ರಾಮಕುಂಜ: ಆದಿತ್ಯ ಸಮೂಹ ಸಂಸ್ಥೆಗಳ ಮುಖ್ಯಸ್ಥ, ನಿವೃತ್ತ ಶಿಕ್ಷಕ ಇ. ರಮೇಶ ಉಪಾಧ್ಯಾಯ ನಿಧನ.
ರಾಮಕುಂಜ: ಆದಿತ್ಯ ಸಮೂಹ ಸಂಸ್ಥೆಗಳ ಮುಖ್ಯಸ್ಥರು, ಹಿರಿಯ ಸಮಾಜಸೇವಕರು ಹಾಗೂ ನಿವೃತ್ತ ಶಿಕ್ಷಕರಾದ ರಾಮಕುಂಜ ಗ್ರಾಮದ ಕಲ್ಲೇರಿ ನಿವಾಸಿ ಇ. ರಮೇಶ ಉಪಾಧ್ಯಾಯ (96) ಅವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಜುಲೈ 2ರಂದು ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.
ಇ. ರಮೇಶ ಉಪಾಧ್ಯಾಯ ಅವರು ಶ್ರೀ ರಾಮಕುಂಜೇಶ್ವರ ಸಂಸ್ಕೃತ ಹಿರಿಯ ಪ್ರಾಥಮಿಕ ಶಾಲೆ ಹಾಗೂ ರಾಮಕುಂಜ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸುಮಾರು 35 ವರ್ಷಗಳಿಗೂ ಹೆಚ್ಚು ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಶಿಸ್ತು ಮತ್ತು ನಿಷ್ಠೆಯಿಂದ ಸೇವೆ ಸಲ್ಲಿಸಿದ್ದ ಅವರು, ನಿವೃತ್ತಿಯ ನಂತರ ಕೃಷಿ ಚಟುವಟಿಕೆಗಳ ಜೊತೆಗೆ ಮಕ್ಕಳ ಸಹಕಾರದಲ್ಲಿ ವಿವಿಧ ಉದ್ಯಮಗಳನ್ನು ಆರಂಭಿಸಿ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು.
ಉಪ್ಪಿನಂಗಡಿಯಲ್ಲಿ ಹೋಟೆಲ್ ಆದಿತ್ಯ, ಸುಬ್ರಹ್ಮಣ್ಯದಲ್ಲಿ ಆದಿತ್ಯ ನೆಸ್ಟ್, ಧರ್ಮಸ್ಥಳ-ನಿಡ್ಲೆ ಭಾಗದಲ್ಲಿ ಆದಿತ್ಯ ವ್ಯೂ ಸೇರಿದಂತೆ ಹಲವು ಉದ್ದಿಮೆಗಳನ್ನು ಬೆಳೆಸಿದ ಅವರು, ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ವಿವಿಧ ಸಾಮಗ್ರಿಗಳ ಪೂರೈಕೆಯಲ್ಲಿಯೂ ಹೆಸರು ಗಳಿಸಿದ್ದರು.
ಸಮಾಜಮುಖಿ ಚಿಂತನೆಯ ವ್ಯಕ್ತಿಯಾಗಿದ್ದ ಅವರು ನೂರಾರು ಮಂದಿಗೆ ಉದ್ಯೋಗಾವಕಾಶ ಕಲ್ಪಿಸಿದ್ದಲ್ಲದೆ, ಸ್ಥಳೀಯ ದೇವಸ್ಥಾನಗಳು ಹಾಗೂ ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಗಳ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದರು. ಬಾಲ್ಯದಲ್ಲಿ ಉಡುಪಿ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಸಹಪಾಠಿಯಾಗಿದ್ದ ಎಂಬ ವಿಶೇಷತೆಯೂ ಅವರಿಗಿತ್ತು.
ಮೃತರು ಪುತ್ರರಾದ ಇ. ಕೃಷ್ಣಮೂರ್ತಿ, ಇ. ವಿದ್ಯಾರಣ್ಯ, ಇ. ಮನೋಹರ, ಇ. ತ್ರಿವಿಕ್ರಮ, ಇ. ಸುದರ್ಶನ, ಪುತ್ರಿ ಪ್ರಸನ್ನ, ಅಳಿಯ ರಾಮಚಂದ್ರ ಉಡುಪ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಮರಿಮಕ್ಕಳನ್ನು ಅಗಲಿದ್ದಾರೆ. ಅವರ ಪತ್ನಿ ಯಶೋಧಾ ಅವರು ಕೆಲ ವರ್ಷಗಳ ಹಿಂದೆ ನಿಧನರಾಗಿದ್ದರು.
ಇ. ರಮೇಶ ಉಪಾಧ್ಯಾಯ ಅವರ ನಿಧನಕ್ಕೆ ಶಿಕ್ಷಣ, ಉದ್ಯಮ ಹಾಗೂ ಸಾಮಾಜಿಕ ವಲಯದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
Comments
Post a Comment