ಎಸ್‌ಎಸ್‌ಪಿಯುನಲ್ಲಿ 1008 ವಿದ್ಯಾರ್ಥಿಗಳ ಸಾಮೂಹಿಕ ಯೋಗಾಸನ: "ಯೋಗೇನ ಚಿತ್ತಸ್ಯ" ಮೊಳಗಿದ ವಿಶ್ವ ಯೋಗ ದಿನಾಚರಣೆ
ಎಸ್‌ಎಸ್‌ಪಿಯುನಲ್ಲಿ ಏಕಕಾಲದಲ್ಲಿ 1008 ವಿದ್ಯಾರ್ಥಿಗಳಿಂದ ಯೋಗಾಸನ
"ಯೋಗೇನ ಚಿತ್ತಸ್ಯ..." ಮೊಳಗಿದ ವಿಶ್ವ ಯೋಗ ದಿನಾಚರಣೆ
ಚಿತ್ತ ಚಾಂಚಲ್ಯ ನಿವಾರಣೆಗೆ ಯೋಗವೇ ಅಡಿಗಲ್ಲು: ಪ್ರಾಚಾರ್ಯ ಸೋಮಶೇಖರ ನಾಯಕ್
ಸುಬ್ರಹ್ಮಣ್ಯ, ಜೂನ್ 22: ಚಿತ್ತದ ಚಂಚಲತೆಯನ್ನು ದೂರ ಮಾಡಿ ಏಕಾಗ್ರತೆ, ದೈಹಿಕ ಆರೋಗ್ಯ ಮತ್ತು ಮಾನಸಿಕ ಸದೃಢತೆಯನ್ನು ಬೆಳೆಸುವಲ್ಲಿ ಯೋಗ ಮಹತ್ವದ ಪಾತ್ರ ವಹಿಸುತ್ತದೆ. ಪ್ರಾಚೀನ ಋಷಿಮುನಿಗಳಿಂದ ಸಂಜಾತವಾದ ಯೋಗವು ಸರ್ವರೋಗ ನಿವಾರಕವಾಗಿದ್ದು, ವಿಶ್ವಕ್ಕೆ ಭಾರತ ನೀಡಿರುವ ಅಮೂಲ್ಯ ಕೊಡುಗೆಯಾಗಿದೆ ಎಂದು ಎಸ್‌ಎಸ್‌ಪಿಯು ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್ ಅಭಿಪ್ರಾಯಪಟ್ಟರು.
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಎಸ್‌ಎಸ್‌ಪಿಯು ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಸೋಮವಾರ ಆಯೋಜಿಸಿದ್ದ ಸಾಮೂಹಿಕ ಯೋಗಾಸನ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಯೋಗವು ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ಆತ್ಮವಿಶ್ವಾಸ ಹಾಗೂ ಶಿಸ್ತು ಬೆಳೆಸುತ್ತದೆ. "ಯೋಗದಿಂದ ರೋಗವಿಲ್ಲ" ಎಂಬ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
1008 ವಿದ್ಯಾರ್ಥಿಗಳ ಸಾಮೂಹಿಕ ಯೋಗಾಸನ
ಕಾಲೇಜಿನ ಮೇಲ್ಬಾಗ ಹಾಗೂ ಕೆಳಭಾಗದ ಕ್ರೀಡಾಂಗಣದಲ್ಲಿ ಪಿಯುಸಿ ಮತ್ತು ಪ್ರೌಢಶಾಲೆಯ ಒಟ್ಟು 1008 ವಿದ್ಯಾರ್ಥಿಗಳು ಏಕಕಾಲದಲ್ಲಿ ವಿವಿಧ ಯೋಗಾಸನಗಳನ್ನು ಪ್ರದರ್ಶಿಸುವ ಮೂಲಕ ವಿಶ್ವ ಯೋಗ ದಿನಾಚರಣೆಗೆ ವಿಶೇಷ ಮೆರುಗು ತಂದರು. "ಯೋಗೇನ ಚಿತ್ತಸ್ಯ ಪದೇನ ವಾಚಾಂ..." ಎಂಬ ಮಂತ್ರೋಚ್ಚಾರಣೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡು ಯೋಗಮಯ ವಾತಾವರಣ ನಿರ್ಮಾಣವಾಯಿತು.
ಹಿರಿಯ ಸಹಶಿಕ್ಷಕ ಹಾಗೂ ಯೋಗಗುರು ಎಂ. ಕೃಷ್ಣ ಭಟ್ ಮತ್ತು ಉಪನ್ಯಾಸಕಿ ಸೌಮ್ಯಾ ದಿನೇಶ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸುಮಾರು ಒಂದು ಗಂಟೆ ಕಾಲ ವೃಕ್ಷಾಸನ, ಪದ್ಮಾಸನ, ಮಂತ್ರಸಹಿತ ಸೂರ್ಯನಮಸ್ಕಾರ, ಭುಜಂಗಾಸನ, ಸರ್ವಾಂಗಾಸನ ಸೇರಿದಂತೆ ವಿವಿಧ ಯೋಗಾಸನಗಳನ್ನು ಅಭ್ಯಾಸ ಮಾಡಿದರು.
ಕಾರ್ಯಕ್ರಮದ ಕೊನೆಯಲ್ಲಿ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳು ಪ್ರದರ್ಶಿಸಿದ ಯೋಗ ನೃತ್ಯ ಎಲ್ಲರ ಗಮನ ಸೆಳೆಯಿತು. ಸಾಮೂಹಿಕ ಯೋಗಾಭ್ಯಾಸದ ಮೂಲಕ ಆರೋಗ್ಯಕರ ಜೀವನಶೈಲಿಯ ಸಂದೇಶ ಸಾರಿದ ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ಮತ್ತು ಚೈತನ್ಯ ಮೂಡಿಸಿತು.
Comments
Post a Comment