ಕುಕ್ಕೆ ಸುಬ್ರಹ್ಮಣ್ಯದಲ್ಲಿ ವೈಭವದ ವಿಶ್ವಸಂಭ್ರಮ.

ಕುಕ್ಕೆ ಸುಬ್ರಹ್ಮಣ್ಯ:ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿರುವ ಸುಬ್ರಹ್ಮ ಪೂರ್ಣಪ್ರಜ್ಞ ವಿದ್ಯಾಪೀಠದ ಶ್ರೀಮದ್ ಬ್ರಹ್ಮಸೂತ್ರ–ಅನುವ್ಯಾಖ್ಯಾನ–ನ್ಯಾಯಸುಧಾಮಂಗಳ ಮಹೋತ್ಸವದ ಎರಡನೇ ದಿನ ವಿವಿಧ ಧಾರ್ಮಿಕ, ಶಾಸ್ತ್ರೀಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಹಾಗೂ ವಿಜೃಂಭಣೆಯಿಂದ ನೆರವೇರಿದವು.
ಬೆಳಿಗ್ಗೆ 7.30 ರಿಂದ ಅನೇಕ ಪಂಡಿತರು ಹಾಗೂ ಮಹಿಳಾಮಣಿಗಳಿಂದ ಶ್ರೀವಿಷ್ಣುಸಹಸ್ರನಾಮ ಪಾರಾಯಣ ನಡೆಯಿತು. ನಂತರ ಬೆಳಿಗ್ಗೆ 8.30 ರಿಂದ ಶ್ರೀ ನ್ಯಾಯಸುಧಾ ವಿದ್ಯಾರ್ಥಿಗಳಿಂದ ಸುಧಾನುವಾದ ಪಂಡಿತರ ಸಮಕ್ಷಮದಲ್ಲಿ ನೆರವೇರಿತು.
ಅನಂತರ ನವದೆಹಲಿಯ ರಾಷ್ಟ್ರೀಯ ವಿಶ್ವವಿದ್ಯಾಲಯ, ಸುಬ್ರಹ್ಮಣ್ಯ ಮಠದ ವೇದವ್ಯಾಸ ಸಂಶೋಧನ ಕೇಂದ್ರಗಳ ಸಹಯೋಗದಲ್ಲಿ ರಾಷ್ಟ್ರೀಯ ವಿದ್ವತ್ ಸಮ್ಮೇಳನ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಪರಮಪೂಜ್ಯ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾ ಪ್ರಸನ್ನತೀರ್ಥ ಶ್ರೀಪಾದರು ಹಾಗೂ ಪೇಜಾವರ ಮಠಾಧೀಶರಾದ ಶ್ರೀ ವಿಶ್ವ ಪ್ರಸನ್ನತೀರ್ಥ ಶ್ರೀಪಾದರು ದಿವ್ಯ ಸಾನಿಧ್ಯ ವಹಿಸಿದ್ದರು.
“ಮಧ್ವ ಸಿದ್ಧಾಂತದ ಅಸಾಧಾರಣ ಕೊಡುಗೆಗಳು” ಎಂಬ ವಿಷಯದಡಿ ನಡೆದ ಪ್ರಥಮ ಸಮ್ಮೇಳನದ ಅಧ್ಯಕ್ಷತೆಯನ್ನು ವಿದ್ವಾಂಸರಾದ ಡಾ. ಆನಂದತೀರ್ಥ ನಾಗಸಂಪಿಗೆ ವಹಿಸಿದ್ದರು.
ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಅವರು ಮಧ್ವ ಸಿದ್ಧಾಂತದಲ್ಲಿನ ತಂತ್ರಶಾಸ್ತ್ರದ ಕುರಿತು, ಡಾ. ವಂಶಿಕೃಷ್ಣ ಆಚಾರ್ಯರು ಅಷ್ಟಾಂಗ ಯೋಗದ ಕುರಿತು ಹಾಗೂ ವಿದ್ವಾನ್ ಕಿರಣ ಆಚಾರ್ಯರು ಉಪಾಸನೆಯ ಮಹತ್ವದ ಕುರಿತು ಪ್ರಬಂಧ ಮಂಡಿಸಿದರು.
ಕೇಂದ್ರಿಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾದ ಶ್ರೀ ಶ್ರೀನಿವಾಸ ವರಖೇಡಿ ಗಣರಾಜ್ಯೋತ್ಸವದ ಸಂದೇಶದೊಂದಿಗೆ ಧರ್ಮ ಹಾಗೂ ದೇಶಜಾಗೃತಿಯ ಕುರಿತು ಪ್ರೇರಣಾದಾಯಕ ಉಪನ್ಯಾಸ ನೀಡಿದರು.
ಮಧ್ಯಾಹ್ನದ ಸಮ್ಮೇಳನದಲ್ಲಿ ನಾಗಾರಾಧನೆ ಸಂಬಂಧಿಸಿದ ವಿವಿಧ ವಿಷಯಗಳ ಮಂಡನೆ ನಡೆಯಿತು.
ವಿದ್ವಾನ್ ಮಹೇಂದ್ರ ಸೋಮಯಾಜಿ ಸರ್ಪಸಂಸ್ಕಾರದ ಕುರಿತು, ವಿದ್ವಾನ್ ಕೃಷ್ಣಕುಮಾರ ಆಚಾರ್ಯರು ಆಶ್ಲೇಷ ಬಲಿಯ ಕುರಿತು ಪ್ರಬಂಧ ಮಂಡಿಸಿದರು. ಹೆಗ್ಗ ರವೀಂದ್ರ ಭಟ್ರು ಸುಬ್ರಹ್ಮಣ್ಯ ಹಾಗೂ ನಾಗನ ಕುರಿತ ವಿಶಿಷ್ಟ ಮಾಹಿತಿಯನ್ನು ಹಂಚಿಕೊಂಡರು. ಸಂಜೆ ವೇಳೆಗೆ ವಿದ್ಯಾರ್ಥಿಗಳಿಂದ ಮತ್ತೆ ನ್ಯಾಯಸುಧಾನು ವಾದ ನಡೆಯಿತು.
ಸಂಜೆ 5.45ಕ್ಕೆ ಧರ್ಮಸಭೆ ಆರಂಭಗೊಂಡಿತು. ಈ ಸಭೆಯಲ್ಲಿ ಶ್ರೀ ವಿಶ್ವಪ್ರಸನ್ನತೀರ್ಥರು, ಶ್ರೀ ವಿದ್ಯಾಪ್ರಸನ್ನತೀರ್ಥರು ಹಾಗೂ ಕಾಣಿಯೂರು ಮಠಾಧೀಶರು ಸಾನಿಧ್ಯ ವಹಿಸಿದ್ದರು.
ಶಿಕ್ಷಣ ತಜ್ಞರಾದ ಶ್ರೀ ಗುರುರಾಜ ಕರ್ಜಗಿ ಹಾಗೂ ಆರ್. ಸೀತಾರಾಮ ತೋಳ್ಪಾಡಿತ್ತಾಯ ಅವರಿಗೆ ಶ್ರೀ ನರಸಿಂಹಾನುಗ್ರಹ ಪ್ರಶಸ್ತಿ ಪ್ರದಾನಿಸಲಾಯಿತು. ವಿದ್ವಾಂಸರಾದ ಹೆಚ್.ಪಿ. ನಾಗರಾಜ ಆಚಾರ್ಯರನ್ನು ಶ್ರೀ ವಿಜಯಧ್ವಜ ಪ್ರಶಸ್ತಿಯೊಂದಿಗೆ ಸನ್ಮಾನಿಸಲಾಯಿತು.
ಶ್ರೀ ಬೆರನಂಗಿಲ ಹರಿದಾಸ ಭಟ್ ಹಾಗೂ ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಮುಖ್ಯ ಅತಿಥಿಗಳಾಗಿದ್ದರು.
ಕಾರ್ಯಕ್ರಮದ ಅಂತ್ಯದಲ್ಲಿ ವಿದುಷಿ ಅದಿತಿ ಪ್ರೀತಮ್ ಭಟ್, ವಿದುಷಿ ಕಲ್ಯಾಣಿ ಹಾಗೂ ತಂಡದವರಿಂದ ಭರತನಾಟ್ಯ ಪ್ರದರ್ಶನ ಪ್ರೇಕ್ಷಕರನ್ನು ಮನಸೂರೆಗೊಳಿಸಿತು.

Comments

Popular posts from this blog

ಕುಕ್ಕೆ ಸುಬ್ರಹ್ಮಣ್ಯ ರಥಬೀದಿಯಲ್ಲಿ ಭಕ್ತನ ಮೇಲೆ ಸೌಟಿನಿಂದ ಹಲ್ಲೆ – ವೈರಲ್ ವಿಡಿಯೋ, ದೇವಸ್ಥಾನ ಮೆನೇಜರ್ ಮೌನಕ್ಕೆ ಸಾರ್ವಜನಿಕ ಆಕ್ರೋಶ!

ಕುಕ್ಕೆ ಸುಬ್ರಹ್ಮಣ್ಯ: ಸಾರಿಗೆ ವ್ಯವಸ್ಥೆಯಲ್ಲಿ ಖಾಸಗಿ ಬಸ್ ಸಂಸ್ಥೆಯ ನೂತನ ಹೆಜ್ಜೆ – ಗ್ರಾಮೀಣ ಭಾಗದ ಅಭಿವೃದ್ಧಿಗೆ ಬಲ.

ರಾಮಕುಂಜದಲ್ಲಿ ಹೀಗೊಂದು ಬೇನರ್ - ಬೇನರ್ ಅಳವಡಿಸಿ ತಾಕತ್ತು ತೋರಿದ ಜನರು!