ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹುಂಡಿ ಕಳವು ಪ್ರಕರಣ: 7 ವರ್ಷಗಳ ಬಳಿಕ ಆರೋಪಿಗೆ ಶಿಕ್ಷೆ.

ಸುಬ್ರಹ್ಮಣ್ಯ, ಮಾ.25: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹುಂಡಿಯಿಂದ ಹಣ ಕಳವು ಮಾಡಿದ ಪ್ರಕರಣದಲ್ಲಿ ಸುಮಾರು 7 ವರ್ಷಗಳ ಬಳಿಕ ಆರೋಪಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿರುವ ಘಟನೆ ಬೆಳಕಿಗೆ ಬಂದಿದೆ.
2019ರ ಮೇ 16ರಂದು ರಾತ್ರಿ ಸುಮಾರು 9 ಗಂಟೆ ಸುಮಾರಿಗೆ ಸುಳ್ಯ ತಾಲೂಕು ಸುಬ್ರಹ್ಮಣ್ಯ ಗ್ರಾಮದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸನ್ನಿಧಿಯ ಮುಂಭಾಗದಲ್ಲಿ ಇಡಲಾಗಿದ್ದ ಹುಂಡಿಯಿಂದ ₹1,885 ಹಣ ಕಳವು ಮಾಡಲಾಗಿತ್ತು. ಈ ಕುರಿತು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಮೇ 17, 2019ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನಂತರ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಬಳಿಕ ವಿಚಾರಣೆ ನಡೆಸಿದ ಸುಳ್ಯ ಪ್ರಥಮ ದರ್ಜೆ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯವು 2025ರ ಮೇ 17ರಂದು ಆರೋಪಿಯನ್ನು ತಪ್ಪಿತಸ್ಥನೆಂದು ತೀರ್ಪು ನೀಡಿತ್ತು. ನಂತರ ಆರೋಪಿಯನ್ನು ಪ್ರೊಬೇಶನ್ ಆಫ್ ಆಫೆಂಡರ್ಸ್ ಕಾಯ್ದೆ (PO Act) ಅಡಿಯಲ್ಲಿ ಬಿಡುಗಡೆ ಮಾಡಲಾಗಿತ್ತು.
ಆದರೆ ನಂತರ ಆರೋಪಿಯು ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದರಿಂದ, ನ್ಯಾಯಾಲಯವು ವಾರೆಂಟ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಹೆಡ್ ಕಾಂಸ್ಟೇಬಲ್ ಮಹೇಶ್ (HC 369) ಮತ್ತು ಪೊಲೀಸ್ ಕಾಂಸ್ಟೇಬಲ್ ಕಿರಣ್ (PC 475) ಅವರು 2026ರ ಮಾರ್ಚ್ 24ರಂದು ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಗುಂಗೂರುಮಳೆ ಗ್ರಾಮದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮಾರ್ಚ್ 25ರಂದು ಸುಳ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶಿವಣ್ಣ ಹೆಚ್.ಆರ್ ಅವರು ಆರೋಪಿಗೆ ಐಪಿಸಿ ಕಲಂ 380 ಅಡಿಯಲ್ಲಿ ಒಂದು ವರ್ಷ ಸರಳ ಕಾರಾಗೃಹ ಶಿಕ್ಷೆ ಹಾಗೂ ₹1,000 ದಂಡ ವಿಧಿಸಿದ್ದಾರೆ. ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ 10 ದಿನಗಳ ಕಾರಾಗೃಹ ಶಿಕ್ಷೆ ವಿಧಿಸುವಂತೆ ಆದೇಶಿಸಿದ್ದಾರೆ.
ಈ ಪ್ರಕರಣದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರಾಗಿ ಪ್ರೀತಿ ಎಂ.ಸಿ ಅವರು ವಾದ ಮಂಡಿಸಿದ್ದು, ಕೋರ್ಟ್ ಪಿಸಿಯಾಗಿ ಗುರುಬಸು ಕಾರ್ಯನಿರ್ವಹಿಸಿದ್ದಾರೆ.
ಆರೋಪಿಯನ್ನು ಅಶ್ವನ್ ಗೌಡ ಜೆ.ಪಿ (ತಂದೆ: ಪ್ರಕಾಶ), ಗುಂಗೂರುಮಳೆ ಗ್ರಾಮ, ತಿಪಟೂರು ತಾಲೂಕು, ತುಮಕೂರು ಜಿಲ್ಲೆ ಎಂದು ಗುರುತಿಸಲಾಗಿದೆ.

Comments

Popular posts from this blog

ಕುಕ್ಕೆ ಸುಬ್ರಹ್ಮಣ್ಯ ರಥಬೀದಿಯಲ್ಲಿ ಭಕ್ತನ ಮೇಲೆ ಸೌಟಿನಿಂದ ಹಲ್ಲೆ – ವೈರಲ್ ವಿಡಿಯೋ, ದೇವಸ್ಥಾನ ಮೆನೇಜರ್ ಮೌನಕ್ಕೆ ಸಾರ್ವಜನಿಕ ಆಕ್ರೋಶ!

ರಾಮಕುಂಜದಲ್ಲಿ ಹೀಗೊಂದು ಬೇನರ್ - ಬೇನರ್ ಅಳವಡಿಸಿ ತಾಕತ್ತು ತೋರಿದ ಜನರು!

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಕಲಿ ವಸತಿಗೃಹ ವೆಬ್‌ಸೈಟ್ ಮೂಲಕ ಸೈಬರ್ ವಂಚನೆ ಆರೋಪ: ಭಕ್ತರು ಎಚ್ಚರ ವಹಿಸುವಂತೆ ಮನವಿ