ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವಿಭಾಗಕ್ಕೆ ಕೇಂದ್ರೀಕೃತ ಆನೆ ಕಾರ್ಯಪಡೆ (Elephant Task Force) ರಚಿಸಲು ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಸುಳ್ಯ ಹಾಗೂ ಕಡಬ ತಾಲೂಕುಗಳಲ್ಲಿ ಹೆಚ್ಚುತ್ತಿರುವ ಕಾಡಾನೆ ಹಾವಳಿಯಿಂದ ಮಾನವ ಸಾವು–ನೋವು ಮತ್ತು ಬೆಳೆ ಹಾನಿ ಪ್ರಕರಣಗಳು ಏರಿಕೆಯಾಗುತ್ತಿದ್ದ ಹಿನ್ನೆಲೆ, ಈ ಕಾರ್ಯಪಡೆಯನ್ನು ಶೀಘ್ರ ಕಾರ್ಯಗತಗೊಳಿಸಲು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದರು.
ಏಕೆ ಅಗತ್ಯವಾಯಿತು ಕಾರ್ಯಪಡೆ?
ಮಂಗಳೂರು ವಿಭಾಗದ ಉಪ್ಪಿನಂಗಡಿ, ಸುಳ್ಯ, ಬೆಳ್ತಂಗಡಿ, ಪುತ್ತೂರು, ಪಂಜ ಹಾಗೂ ಸುಬ್ರಹ್ಮಣ್ಯ ವಲಯಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಪ್ರತೀ ವರ್ಷವೂ ಮಾನವ ಸಾವುಗಳು ಮತ್ತು ಬೆಳೆ ಪರಿಹಾರದ ಪ್ರಕರಣಗಳು ಹೆಚ್ಚುತ್ತಿವೆ. ಆನೆಗಳನ್ನು ಅರಣ್ಯ ಪ್ರದೇಶಕ್ಕೆ ಹಿಮ್ಮೆಟ್ಟಿಸಲು ಬೇರೆ ಜಿಲ್ಲೆಯಿಂದ ಕಾರ್ಯಪಡೆ ಕರೆದೊಯ್ಯಬೇಕಾಗುತ್ತಿದ್ದು, ತುರ್ತು ಕ್ರಮದಲ್ಲಿ ವಿಳಂಬವಾಗುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿತ್ತು.
ಈ ಹಿನ್ನೆಲೆಯಲ್ಲಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಶಿಫಾರಸ್ಸಿನ ಮೇರೆಗೆ ಸರ್ಕಾರ ಪ್ರಸ್ತಾವನೆಯನ್ನು ಸಮಗ್ರವಾಗಿ ಪರಿಶೀಲಿಸಿ, ಮಂಗಳೂರು ವಿಭಾಗಕ್ಕೆ ಹೊಸ ಆನೆ ಕಾರ್ಯಪಡೆ ರಚಿಸಲು ಆದೇಶಿಸಿದೆ.
ಕಾರ್ಯಪಡೆಯ ರಚನೆ ಹೇಗೆ?
ಸರ್ಕಾರದ ಆದೇಶದಂತೆ ಒಟ್ಟು 28 ಸಿಬ್ಬಂದಿಗಳನ್ನೊಳಗೊಂಡ ಕಾರ್ಯಪಡೆ ರಚಿಸಲಾಗುತ್ತಿದೆ:
ಉಪ ವಲಯ ಅರಣ್ಯಾಧಿಕಾರಿ – 01 (ನಿಯೋಜನೆ)
ಗಸ್ತು ಅರಣ್ಯ ವಾಲಕರು – 02 (ನಿಯೋಜನೆ)
ವಾಹನ ಚಾಲಕರು/ತಾತ್ಕಾಲಿಕ ಸಿಬ್ಬಂದಿಗಳು – 25 (ಹೊರಗುತ್ತಿಗೆ ಆಧಾರ)
ಕೇಂದ್ರಸ್ಥಾನ ಸುಳ್ಯ
ಈ ಆನೆ ಕಾರ್ಯಪಡೆಯ ಕೇಂದ್ರ ಕಚೇರಿ ಸುಳ್ಯದಲ್ಲೇ ಕಾರ್ಯನಿರ್ವಹಿಸಲಿದ್ದು, ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಂಗಳೂರು ವಿಭಾಗದ ನಿರ್ದೇಶನದಲ್ಲಿ ಕೆಲಸ ಮಾಡಲಿದೆ.
ಪ್ರಮುಖ ಜವಾಬ್ದಾರಿಗಳು
ಕಾಡಾನೆ ಹಾವಳಿ ಪ್ರದೇಶಗಳಲ್ಲಿ ನಿರಂತರ ಗಸ್ತು
ಜನವಸತಿ, ಕೃಷಿ ಪ್ರದೇಶ, ಕಾಫಿ ಎಸ್ಟೇಟ್‌ಗಳಲ್ಲಿ ಆನೆಗಳ ಚಲನವಲನ ಗಮನಿಸಿ ತಕ್ಷಣ ಹಿಮ್ಮೆಟ್ಟಿಸುವುದು
ಗ್ರಾಮಸ್ಥರಿಗೆ ಎಚ್ಚರಿಕೆ ಮಾಹಿತಿ ನೀಡುವುದು
ನಿಯಂತ್ರಣ ಕೊಠಡಿ (Control Room) ಸ್ಥಾಪನೆ ಮತ್ತು ಸಾರ್ವಜನಿಕರಿಗೆ ದೂರವಾಣಿ ಸಂಖ್ಯೆ ಪ್ರಕಟಣೆ
ಅಗತ್ಯ ವಾಕಿ-ಟಾಕಿ, ಬಂದೂಕು, ಪಟಾಕಿ ಸೇರಿದಂತೆ ತುರ್ತು ಉಪಕರಣಗಳ ಒದಗಿಕೆ
ಶಾಸಕಿ ಪ್ರತಿಕ್ರಿಯೆ
“ಸುಳ್ಯ ಹಾಗೂ ಕಡಬ ಭಾಗದ ಜನರು ಬಹುಕಾಲದಿಂದ ಎದುರಿಸುತ್ತಿದ್ದ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವ ದಾರಿಯಲ್ಲಿದೆ. ಕಾರ್ಯಪಡೆ ಶೀಘ್ರ ಕಾರ್ಯಾರಂಭ ಮಾಡಬೇಕು,” ಎಂದು ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದ್ದಾರೆ.
ಸರ್ಕಾರದ ಈ ನಿರ್ಧಾರದಿಂದ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಗ್ರಾಮಸ್ಥರಿಗೆ ತಾತ್ಕಾಲಿಕ ಪರಿಹಾರ ಸಿಗುವ ನಿರೀಕ್ಷೆ ವ್ಯಕ್ತವಾಗಿದೆ. ಕಾಡಾನೆ ಹಾವಳಿ ನಿಯಂತ್ರಣದ ಜೊತೆಗೆ ಜನರ ಜೀವ ಮತ್ತು ಕೃಷಿ ಸಂಪತ್ತಿನ ರಕ್ಷಣೆಗೇ ಈ ಕ್ರಮ ಸಹಕಾರಿಯಾಗಲಿದೆ.
Post a Comment