರು ಬದುಕಿರುತ್ತಿದ್ದರೆ ಈಗಲೂ ನಮಗೆ ಸ್ಪೂರ್ತಿಯ ಸೆಲೆಯಾಗಿರುತ್ತಿದ್ದರು. ಅವರೊಡನೆ ದೀರ್ಘಕಾಲೀನ ಒಡನಾಟ ಇದ್ದವರಿಗೆ ಅವರಿನ್ನೂ ನಮ್ಮಿಂದ ದೂರವಾಗಿಲ್ಲವೆಂಬ ಜೀವ ಭಾವ ಅಂತರಂಗದಲ್ಲಿದೆ. ಇನ್ನೂ ನಮ್ಮ ಜೊತೆಗಿದ್ದಾರೆ ಎಂದೇ ತಿಳಿದಿರುವರು. ಅವರದು ಸೂಜಿಗಲ್ಲಿನಂತಹ ವ್ಯಕ್ತಿತ್ವ. ಅವರ ಮಗು ಮನಸ್ಸು ಆಬಾಲವೃದ್ಧರನ್ನೂ ಸೆಳೆಯುವಂತಿತ್ತು. ನಿತ್ಯವೂ ಜನಜಂಗುಳಿಯ ನಡುವೆ ಇದ್ದಾಗ ಮಾತಿಗೆ ಸಿಗದೇ ಹೋದರೂ ಅವರ ಅಭಯ ಹಸ್ತ, ಮುಗ್ಧ ನಗು ಅಷ್ಟೇ ಸಾಕಿತ್ತು ಭಕ್ತರಿಗೆ. ಅದನ್ನು ಕಂಡೇ ಭಕ್ತರು ಆನಂದ ತುಂದಿಲರಾಗುತ್ತಿದ್ದರು. ಜನ್ಮ ಸಾರ್ಥಕವೆಂದು ತಿಳಿಯುತ್ತಿದ್ದರು. ಗುರುಗಳು ಭೌತಿಕವಾಗಿ ನಮ್ಮೊಡನಿಲ್ಲದೇ ಹೋದರೂ ಅವರ ನೆನಪುಗಳ ಕಂಪು ಗಾಳಿಯಲ್ಲಿ ತೇಲಿ ತೇಲಿ ಬರುತ್ತಲೇ ಇದೆ. ಜನಸೇವೆ ಎಂಬ ಒಂದೇ ಸಿದ್ದಾಂತಕ್ಕೆ ಬದ್ಧವಾಗಿ, ಜೀವನಾನುಭವಗಳಿಗೆ ಇಡಿಯಾಗಿ ಸ್ಪಂದಿಸಿದ ಮುಕ್ತ ಮನಸ್ಸಿನ ಪ್ರಾಮಾಣಿಕ ದೃಷ್ಟಿ ಅವರದು. ಅವರಿಗೆ ಎಲ್ಲರೂ ಬೇಕಿತ್ತು. ಎಲ್ಲರಿಗೂ ಅವರು ಬೇಕಿತ್ತು. ರಾಮಕುಂಜದಂತಹ ಹಳ್ಳಿಯ ಪರಿಸರ ಇವರ ಬಾಲ್ಯ ರೂಪಿಸಿತು. ವಿಶ್ವಕ್ಕೆ ಉಪಯೋಗವಾಗುವಂತಹ ಹೆಮ್ಮರವಾಗಿ ಬೆಳೆದರು. ಹೇಗೆ ಬದುಕಬೇಕು ಎಂಬದಕ್ಕೆ ಅವರಿಗಿಂತ ಮಿಗಿಲಾದ ಆದರ್ಶತೆ ಪ್ರಸ್ತುತ ಕಾಲಮಾನದಲ್...