ಕಾರ್ಕಳದಲ್ಲಿ ರಸ್ತೆ ಅಪಘಾತ: ಪತ್ರಕರ್ತ ಪ್ರಾಣಾಪಾಯದಿಂದ ಪಾರು

ಕಾರ್ಕಳ: ಸರ್ವಜ್ಞ ವೃತ್ತದಿಂದ ನಕ್ರೆ ಕಡೆಗೆ ತೆರಳುವ ರಸ್ತೆಯಲ್ಲಿ ಟಾಟಾ ಎಸಿ ಟೆಂಪೋವೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪತ್ರಕರ್ತ ಬಾಲಕೃಷ್ಣ ಭೀಮಗುಳಿ ಅವರು ಪ್ರಾಣಾಪಾಯದಿಂದ ಪಾರಾದ ಘಟನೆ ಗುರುವಾರ ನಡೆದಿದೆ.

ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕ್ರಿಯೇಟಿವ್ ಕಾಲೇಜಿನಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಪತ್ರಕರ್ತ ಬಿಪಿನ್ ಚಂದ್ರಲಾಲ್ ನಕ್ರೆ ಅವರನ್ನು ಅವರ ನಿವಾಸಕ್ಕೆ ಕಾರಿನಲ್ಲಿ ಬಿಟ್ಟು ವಾಪಸಾಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಪರಪ್ಪು ಸೇತುವೆ ದಾಟಿ ಸ್ವಲ್ಪ ದೂರ ಸಾಗುತ್ತಿದ್ದ ವೇಳೆ, ರಸ್ತೆ ಬದಿಯಲ್ಲಿ ಕಾರೊಂದನ್ನು ನಿಲ್ಲಿಸಲಾಗಿತ್ತು. ಇದೇ ಸಂದರ್ಭದಲ್ಲಿ ಎದುರು ದಿಕ್ಕಿನಿಂದ ವೇಗವಾಗಿ ಬಂದ ಶ್ರೀದೇವಿ ಫರ್ನಿಚರ್ಸ್‌ಗೆ ಸೇರಿದ ಟಾಟಾ ಎಸಿ ಟೆಂಪೋ ನಿಯಂತ್ರಣ ತಪ್ಪಿ ಬಾಲಕೃಷ್ಣ ಭೀಮಗುಳಿ ಅವರು ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ಡಿಕ್ಕಿಯ ರಭಸಕ್ಕೆ ಕಾರು ರಸ್ತೆ ಬದಿಯ ಕಮರಿಗೆ ಜಾರಿದ್ದು, ಕಾರಿನ ಚಾಲಕನ ಬದಿಯ ಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಅಪಘಾತದಲ್ಲಿ ಟಾಟಾ ಎಸಿ ಟೆಂಪೋ ವಾಹನಕ್ಕೂ ಹಾನಿಯಾಗಿದೆ.

ಅದೃಷ್ಟವಶಾತ್ ಎರಡೂ ವಾಹನಗಳಲ್ಲಿದ್ದವರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.

ಅತಿವೇಗವೇ ಅಪಘಾತಕ್ಕೆ ಕಾರಣ?

ಟಾಟಾ ಎಸಿ ಟೆಂಪೋವನ್ನು ಅತಿವೇಗದಲ್ಲಿ ಚಲಾಯಿಸಲಾಗುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಶ್ರೀದೇವಿ ಫರ್ನಿಚರ್ಸ್ ಮಾಲೀಕತ್ವದ ಟಾಟಾ ಎಸಿ ಟೆಂಪೋವನ್ನು ಅತಿವೇಗದಲ್ಲಿ ಚಲಾಯಿಸಲಾಗುತ್ತಿದೆ ಎಂಬ ಬಗ್ಗೆ ಈ ಹಿಂದೆಯೂ ಸ್ಥಳೀಯರಿಂದ ದೂರುಗಳು ಕೇಳಿಬಂದಿವೆ ಎನ್ನಲಾಗಿದೆ.

ಇದೇ ವೇಳೆ, ಅಪಘಾತ ಸಂಭವಿಸಿದ ಸ್ಥಳದಲ್ಲಿ ರಸ್ತೆ ಬದಿಯಲ್ಲಿ ವಾಹನಗಳನ್ನು ಅಸುರಕ್ಷಿತವಾಗಿ ನಿಲ್ಲಿಸುವುದರಿಂದ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ, ರಸ್ತೆ ಬದಿಯಲ್ಲಿ ಅಸುರಕ್ಷಿತವಾಗಿ ವಾಹನ ನಿಲ್ಲಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Comments

Popular posts from this blog

ಕುಕ್ಕೆ ಸುಬ್ರಹ್ಮಣ್ಯ ರಥಬೀದಿಯಲ್ಲಿ ಭಕ್ತನ ಮೇಲೆ ಸೌಟಿನಿಂದ ಹಲ್ಲೆ – ವೈರಲ್ ವಿಡಿಯೋ, ದೇವಸ್ಥಾನ ಮೆನೇಜರ್ ಮೌನಕ್ಕೆ ಸಾರ್ವಜನಿಕ ಆಕ್ರೋಶ!

ರಾಮಕುಂಜದಲ್ಲಿ ಹೀಗೊಂದು ಬೇನರ್ - ಬೇನರ್ ಅಳವಡಿಸಿ ತಾಕತ್ತು ತೋರಿದ ಜನರು!

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಕಲಿ ವಸತಿಗೃಹ ವೆಬ್‌ಸೈಟ್ ಮೂಲಕ ಸೈಬರ್ ವಂಚನೆ ಆರೋಪ: ಭಕ್ತರು ಎಚ್ಚರ ವಹಿಸುವಂತೆ ಮನವಿ