ಸುಬ್ರಹ್ಮಣ್ಯ ಮಠದಲ್ಲಿ ಅಂತರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ“ವಸ್ತು ಸಂಗ್ರಹಾಲಯಗಳು ಕೇವಲ ಹಳೆಯ ವಸ್ತುಗಳ ಸಂಗ್ರಹವಲ್ಲ, ಅವು ಜ್ಞಾನ ಮತ್ತು ಸಂಸ್ಕೃತಿಯ ವಿದ್ಯಾಕೇಂದ್ರಗಳು” – ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ.

ಸುಬ್ರಹ್ಮಣ್ಯ, ಮೇ 18:
ಅಂತರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆಯ ಅಂಗವಾಗಿ ಸುಬ್ರಹ್ಮಣ್ಯದ ಶ್ರೀನಿಕೇತನ ವಸ್ತು ಸಂಗ್ರಹಾಲಯ ಮತ್ತು ಸಂಶೋಧನಾ ಕೇಂದ್ರದಲ್ಲಿ ಸೋಮವಾರ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಶ್ರೀ ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳು ಉದ್ಘಾಟಿಸಿ, ವಸ್ತು ಸಂಗ್ರಹಾಲಯದ ನೂತನ ವೆಬ್‌ಸೈಟ್‌ನ್ನು ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಪಾದರು, “ವಸ್ತು ಸಂಗ್ರಹಾಲಯಗಳು ಕೇವಲ ಹಳೆಯ ವಸ್ತುಗಳನ್ನು ಸಂಗ್ರಹಿಸುವ ಸ್ಥಳಗಳಲ್ಲ. ಅವು ನಮ್ಮ ಇತಿಹಾಸ, ಸಂಸ್ಕೃತಿ, ಪರಂಪರೆ, ಆಚರಣೆ ಮತ್ತು ಜೀವನಶೈಲಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ವಿದ್ಯಾಕೇಂದ್ರಗಳಾಗಿವೆ” ಎಂದು ಹೇಳಿದರು.
ಮರದ ಕೆತ್ತನೆಗಳು, ಪುರಾತನ ನಾಣ್ಯಗಳು, ಹಸ್ತಪ್ರತಿಗಳು, ಪೂರ್ವಿಕರು ಬಳಸುತ್ತಿದ್ದ ದಿನನಿತ್ಯದ ಉಪಯೋಗದ ವಸ್ತುಗಳು, ತೂಕ-ಅಳತೆಯ ಸಾಮಗ್ರಿಗಳು, ಜಾನಪದ ವಸ್ತುಗಳು ಹಾಗೂ ಹಳೆಯ ನೋಟುಗಳು ಮುಂತಾದ ಅನೇಕ ಪುರಾತನ ಸಂಗ್ರಹಗಳು ವಿವಿಧ ಕಾಲಘಟ್ಟಗಳ ಸಾಹಿತ್ಯ, ಸಂಸ್ಕೃತಿ ಹಾಗೂ ಸಾಮಾಜಿಕ ಬದುಕಿನ ಬಗ್ಗೆ ಅಮೂಲ್ಯ ಮಾಹಿತಿಯನ್ನು ನೀಡುತ್ತವೆ ಎಂದು ಅವರು ಅಭಿಪ್ರಾಯಪಟ್ಟರು. ಇಂತಹ ಪರಂಪರೆಯನ್ನು ಉಳಿಸಿ ಮುಂದಿನ ತಲೆಮಾರಿಗೆ ತಲುಪಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ವಸ್ತು ಸಂಗ್ರಹಾಲಯದ ವೆಬ್‌ಸೈಟ್‌ನ್ನು ಬಿಡುಗಡೆಗೊಳಿಸಿದ ಬಳಿಕ ಮಾತನಾಡಿದ ಅವರು, “ನಮ್ಮ ಸಂಸ್ಥೆ ನಡೆಸುತ್ತಿರುವ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಂಶೋಧನಾ ಚಟುವಟಿಕೆಗಳ ಮಾಹಿತಿಯನ್ನು ವೆಬ್‌ಸೈಟ್ ಮೂಲಕ ಎಲ್ಲರೂ ತಿಳಿದುಕೊಳ್ಳಬಹುದು. ವಿದ್ಯಾರ್ಥಿಗಳು ಮತ್ತು ಸಂಶೋಧಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿದ್ದ ಮಲೆನಾಡು ಇತಿಹಾಸ ಮಂಡಳದ ಅಧ್ಯಕ್ಷ ಹಾಗೂ ಪುರಾತತ್ವ ತಜ್ಞರಾದ ಡಾ. ಎಸ್.ಜಿ. ಸಾಮಕ್ ಅವರು, ವಸ್ತು ಸಂಗ್ರಹಾಲಯಗಳ ಉದ್ಭವ, ಅವುಗಳ ಮಹತ್ವ ಹಾಗೂ ವಿಶ್ವದ ವಿವಿಧ ದೇಶಗಳಲ್ಲಿ ತಾವು ವೀಕ್ಷಿಸಿದ ವಸ್ತು ಸಂಗ್ರಹಾಲಯಗಳ ವೈಶಿಷ್ಟ್ಯಗಳ ಕುರಿತು ವಿವರಿಸಿದರು.
ಭಾರತದ ರಾಷ್ಟ್ರೀಯ ವಸ್ತು ಸಂಗ್ರಹಾಲಯಗಳ ಕುರಿತು ಮಾಹಿತಿ ನೀಡಿದ ಅವರು, “ಐತಿಹಾಸಿಕ, ಪೌರಾಣಿಕ ಹಾಗೂ ಸಾಂಸ್ಕೃತಿಕ ಮಹತ್ವ ಹೊಂದಿರುವ ಸುಬ್ರಹ್ಮಣ್ಯದಂತಹ ಕ್ಷೇತ್ರಗಳಲ್ಲಿ ವಸ್ತು ಸಂಗ್ರಹಾಲಯಗಳ ಬೆಳವಣಿಗೆ ಪ್ರವಾಸೋದ್ಯಮಕ್ಕೆ ಹೊಸ ದಿಕ್ಕು ನೀಡಬಲ್ಲದು. ಸ್ಥಳೀಯ ಇತಿಹಾಸ, ಪರಂಪರೆ ಹಾಗೂ ಆಚರಣೆಗಳನ್ನು ಪರಿಚಯಿಸುವ ಕೇಂದ್ರಗಳಾಗಿ ಇವುಗಳನ್ನು ರೂಪಿಸಿದರೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಬಹುದು. ಇದರಿಂದ ವ್ಯಾಪಾರ, ಉದ್ಯಮ, ಸಾರಿಗೆ ಮತ್ತು ಸ್ಥಳೀಯ ಆರ್ಥಿಕತೆಯೂ ಬೆಳವಣಿಗೆ ಕಾಣಲಿದೆ” ಎಂದು ಅಭಿಪ್ರಾಯಪಟ್ಟರು.
ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರಾದ ಡಾ. ಜಿ.ವಿ. ಕಲ್ಲಾಪುರ ಅವರು ಪ್ರಸ್ತಾವಿಕವಾಗಿ ಮಾತನಾಡಿ, “ಈ ವರ್ಷದ ಅಂತರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆಯ ಘೋಷವಾಕ್ಯ ‘ವಸ್ತು ಸಂಗ್ರಹಾಲಯಗಳು ವಿಭಜಿತ ಜಗತ್ತನ್ನು ಒಂದುಗೂಡಿಸುತ್ತವೆ’ ಎಂಬುದಾಗಿದೆ. ಶ್ರೀ ನಿಕೇತನ ವಸ್ತು ಸಂಗ್ರಹಾಲಯದಲ್ಲಿ ವಿವಿಧ ದೇಶಗಳ ಕರೆನ್ಸಿಗಳು ಸೇರಿದಂತೆ ಅನೇಕ ಅಪರೂಪದ ಸಂಗ್ರಹಗಳನ್ನು ಇರಿಸಲಾಗಿದೆ. ಇವುಗಳ ಮೂಲಕ ವಿವಿಧ ದೇಶಗಳ ಇತಿಹಾಸ ಮತ್ತು ಸಂಸ್ಕೃತಿಯನ್ನು ಅರಿಯಲು ಸಾಧ್ಯವಾಗುತ್ತದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಶ್ರೀ ಸುಬ್ರಹ್ಮಣ್ಯ ಮಠದ ದಿವಾನರಾದ ಶ್ರೀ ಸುದರ್ಶನ ಜೋಯಿಸ್, ಇತಿಹಾಸ ಸಂಶೋಧಕರಾದ ಡಾ. ಕೆ.ಎಸ್.ಎನ್. ಉಡುಪ ಹಾಗೂ ನಿವೃತ್ತ ಸಂಸ್ಕೃತ ಉಪನ್ಯಾಸಕರಾದ ಡಾ. ವೆಂಕಟೇಶ್ ಎಂ. ಗಿರಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕುಮಾರಿ ಅಪೂರ್ವ ಜೋಯಿಸ್ ಹಾಗೂ ಕುಮಾರಿ ಮಾನಸಿ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಡಾ. ವೆಂಕಟೇಶ್ ಎಂ. ಗಿರಿ ನಿರೂಪಿಸಿ ವಂದನಾರ್ಪಣೆ ಸಲ್ಲಿಸಿದರು. ಸ್ಥಳೀಯ ಕಾಲೇಜುಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Comments

Popular posts from this blog

ಕುಕ್ಕೆ ಸುಬ್ರಹ್ಮಣ್ಯ ರಥಬೀದಿಯಲ್ಲಿ ಭಕ್ತನ ಮೇಲೆ ಸೌಟಿನಿಂದ ಹಲ್ಲೆ – ವೈರಲ್ ವಿಡಿಯೋ, ದೇವಸ್ಥಾನ ಮೆನೇಜರ್ ಮೌನಕ್ಕೆ ಸಾರ್ವಜನಿಕ ಆಕ್ರೋಶ!

ಕುಕ್ಕೆ ಸುಬ್ರಹ್ಮಣ್ಯ: ಸಾರಿಗೆ ವ್ಯವಸ್ಥೆಯಲ್ಲಿ ಖಾಸಗಿ ಬಸ್ ಸಂಸ್ಥೆಯ ನೂತನ ಹೆಜ್ಜೆ – ಗ್ರಾಮೀಣ ಭಾಗದ ಅಭಿವೃದ್ಧಿಗೆ ಬಲ.

ರಾಮಕುಂಜದಲ್ಲಿ ಹೀಗೊಂದು ಬೇನರ್ - ಬೇನರ್ ಅಳವಡಿಸಿ ತಾಕತ್ತು ತೋರಿದ ಜನರು!