*ಶಿಕ್ಷಕನೊಳಗಿದ್ದ ಸೈನಿಕ* *ಶ್ರೀ ವಿಷ್ಣುಪ್ರಸಾದ್. ಸಿ* *ವಿಶ್ರಾಂತ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ, ಪುತ್ತೂರು*

ಹೌದು, ಸರಕಾರಿ ಸೇವೆ ದೇವರ ಸೇವೆ. ಸುಮಾರು ಮೂವತ್ತೈದು ವರ್ಷಗಳ ನಿರಂತರ ಸೇವೆ. ಅದರಲ್ಲೂ ತಾಲೂಕು, ಜಿಲ್ಲಾ ವ್ಯಾಪ್ತಿಯ ಅಧಿಕಾರಿಯಾಗಿ ಕಪ್ಪು ಚುಕ್ಕೆ ಇಲ್ಲದೆ ನಿವೃತ್ತಿ ಹೊಂದುವುದು ಇಂದಿನ ದಿನಗಳಲ್ಲಿ ಸುಲಭದ ಮಾತಲ್ಲ. ಜನರು, ಜನರಿಗಾಗಿ, ಜನರಿಂದ ನಡೆಯುವ ಸರ್ಕಾರಿ ವ್ಯವಸ್ಥೆಯಲ್ಲಿ ದಡ ಸೇರುವುದು ದೊಡ್ಡ ಸಾಧನೆಯೇ ಸರಿ.  

ಅರ್ಥ ಮಾಡಿಕೊಳ್ಳುವ ಮನಸ್ಸು, ಕ್ಷಮಿಸುವ ಗುಣ, ಕೈಜೋಡಿಸುವ ಸ್ನೇಹ, ಸಮಾಧಾನ ಮಾಡುವ ಹೃದಯ, ಹದವರಿತ ತಾಳ್ಮೆಯ ಮಾತು, ಪ್ರಾಮಾಣಿಕ ದುಡಿಮೆ – ಇವುಗಳೇ ಜೀವನದ ನಿಜವಾದ ಆಸ್ತಿ. ಅದನ್ನೇ ವೃತ್ತಿ ಕೌಶಲ್ಯ ಎನ್ನುತ್ತಾರೆ. ಪದವಿ ಪಡೆದ ಮಾತ್ರಕ್ಕೆ ಇವೆಲ್ಲ ಕೈಗೆಟುಕದು. ಅಂಕ ಗಳಿಸಿದ ಮಾತ್ರಕ್ಕೆ ಸಿದ್ಧಿ, ಸಾಧನೆಯಾಗದು.  

*ಬಹುಮುಖ ಪಾತ್ರಧಾರಿ*  

ಪುತ್ತೂರು ತಾಲೂಕು ಶಾಲಾ ಶಿಕ್ಷಣ ಇಲಾಖೆಯಲ್ಲಿ ಬಹುಮುಖ ಪಾತ್ರಧಾರಿಯಾಗಿ ಹಲವು ವರ್ಷಗಳಿಂದ ನಮ್ಮೊಂದಿಗೆ ನಮ್ಮವರಾಗಿದ್ದರು. 2026ರ ಮೇ ತಿಂಗಳ 30ನೇ ತಾರೀಕು ಹಸಿರು ಶಾಯಿಯ ಲೇಖನಿಗೆ ವಿಶ್ರಾಂತಿ ನೀಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಮೆಟ್ಟಿಲು ಇಳಿದು ಹೋದವರು ಶ್ರೀ ವಿಷ್ಣುಪ್ರಸಾದ್. ಸಿ.

ಮನದಲ್ಲಿ ವಿಶಾಲತೆ, ಸೇವೆಯಲ್ಲಿ ನಮ್ರತೆ, ಸ್ನೇಹದಲ್ಲಿ ಪರಿಶುದ್ಧತೆ, ವ್ಯವಹಾರದಲ್ಲಿ ಸಭ್ಯತೆ, ಮುಖದಲ್ಲಿ ಪ್ರಸನ್ನತೆ, ಪರಿವಾರದಲ್ಲಿ ಏಕತೆ, ಮಾತಿನಲ್ಲಿ ಮಧುರತೆ, ಸಂಬಂಧದಲ್ಲಿ ನಿರ್ಲಿಪ್ತತೆ, ಸಂಸ್ಕಾರದಲ್ಲಿ ಶುದ್ಧತೆ – ಅವರ ವ್ಯಕ್ತಿತ್ವಕ್ಕೆ ತಿಲಕಪ್ರಾಯವಾಯಿತು.  

ಓದಿನಿಂದ ಕಲಿತ ಪಾಠ ಮರೆಯಬಹುದು, ಆದರೆ ಅನುಭವದಿಂದ ಕಲಿತ ಪಾಠ ಮರೆಯದು ಎನ್ನುತ್ತಾರೆ. ನಮ್ಮ ಕಣ್ಣಿಗೆ ಅವರು ಕೇವಲ ಶಿಕ್ಷಕರಾಗಿದ್ದರು. ಆದರೆ ಅವರ ಅನುಭವ ಸಾಗರ ಅವರನ್ನು ಶಿಕ್ಷಕರನ್ನಾಗಿರಲು ಬಿಡಲಿಲ್ಲ. ಶಿಕ್ಷಕ ವೃತ್ತಿಗಿಂತ ಮೊದಲ 16 ವರ್ಷಗಳ ಸೇನೆಯಲ್ಲಿನ ಸೇವೆ ತಿಳಿಯದವರೇ ಸಾಕಷ್ಟು ಮಂದಿ. ಅವರ ಬದುಕಿನ ಹಾದಿಯ ತಿಳಿದುಕೊಳ್ಳಬೇಕೆಂಬ ಕುತೂಹಲ ಬಹಳ ದಿನಗಳಿಂದ ನನ್ನಲ್ಲಿ ಮನೆ ಮಾಡಿತ್ತು. ಮಾತನಾಡುತ್ತಾ ಹೋದಂತೆ ಅವರ ಅದ್ಭುತ ಅನುಭವ ಕಂಡು ಅಚ್ಚರಿಪಟ್ಟೆನು.  

*ವಿದ್ಯಾಭ್ಯಾಸದ ಹಾದಿ*  

ಅವರ ಅಪ್ಪ ಬುನಾದಿ ಶಿಕ್ಷಣಕ್ಕೆ ಹೆಸರಾಗಿದ್ದ ಮಾಯಿಪ್ಪಾಡಿಯಲ್ಲಿ ಶಿಕ್ಷಕರಾಗಿದ್ದವರು. ಇವರಿಗೆ ಅವರೇ ಆದರ್ಶರಾದರು. ಅಧ್ಯಾಪಕನೇ ಆಗಬೇಕೆಂಬುದು ಅವರ ಸಂಕಲ್ಪವಾಗಿತ್ತು. ಮಾಯಿಪ್ಪಾಡಿ, ನೀರ್ಚಾಲು, ವಿಟ್ಲ ಜೂನಿಯರ್ ಕಾಲೇಜ್, ಪುತ್ತೂರಿನ ವಿವೇಕಾನಂದ ಕಾಲೇಜು, ಮಂಗಳೂರಿನ ಸರಕಾರಿ ಶಿಕ್ಷಣ ಮಹಾವಿದ್ಯಾಲಯ ಇವರ ಶೈಕ್ಷಣಿಕ ಬದುಕು ರೂಪಿಸಿತು.  

1987ರಲ್ಲಿ ಘಟ್ಟದ ಮೇಲಿನ ಸಕಲೇಶಪುರ ರೋಟರಿ ಇಂಗ್ಲಿಷ್ ಮಾಧ್ಯಮ ಶಾಲೆ ಶಿಕ್ಷಕ ವೃತ್ತಿಗೆ ಕೈಬೀಸಿ ಕರೆಯಿತು. ತಾನೊಂದು ಬಗೆದರೆ ದೈವ ಬೇರೊಂದು ಬಗೆಯಿತು ಎಂಬಂತೆ ಇವರ ಶಿಕ್ಷಣ ದಾಹ ಸುಮ್ಮನೆ ಕೂರಲು ಬಿಡಲಿಲ್ಲ. 1989ರ ಅದೊಂದು ದಿನ ಇವರ ಅಣ್ಣ ಮಂಗಳೂರಿನಲ್ಲಿ ಆರ್ಮಿ ರಿಕ್ರೂಟ್ಮೆಂಟ್ ಪರೀಕ್ಷೆ ಇದೆ ಪ್ರಯತ್ನ ಮಾಡಿ ನೋಡು ಎಂಬುದಾಗಿ ಸಲಹೆ ನೀಡಿದರು ಯಾಕೆಂದರೆ ಅವರು ಪ್ರಯತ್ನ ಪಟ್ಟು ವಿಫಲರಾಗಿದ್ದರು.  

ಚಾಲಾಕಿ ಬುದ್ಧಿಯ ಇವರು ಆರ್ಮಿ ಸೇರಿದರೆ ಭವಿಷ್ಯದಲ್ಲಿ ಇಡುಗಂಟಾಗಬಹುದೆಂದು ನಂಬಿದ್ದರು. ಪರೀಕ್ಷೆ ಬರೆದರು, ಆಯ್ಕೆಯೂ ಆದರು. ಆರ್ಮಿ ಸೇರಿಯೇ ಬಿಟ್ಟರು. ಮೊದಲು ಕಾಲಿಟ್ಟದ್ದೇ ರಾಜಧಾನಿ ನಗರ ಬೆಂಗಳೂರಿನಲ್ಲಿ. ಸೇನಾ ಸೇವಾ ಕೋರ್ (ASC) ಸೇರಿದ ಇವರ ಚಿತ್ತದಲ್ಲಿ ಶಿಸ್ತಿನ ಹುತ್ತ ಕಟ್ಟಲಾರಂಭಿಸಿತು.  

*ಸೈನ್ಯದ ನಂಟು ಬದುಕಿಗೆ ಗಂಟು*  

ಸೇನೆ ಅಂದರೆ ಕೇಳಬೇಕೆ? ಅದರೊಳಗೆ ಯಾವುದೇ ವೃತ್ತಿಗಾಗಿಯಾದರೂ ಒಮ್ಮೆ ಒಳಹೊಕ್ಕರೆ ಸಾಕು, ಶಿಸ್ತು ಉಸಿರಾಗಿ ಬಿಡುವುದು. ಇವರಿಗೆ ಆರ್ಮಿಯಲ್ಲಿ ಒಲಿದು ಬಂದದ್ದು ಕ್ಲೇರಿಕಲ್ (ಗುಮಾಸ್ತ) ಹುದ್ದೆ. ಕೇವಲ ಬರವಣಿಗೆಗೆ ಎಂದು ನಮಗೆ ಅನಿಸಬಹುದು. ಆದರೆ ಅಷ್ಟೇ ಅಲ್ಲ. ಅಲ್ಲಿ ಸೈನ್ಯದ ಗತ್ತು, ಶಿಸ್ತು ಎಲ್ಲವೂ ಒಳಗೊಂಡಿರುವುದು ಎನ್ನುತ್ತಾರೆ ಅವರು.  

ಕೆಲಸಕ್ಕೆ ಸೇರಿ ಆರು ತಿಂಗಳುಗಳಲ್ಲಿ ಬೆಂಗಳೂರು ಬಿಟ್ಟು ಹಾರಿದ್ದು, ಏರಿದ್ದು ಅರುಣಾಚಲದ ಗಡಿ ಭಾಗದ ತವಾಂಗ್ ಮತ್ತು ಧವಾಂಗ್ ಎಂಬ ಏರು ಭೂಮಿಯನ್ನು. ಅದು ಚೀನಾ ಗಡಿ ರೇಖೆಯ ಅಂಚಿನ ಬಳಿ ಇದೆ. ನಿತ್ಯ ಚಳಿ ಅಲ್ಲಿನ ಹವೆಯಾದರೆ, ಭಾರತ-ಚೀನಾದ ಗಡಿ ಕದನ ಗರ್ಭದಲ್ಲಿ ಚಳಿ ಹುಟ್ಟಿಸುವ ಅತಿ ಸೂಕ್ಷ್ಮ ಪ್ರದೇಶ. ಯೌವನದ ಹೊಳೆಯಲ್ಲಿ ಈಜುತ್ತಿದ್ದ ವಿಷ್ಣುಪ್ರಸಾದರಿಗೆ ಅದು ರೋಮಾಂಚಕಾರಿ ಸಂಚಲನ ಉಂಟುಮಾಡಿತ್ತು.  

*ಭಯೋತ್ಪಾದನೆಯ ಅಂಗಳದಿಂದ ಬದುಕಿ ಬಂದರು*  

ಬಾಣಲೆಯಿಂದ ಬೆಂಕಿಗೆ ಎಂಬಂತೆ 1994ರಲ್ಲಿ ಜಮ್ಮುನಗರಕ್ಕೆ ವರ್ಗಾವಣೆಗೊಂಡರು. ಅದು ಪ್ರಕೃತಿ ರಮಣೀಯ ತಾಣವಾದರೂ ರಣರಂಪದ ಅಂಗಣವಾಗಿತ್ತು. ಇವರು ರಕ್ಷಣಾ ಕೋಟೆಯ ಒಳಗಿದ್ದರೂ ಜೀವಕ್ಕೆ ರಕ್ಷಣೆ ಇಲ್ಲದ ದಿನಗಳು ಜಮ್ಮು-ಕಾಶ್ಮೀರದಲ್ಲಿ ನೆಲೆಸಿತ್ತು. ಅಂದು ಗಂಡೆದೆಗೆ ಹೆಸರಾಗಿದ್ದ ಜನರಲ್ ಕೆ.ವಿ ಕೃಷ್ಣರಾವ್ ಅಲ್ಲಿನ ಗವರ್ನರ್ ಆಗಿದ್ದರು. ಪ್ರಜಾಪ್ರಭುತ್ವ ದಿನದಂದು ಅವರ ಸಾರ್ವಜನಿಕ ಭಾಷಣವನ್ನು ಕಾಣುತ್ತಿದ್ದಂತೆ ಬಾಂಬ್ ಸ್ಫೋಟ ಎಗ್ಗಿಲ್ಲದೆ ನಡೆದು ಭಯಭೀತರಾದ ನೆನಪು ಇನ್ನೂ ಕಣ್ಣಲ್ಲಿ, ಮನದಲ್ಲಿ ತುಂಬಿಕೊಂಡಿದೆ ಎನ್ನುತ್ತಾರೆ.  
              
*ಸೈನಿಕನ ಮನಸ್ಸು ಶಿಕ್ಷಕನ ಹೃದಯ*  

ಜಮ್ಮುವಿನಲ್ಲಿದ್ದಾಗ ಆರ್ಮಿಯಲ್ಲಿದ್ದು ಬರ್ಮೀಸ್ ಭಾಷೆ ಅರಿತವರಿಗೆ ತುಂಬಾ ಬೇಡಿಕೆ ಇತ್ತು. ಗಡಿ ಭಾಗದ ನುಸುಳುಕೋರರು, ಶತ್ರು ರಾಷ್ಟ್ರದ ಆತಂಕವಾದಿಗಳು, ದೇಶದೊಳಗಿನ ಹಿತಶತ್ರುಗಳ ನಡುವೆ ದೂರವಾಣಿ ಸಂಭಾಷಣೆ ಸದಾ ನಡೆಸುತ್ತಿದ್ದರು. ದೇಶದ ರಕ್ಷಣೆಯ ದೃಷ್ಟಿಯಿಂದ ಇಂತಹ ಸಂಭಾಷಣೆಗಳನ್ನು ಕದ್ದಾಲಿಸಿ, ಇಂಟೆಲಿಜೆನ್ಸ್ಗೆ ಭಾಷಾಂತರಿಸಿ ಸುಳಿವು ನೀಡಲು ಬರ್ಮೀಸ್ ಭಾಷಾಂತರ ಬೇಕಿತ್ತು. ಇದನ್ನು ಕಲಿತು ಸೇವೆಗೆ ಸಿದ್ಧರಿದ್ದರು.  

ಜಮ್ಮುವಿನ ಮೈ ನವಿರೇಳಿಸಿದ ಭಯೋತ್ಪಾದನೆಯ ದೃಶ್ಯಗಳ ನಡುವೆ ಎರಡೂವರೆ ವರ್ಷಗಳ ಕಾಲ ವೃತ್ತಿ ಪೂರೈಸಿ, ಬಿಹಾರ ರಾಜ್ಯದ ಗಂಗಾ ತಟದ ದಾನಾಪುರ ಎಂಬಲ್ಲಿಗೆ ಸೇವಾ ಪಯಣ ಸಾಗಿತು. ಅದು ಆರ್ಮಿ ರಿಕ್ರೂಟ್ ಝೋನ್ ಅಂದರೆ ಬಿಹಾರ ರಾಜ್ಯದ ನೇಮಕಾತಿ ಮುಖ್ಯ ಕಛೇರಿ. ದೇಶದ ಮೂಲೆಮೂಲೆಗಳಿಂದ ಬರುವ ಯುವ ಸೈನಿಕ ಪಡೆಗಳಿಗೆ ನೇಮಕಾತಿ ನಡೆಸುವ ಮುಖ್ಯ ಕಛೇರಿಯಾಗಿತ್ತು.  

ಮುಂದೆ ಬೆಂಗಳೂರಿನ ಸೇನಾ ಸೇವಾ ಕೋರ್ನಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಸೈನಿಕರ ಸಾವಿರ ಸಾವಿರ ದಾಖಲೆಗಳ ಕಾಪಿಡುವ ನೂರಾರು ಮಂದಿಯ ತಂಡದ ಭಾಗವಾಗಿ ದುಡಿದ ಅನುಭವ ಅಸಾಮಾನ್ಯ ಎನ್ನುತ್ತಾರೆ. ಎಂದಿಗೂ ಶಿಸ್ತು, ತ್ಯಾಗಕ್ಕೆ ಸಾಕ್ಷಿಯಾಗಿರುವ ಸೈನ್ಯದ ದಾಖಲೆ ನಿರ್ವಹಣೆ, ಕಣ್ಣಲ್ಲಿ ಕಣ್ಣಿಟ್ಟು ಗಡಿ ಕಾಯುವ ಸೈನಿಕ ವೃತ್ತಿಯಷ್ಟೇ ಕಠಿಣವಾಗಿತ್ತು. ಐದು ವರ್ಷಗಳ ದುಡಿಮೆ ಬದುಕಿಗೆ ಹೊಸ ದಿಕ್ಕು ತೋರಿತು ಎನ್ನುತ್ತಾರೆ. ಅಲ್ಲಿಂದ ಅಸ್ಸಾಂ ರಾಜ್ಯದ ಮೋಹನ್ ಬಾಡಿಯಲ್ಲಿ (ದಿಗ್ಬ್ರೂಗಡದ ಸಮೀಪ) ಒಂದು ವರ್ಷ ದುಡಿಮೆ ಸಾಗಿತು. ಸೈನ್ಯದ ಸೇವೆ ಸಾಕು ಎಂದು ಅವಧಿಪೂರ್ವ ಕೋರಿಕೆ ನಿವೃತ್ತಿ 2006ರಲ್ಲಿ ಪಡೆದುಕೊಂಡರಂತೆ. 

*ಸ್ಪೂರ್ತಿದಾಯಕ ಪಯಣ*   

ನಮ್ಮ ಬದುಕಲ್ಲಿ ಸಮಸ್ಯೆಗಳು ಬಂದಾಗ ಅದನ್ನು ನೇರವಾಗಿ ಎದುರಿಸಲು ಕಲಿಯಬೇಕು. ಅದು ಬಿಟ್ಟು ಭಯಪಡುವುದಾಗಲಿ, ವ್ಯಾಕುಲತೆಗಳಾಗಲಿ ಒಳಗಾಗಬಾರದು. ಯಾಕೆಂದರೆ, ವ್ಯಾಕುಲತೆ ಯಾವುದೇ ಸಮಸ್ಯೆಗಳಿಗೆ ಪರಿಹಾರವಲ್ಲ. ತಿಳಿದುಕೊಳ್ಳಲು ಯಾವ ವಿಷಯವೂ ಸಣ್ಣದಲ್ಲ. ಮಾಡುವ ಮನಸ್ಸಿದ್ದರೆ ಯಾವ ಕೆಲಸವೂ ದೊಡ್ಡದಲ್ಲ. ಇದು ಆರ್ಮಿ ನನಗೆ ಕಲಿಸಿದ ಪಾಠ ಎನ್ನುತ್ತಾರೆ.  

ಈ ಕ್ಷೇತ್ರಕ್ಕೆ ಕಾಲಿಟ್ಟ ಮೇಲಂತೂ ಪ್ರಾಣಕ್ಕಿಂತ ಮಿಗಿಲು ನನ್ನ ದೇಶವಾಯಿತು. "ನಿನ್ನ ಹೊರಗೆ ಏನಿದೆಯೋ ಅದಲ್ಲ ನಿನ್ನನ್ನು ಎತ್ತರಕ್ಕೆ ಕೊಂಡೊಯ್ಯುವುದು. ನಿನ್ನ ಒಳಗೆ ಏನಿದೆಯೋ ಅದು ನಿನ್ನನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ " ಎಂಬ ಪಾಠ ಕಲಿತೆ. ನಾನು ಆರ್ಮಿಯನ್ನು ಪ್ರೀತಿಸಿದೆ, ಅದು ನನ್ನನ್ನು ಪ್ರೀತಿಸಿತು, ನಂಬಿತ್ತು ಎನ್ನುತ್ತಾರೆ.  

*ತವಾಂಗ್ ಚಳಿಯಿಂದ ತರಗತಿಯ ಬೆಳಕಿಗೆ* 

ಹೇಗೂ ನನ್ನೊಳಗೆ ಭದ್ರವಾಗಿ ಅವಿತುಕೊಂಡಿದ್ದು ಶೈಕ್ಷಣಿಕ ಭಾವ. ಸೈನ್ಯದಿಂದ ನಿವೃತ್ತಿಗೊಂಡಂತೆ 2006ರಲ್ಲಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಹುದ್ದೆಗೆ ಪರೀಕ್ಷೆ ಬರೆದೆ. ಅದರಲ್ಲಿ ಯಶಸ್ವಿಯಾದೆ. ಸೈನಿಕ ಸೇವೆ ನನ್ನ ಬೆನ್ನಿಗಿತ್ತು. ಇಷ್ಟಾದರೂ ವಿಧಿ ಲಿಖಿತ ಬೇರೆಯದೇ ಇತ್ತು. ನಾಲ್ಕು ವರ್ಷಗಳ ಕಾಲ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ - ಚಿಂತಿಸಲಿಲ್ಲ. ಬೆಂಗಳೂರಿನಲ್ಲಿ ಬಹು ಜನಪ್ರಿಯ ಕಂಪೆನಿ ನೋಕಿಯಾದಲ್ಲಿ ಇಂಟರ್ನಲ್ ಸೆಕ್ಯೂರಿಟಿ ಹುದ್ದೆಗೆ ಸೇರಿದೆ. ಸಾವಿರಾರು ಉದ್ಯೋಗಿಗಳು ನಮ್ಮ ತಂಡದ ಅನುಮತಿ ಇಲ್ಲದೆ ಒಳಗೆ, ಹೊರಗೆ ಹೋಗುವಂತಿರಲಿಲ್ಲ. ಅದು ಒಂದಷ್ಟು ಕಲಿಸಿತು.  

2010ರಲ್ಲಿ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸರಕಾರಿ ಪ್ರೌಢ ಶಾಲೆ, ತಡಿಬಿಡಿಗೆ ಮುಖ್ಯ ಶಿಕ್ಷಕನಾಗಿ ನೇಮಕಗೊಂಡೆನು. ಅದೇನು ನನಗೆ ಹೊಸತಾಗಿರಲಿಲ್ಲ. ಹಾಗೆಂದು ಅದು ಮಕ್ಕಳ ಭವಿಷ್ಯ ರೂಪಿಸಲು ನನ್ನ ಪಾಡಿಗೆ ಬಿಡಲಿಲ್ಲ. ಅಲ್ಲಿ ಡಯಟ್ ಸಂಸ್ಥೆ ಉದಯವಾಯಿತು. ಉಪನ್ಯಾಸಕರಿಲ್ಲದಾಗ ಅದರ ಹೊಣೆ ನನ್ನ ಹೆಗಲೇರಿತು. ಡಿಡಿಪಿಐ ಕಚೇರಿಯಲ್ಲಿ ವಿಷಯ ಪರೀಕ್ಷಕರಿರಲಿಲ್ಲ, ಅದು ನನ್ನ ಪಾಲಾಯಿತು. ಸರ್ವ ಶಿಕ್ಷಣ ಅಭಿಯಾನದ ಜವಾಬ್ದಾರಿಯೂ ಕೆಲವು ದಿನಗಳ ಕಾಲಕ್ಕೆ ನನ್ನದಾಯಿತು. ನಿತ್ಯವೂ ಕೈ ತುಂಬಾ ಕೆಲಸ, ಹೊಸ ಹೊಸ ಅನುಭವ ನನ್ನದಾಯಿತು.  

*ದೇಶದ ಗಡಿಯಿಂದ ಊರ ಗಡಿಗೆ*  

2016ರಲ್ಲಿ ಪುತ್ತೂರು ಕ್ಷೇತ್ರ ಸಂಪನ್ಮೂಲ ಕೇಂದ್ರಕ್ಕೆ ಸಮನ್ವಯ ಅಧಿಕಾರಿಯಾಗಿ ನನ್ನೂರ ಬಳಿಗೆ ಬರುವ ಭಾಗ್ಯ ಒದಗಿ ಬಂದಿತು. 2018ರಲ್ಲಿ ಶಾಂತಿನಗರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಹುದ್ದೆಯನ್ನು ಅಪ್ಪಿಕೊಂಡೆನು. ಇನ್ನು ಏನನ್ನೂ ಒಪ್ಪಿಕೊಳ್ಳದೆ ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡೋಣ ಎಂದು ಗಟ್ಟಿ ಮನಸ್ಸು ಮಾಡಿದೆ. ಮತ್ತೆ ಮತ್ತೆ ಅಧಿಕ ಜವಾಬ್ದಾರಿಗಳು ಹಿಂಬಾಲಿಸಿ ಬಂದು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ, ಅಕ್ಷರ ದಾಸೋಹ ಪ್ರಭಾರ ಸಹಾಯಕ ನಿರ್ದೇಶಕರು, ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಆಡಳಿತ ಅಧಿಕಾರಿ, ಎರಡು ಪಂಚಾಯತ್ಗಳ ಪ್ರಭಾರ ಆಡಳಿತ ಅಧಿಕಾರಿ – ಈ ಎಲ್ಲ ಜವಾಬ್ದಾರಿಗಳು ಬಯಸದೇ ಬಳಿ ಬಂದವು.  

2026ರ ಮೇ 31 ನನ್ನ ನಿವೃತ್ತಿಯ ದಿನ. ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾರ ಹಾಗೂ ಎಲ್ಲಾ ಪ್ರಭಾರಗಳು ನನ್ನ ಕೈ ಬಿಟ್ಟು ದೂರವಾಗುವವು. ಮನಸ್ಸು ಇನ್ನೂ ದಣಿದಿಲ್ಲ. ವಯಸ್ಸು ಹೇಳುತ್ತಿದೆ, "ಸಾಕು, ಇನ್ನು ನೀನು ಬೇಡ" ಎಂದು. ಒಂದಷ್ಟು ಕಾಲ ದೇಶ ರಕ್ಷಣೆಯ ಕಾರ್ಯ, ಇನ್ನೊಂದಷ್ಟು ಕಾಲ ಮಕ್ಕಳ ಭವಿಷ್ಯ ರೂಪಿಸುವ ಸೇವೆಗೆ ಆ ಭಗವಂತ ಅವಕಾಶ ಕಲ್ಪಿಸಿ ನನ್ನ ಅನ್ನದ ಬಟ್ಟಲು ತುಂಬಿರುವನು. ಅವನ ಅನುಗ್ರಹಕ್ಕೆ ಶಿರಬಾಗಿ ನಮಿಸುವೆನು.  

ಬದುಕು ಕೆಲವೊಮ್ಮೆ ಆಳದ ನೀರಿಗೆ ಒಯ್ಯುವುದು ಮುಳುಗಿಸುವುದಕ್ಕಲ್ಲ, ಚೆನ್ನಾಗಿ ಶುಭ್ರಗೊಳಿಸಲಷ್ಟೇ. ಇದು ಸವಾಲುಗಳು ನನಗೆ ಕಲಿಸಿದ ಪಾಠ. ಸಹಸ್ರಾರು ಶಿಕ್ಷಕರ ಪ್ರೀತಿ, ಅನೇಕ ಇಲಾಖೆಗಳ ಅಧಿಕಾರಿಗಳ ಒಡನಾಟ, ಭೂಸೇನೆಯ ಅಂತರಂಗದ ಅರಿವು, ದೇಶದ ಬಹು ಸಂಸ್ಕೃತಿಯ ಪರಿಚಯ – ಹೀಗೆ ಬಹು ಬಗೆಯ ಅನುಭವ ಸಂಪತ್ತು ನನ್ನ ಮನಸ್ಸನ್ನು ಶ್ರೀಮಂತಗೊಳಿಸಿದೆ. ಇಂತಹ ಸಂತೃಪ್ತ ಭಾವ ಅವರಲ್ಲಿದೆ.  

*ಆರ್ಮಿ ಕಲಿಸಿದ ಶಿಸ್ತು ಶಾಲೆ ಕಲಿಸಿದ ತಾಳ್ಮೆ* 

ಕಾಸರಗೋಡು ಜಿಲ್ಲೆಯ ಮಾಯಿಪ್ಪಾಡಿ ಅರಸುಗಳ ಪ್ರಭಾವಲಯದ ಸತ್ವಯುತ ಮಣ್ಣಲ್ಲಿ ಹುಟ್ಟಿ ಬೆಳೆದವರು ಇವರು. ತಂದೆ ಸೈನಿಕ ಸದೃಶ ನಿವೃತ್ತ ಶಿಕ್ಷಕರು ನಾರಾಯಣ ಭಟ್. ತಾಯಿ ಸವಿತಾ ಗೃಹಿಣಿ. ಬದುಕಿನ ಸಂಸ್ಕಾರದ ಚೌಕಟ್ಟು ನಿರ್ಮಿಸಿ, ಊರೆಲ್ಲಾ ಸುತ್ತಾಡಿದರೂ ಹೊಲಸು ಕಾಲಿಗಂಟಿಸಿಕೊಳ್ಳಬೇಡವೆಂದು ಆಶೀರ್ವದಿಸಿದ ಪುಣ್ಯಾತ್ಮರು ಇಂದು ನನ್ನ ಜೊತೆಗಿಲ್ಲ.  

ಬಾಳ ಸಂಗಾತಿ ಜಯಶ್ರೀ ಗೃಹಿಣಿ. ನನ್ನದು ಸಂಚಾರಿ ವೃತ್ತಿಯಾದರೂ ಮನೆ ಗಟ್ಟಿಗೊಳಿಸಿ ಬಾಳಿಗೊಂದು ಸ್ಥಿರತೆ ತಂದ ಮಹಾಶಿಲ್ಪಿ ಆಕೆ. ನಮಗೊಬ್ಬಳು ಮಗಳು ಸ್ನೇಹ ಸಿ. ಭರತನಾಟ್ಯದ ಸ್ನಾತಕೋತ್ತರ ಡಿಪ್ಲೋಮಾ ಮಾಡಿರುವ ಆಕೆ ಕಲಾವಿದೆಯಾಗಿ ಬದುಕು ಕಟ್ಟಿಕೊಳ್ಳುವ ಕನಸು ಹೊತ್ತವಳು. ಚೆನ್ನೈನಲ್ಲಿ ಅನೇಕ ಭರತನಾಟ್ಯ ಕಾರ್ಯಕ್ರಮ ನೀಡಿ ಹೆಸರಾಗಿರುವಳು. ಸ್ನಾತಕೋತ್ತರ ಪದವಿ ಅಧ್ಯಯನ ನಿರತೆ ಅವಳು.  

ನಾನು ಬಹು ಬಗೆಯಲ್ಲಿ ಸಾಧಕರ ಜೀವನ ವೃತ್ತಾಂತ ರಚಿಸಿರುವೆನು. ಆದರೆ ಶಿಕ್ಷಕನೊಬ್ಬನ ಅಂತರಂಗದೊಳಗಿರುವ ಸೈನಿಕನ ವ್ಯಕ್ತಿತ್ವ ಚಿತ್ರಣ ನನಗೆ ಬಲು ಖುಷಿ ತಂದಿದೆ.  
*ಟಿ. ನಾರಾಯಣ ಭಟ್, ರಾಮಕುಂಜ*  
*ಲೇಖಕರು, ಅಂಕಣಕಾರರು*

Comments

Popular posts from this blog

ಕುಕ್ಕೆ ಸುಬ್ರಹ್ಮಣ್ಯ ರಥಬೀದಿಯಲ್ಲಿ ಭಕ್ತನ ಮೇಲೆ ಸೌಟಿನಿಂದ ಹಲ್ಲೆ – ವೈರಲ್ ವಿಡಿಯೋ, ದೇವಸ್ಥಾನ ಮೆನೇಜರ್ ಮೌನಕ್ಕೆ ಸಾರ್ವಜನಿಕ ಆಕ್ರೋಶ!

ಕುಕ್ಕೆ ಸುಬ್ರಹ್ಮಣ್ಯ: ಸಾರಿಗೆ ವ್ಯವಸ್ಥೆಯಲ್ಲಿ ಖಾಸಗಿ ಬಸ್ ಸಂಸ್ಥೆಯ ನೂತನ ಹೆಜ್ಜೆ – ಗ್ರಾಮೀಣ ಭಾಗದ ಅಭಿವೃದ್ಧಿಗೆ ಬಲ.

ರಾಮಕುಂಜದಲ್ಲಿ ಹೀಗೊಂದು ಬೇನರ್ - ಬೇನರ್ ಅಳವಡಿಸಿ ತಾಕತ್ತು ತೋರಿದ ಜನರು!