ಕುಕ್ಕೆ–ಕಡಬ–ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ಮಳೆನೀರು ನಿಂತು ರಸ್ತೆ ಹಾನಿ ಭೀತಿ: ತಕ್ಷಣ ಕ್ರಮಕ್ಕೆ ಸಾರ್ವಜನಿಕರ ಆಗ್ರಹ.
ಕುಕ್ಕೆ: ಕುಕ್ಕೆ ಸುಬ್ರಹ್ಮಣ್ಯದಿಂದ ಕಡಬ ಹಾಗೂ ಉಪ್ಪಿನಂಗಡಿ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಮಳೆಗಾಲದ ವೇಳೆ ಹಲವು ಕಡೆ ಮಳೆನೀರು ರಸ್ತೆಯಲ್ಲೇ ನಿಂತು, ಮಣ್ಣು, ಮರಳು ಹಾಗೂ ಕಲ್ಲುಗಳು ರಸ್ತೆಗೆ ಹರಿದು ಬರುತ್ತಿರುವುದು ವಾಹನ ಸವಾರರು ಮತ್ತು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಗುಡ್ಡ ಪ್ರದೇಶಗಳಿಂದ ಹರಿದು ಬರುವ ಮಳೆನೀರು ಹಾಗೂ ಮನೆ, ಅಂಗಡಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಂದ ಹರಿದು ಬರುವ ನೀರು ನೇರವಾಗಿ ರಾಜ್ಯ ಹೆದ್ದಾರಿಗೆ ಸೇರುತ್ತಿದೆ. ರಸ್ತೆ ಬದಿಯ ಚರಂಡಿಗಳು ಸಮರ್ಪಕವಾಗಿಲ್ಲದಿರುವುದು ಹಾಗೂ ಕೆಲವೆಡೆ ಗಿಡಗಂಟೆಗಳು ಬೆಳೆದು ನೀರಿನ ಹರಿವಿಗೆ ಅಡ್ಡಿಯಾಗಿರುವುದರಿಂದ ಮಳೆನೀರು ರಸ್ತೆಯಲ್ಲೇ ನಿಂತುಕೊಳ್ಳುತ್ತಿದೆ. ಇದರೊಂದಿಗೆ ಮಣ್ಣು, ಮರಳು ಹಾಗೂ ಕಲ್ಲುಗಳು ರಸ್ತೆ ಮೇಲೆ ಜಮೆಯಾಗುತ್ತಿವೆ.
ಇತ್ತೀಚೆಗೆ ಉತ್ತಮ ಗುಣಮಟ್ಟದಲ್ಲಿ ಡಾಮರೀಕರಣಗೊಂಡಿರುವ ಈ ರಾಜ್ಯ ಹೆದ್ದಾರಿ ದಿನವೂ ಸಾವಿರಾರು ಕಾರು, ಬಸ್, ಲಾರಿ ಹಾಗೂ ಇತರೆ ವಾಹನಗಳ ಸಂಚಾರವನ್ನು ಹೊಂದಿದೆ. ಆದರೆ ರಸ್ತೆಯಲ್ಲಿ ನೀರು ದೀರ್ಘಕಾಲ ನಿಂತರೆ ಡಾಂಬರ್
ಅಡಿಭಾಗದ ಮಣ್ಣು ಸಡಿಲಗೊಂಡು ರಸ್ತೆ ಹಾಳಾಗುವ ಸಾಧ್ಯತೆ ಹೆಚ್ಚಾಗಿದೆ. ಸಮಯಕ್ಕೆ ಮುನ್ನ ಅಗತ್ಯ ನಿರ್ವಹಣೆ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಗುಂಡಿಗಳು ಉಂಟಾಗಿ ಸರ್ಕಾರಕ್ಕೆ ಹೆಚ್ಚಿನ ವೆಚ್ಚ ಹೊರಬೇಕಾಗುವ ಪರಿಸ್ಥಿತಿ ನಿರ್ಮಾಣವಾಗಬಹುದು.
ಇನ್ನೊಂದೆಡೆ ರಸ್ತೆಯಲ್ಲಿ ನೀರು ತುಂಬಿಕೊಂಡಿರುವುದರಿಂದ ವಾಹನ ಸವಾರರಿಗೆ ನೀರಿನ ಆಳದ ಬಗ್ಗೆ ಅಂದಾಜು ಸಿಗದೆ ಅಪಘಾತ ಸಂಭವಿಸುವ ಅಪಾಯವೂ ಹೆಚ್ಚಿದೆ. ವಿಶೇಷವಾಗಿ ರಾತ್ರಿ ವೇಳೆ ಹಾಗೂ ಭಾರೀ ಮಳೆಯ ಸಮಯದಲ್ಲಿ ಈ ಸಮಸ್ಯೆ ಇನ್ನಷ್ಟು ಗಂಭೀರವಾಗುತ್ತಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ರಸ್ತೆ ಬದಿಯಲ್ಲಿ ಅಗತ್ಯವಿರುವ ಸ್ಥಳಗಳಲ್ಲಿ ಸಣ್ಣ ನೀರು ಹರಿಸುವ ಚರಂಡಿಗಳನ್ನು ನಿರ್ಮಿಸಿ, ಈಗಿರುವ ಚರಂಡಿಗಳನ್ನು ಸ್ವಚ್ಛಗೊಳಿಸಿ, ಗಿಡಗಂಟೆಗಳನ್ನು ತೆರವುಗೊಳಿಸಿ, ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಕಲ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇದರಿಂದ ಮಳೆನೀರು ರಸ್ತೆಯಲ್ಲಿ ನಿಲ್ಲದೆ ಚರಂಡಿಗೆ ಹರಿದು ಹೋಗಿ ರಸ್ತೆ ದೀರ್ಘಕಾಲ ಬಾಳಿಕೆ ಬರುವುದರ ಜೊತೆಗೆ ವಾಹನ ಸವಾರರ ಸುರಕ್ಷತೆಯೂ ಖಾತ್ರಿಯಾಗಲಿದೆ.
ವಿಶೇಷವಾಗಿ ಕಡಬದಿಂದ ಉಪ್ಪಿನಂಗಡಿವರೆಗೆ ಹಲವು ಭಾಗಗಳಲ್ಲಿ ಇದೇ ಸಮಸ್ಯೆ ಕಂಡುಬರುತ್ತಿದ್ದು, ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ತಕ್ಷಣ ಅಗತ್ಯ ಕ್ರಮ ಕೈಗೊಂಡು ರಾಜ್ಯ ಹೆದ್ದಾರಿಯನ್ನು ಸಂರಕ್ಷಿಸಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
Comments
Post a Comment