*ಸದ್ದಿಲ್ಲದೆ ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು; ಮಾಧ್ಯಮಗಳ ನಿರೀಕ್ಷೆಗೆ ನಿರಾಸೆ – ಅಭಿವೃದ್ಧಿ ಬಗ್ಗೆ ಸ್ಪಷ್ಟನೆ ನೀಡುವಂತೆ ಒತ್ತಾಯ*

ಕುಕ್ಕೆ ಸುಬ್ರಹ್ಮಣ್ಯ ;ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಾದ ಶರತ್ ಐಎಎಸ್ ಅವರು ಜೂನ್ 28ರ ರಾತ್ರಿ ಸದ್ದಿಲ್ಲದೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ, ಆದಿಶೇಷ ವಸತಿಗೃಹದಲ್ಲಿ ವಾಸ್ತವ್ಯ ಹೂಡಿದ ಬಳಿಕ ಜೂನ್ 29ರ ಬೆಳಿಗ್ಗೆ ಸುಮಾರು 7 ಗಂಟೆಗೆ ಶ್ರೀ ದೇವರ ದರ್ಶನ ಪಡೆದು ಯಾವುದೇ ಮಾಧ್ಯಮದವರೊಂದಿಗೆ ಮಾತನಾಡದೆ ಹಾಗೂ ಪತ್ರಿಕಾ ಹೇಳಿಕೆ ನೀಡದೆ ತೆರಳಿರುವ ಮಾಹಿತಿ ಲಭ್ಯವಾಗಿದೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಅಭಿವೃದ್ಧಿ ಕುರಿತು ಆಯುಕ್ತರು ಮಹತ್ವದ ಘೋಷಣೆ ಮಾಡಬಹುದು ಎಂಬ ನಿರೀಕ್ಷೆಯಲ್ಲಿ ಕಾಯುತ್ತಿದ್ದ ಮಾಧ್ಯಮ ಪ್ರತಿನಿಧಿಗಳಿಗೆ ಈ ನಡೆ ನಿರಾಸೆ ಉಂಟುಮಾಡಿದೆ.
ರಾಜ್ಯದ ಪ್ರಮುಖ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಭಕ್ತರಿಗೆ ಇನ್ನಷ್ಟು ಉತ್ತಮ ಮೂಲಭೂತ ಸೌಲಭ್ಯಗಳು ಕಲ್ಪಿಸುವ ಅಗತ್ಯವಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ವಿಶೇಷವಾಗಿ ಭಕ್ತರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಶೌಚಾಲಯಗಳ ನಿರ್ಮಾಣ, ರಥಬೀದಿಯ ಶೆಡ್‌ನಲ್ಲಿ ರಾತ್ರಿ ತಂಗುವ ಭಕ್ತರಿಗೆ ಸೂಕ್ತ ವಸತಿ ವ್ಯವಸ್ಥೆ, ಮಳೆಗಾಲದಲ್ಲಿ ರಸ್ತೆಯ ಮೇಲೆ ಹರಿಯುವ ನೀರನ್ನು ತಡೆಯಲು ಸಮರ್ಪಕ ಚರಂಡಿ ವ್ಯವಸ್ಥೆ, ಗುಣಮಟ್ಟದ ಮತ್ತು ವಿಶಾಲ ವಾಹನ ನಿಲುಗಡೆ ವ್ಯವಸ್ಥೆ, ಹೆಚ್ಚಿನ ಭದ್ರತಾ ಸಿಬ್ಬಂದಿ ನೇಮಕ ಹಾಗೂ ಭಕ್ತರಿಗೆ ಪೂಜೆ ಮತ್ತು ಸೇವೆಗಳ ಕುರಿತು ಮಾಹಿತಿ ನೀಡುವ ಸಹಾಯ ಕೇಂದ್ರಗಳ ಸ್ಥಾಪನೆ ಸೇರಿದಂತೆ ಹಲವು ಬೇಡಿಕೆಗಳು ಕೇಳಿಬರುತ್ತಿವೆ.

ಈ ಹಿನ್ನೆಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಸ್ಪಷ್ಟ ನಿಲುವು ಪ್ರಕಟಿಸಿ, ಸಾರ್ವಜನಿಕರು ಹಾಗೂ ಮಾಧ್ಯಮದವರೊಂದಿಗೆ ಸಂವಾದ ನಡೆಸಬೇಕು ಎಂಬ ಒತ್ತಾಯ ವ್ಯಕ್ತವಾಗುತ್ತಿದೆ.

ಭಕ್ತರ ಅನುಕೂಲ ಮತ್ತು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಭರವಸೆಯನ್ನು ಆಯುಕ್ತರು ನೀಡಬೇಕೆಂದು ಸಾರ್ವಜನಿಕರು ನಿರೀಕ್ಷಿಸಿದ್ದಾರೆ.

Comments

Popular posts from this blog

ಕುಕ್ಕೆ ಸುಬ್ರಹ್ಮಣ್ಯ ರಥಬೀದಿಯಲ್ಲಿ ಭಕ್ತನ ಮೇಲೆ ಸೌಟಿನಿಂದ ಹಲ್ಲೆ – ವೈರಲ್ ವಿಡಿಯೋ, ದೇವಸ್ಥಾನ ಮೆನೇಜರ್ ಮೌನಕ್ಕೆ ಸಾರ್ವಜನಿಕ ಆಕ್ರೋಶ!

ರಾಮಕುಂಜದಲ್ಲಿ ಹೀಗೊಂದು ಬೇನರ್ - ಬೇನರ್ ಅಳವಡಿಸಿ ತಾಕತ್ತು ತೋರಿದ ಜನರು!

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಕಲಿ ವಸತಿಗೃಹ ವೆಬ್‌ಸೈಟ್ ಮೂಲಕ ಸೈಬರ್ ವಂಚನೆ ಆರೋಪ: ಭಕ್ತರು ಎಚ್ಚರ ವಹಿಸುವಂತೆ ಮನವಿ