ಗೋವಿಂದಾ... ಗೋವಿಂದ! ಒಂದೂವರೆ ತಿಂಗಳಲ್ಲೇ ಗೋವಿಂದ ಆದ ದಾರಿದೀಪಗಳು!
ಸುಬ್ರಹ್ಮಣ್ಯ: ಸಾರ್ವಜನಿಕರ ವರ್ಷಗಳ ಬೇಡಿಕೆ ಈಡೇರಿತು ಎಂದು ಕುಲ್ಕುಂದ ಭಾಗದ ಜನ ಖುಷಿಪಟ್ಟರು. ಕುಮಾರಧಾರ ಸೇತುವೆಯಿಂದ ಕುಲ್ಕುಂದವರೆಗೆ ಹೊಸ ದಾರಿದೀಪಗಳು ಅಳವಡಿಕೆಯಾಗುತ್ತಿದ್ದಂತೆ, "ಇನ್ನು ರಾತ್ರಿ ಸಂಚಾರಕ್ಕೂ ಬೆಳಕು ಸಿಕ್ಕಿತು" ಎಂದು ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.
ಆದರೆ, ಆ ಸಂತೋಷಕ್ಕೆ ಆಯಸ್ಸು ಮಾತ್ರ ಒಂದೂವರೆ ತಿಂಗಳು!
ಗುತ್ತಿಗೆದಾರರು ಹೊಸ ತಂತಿ ಎಳೆದು, ವಿದ್ಯುತ್ ಸಂಪರ್ಕ ನೀಡಿ, ಹೆಸರಾಂತ ಕಂಪನಿಯ ದಾರಿದೀಪಗಳನ್ನು ಅಳವಡಿಸಿದ್ದಾರಂತೆ. ನೋಡಲು ಮಿನುಗುತ್ತಿದ್ದವು. ಆದರೆ ಈಗ ನೋಡಿದರೆ, ಹತ್ತರಲ್ಲಿ ಬರೀ ನಾಲ್ಕೇ ದೀಪಗಳು ಉರಿಯುತ್ತಿವೆ. ಉಳಿದವುಗಳೆಲ್ಲ "ಗೋವಿಂದಾ... ಗೋವಿಂದ!" ಎಂದು ಕೈಚೆಲ್ಲಿದಂತಿದೆ.
ಗುತ್ತಿಗಾರು ಗುತ್ತಿಗೆ;
ಈ ವಿಷಯವನ್ನು ಮೊದಲೇ ಮಾಧ್ಯಮದಲ್ಲಿ ಪ್ರಸ್ತಾಪಿಸಿದಾಗ, ಅಧಿಕಾರಿಗಳ ಗಮನಕ್ಕೆ ತರುವ ಉದ್ದೇಶವೇ ಹೊರತು ಯಾರನ್ನೂ ಟೀಕಿಸುವ ಉದ್ದೇಶ ಇರಲಿಲ್ಲ. ಆದರೆ ಆಗ ಕೆಲವರಿಗೆ ಅದು ಅಷ್ಟಾಗಿ ಇಷ್ಟವಾಗಿರಲಿಲ್ಲ. ಈಗ ದೀಪಗಳೇ ಉತ್ತರ ಕೊಡುತ್ತಿರುವಂತಿದೆ!
ಸಾರ್ವಜನಿಕರ ತೆರಿಗೆ ಹಣದಿಂದ ಅಳವಡಿಸಿದ ದಾರಿದೀಪಗಳು ಒಂದೂವರೆ ತಿಂಗಳಲ್ಲೇ ಕೈಕೊಟ್ಟರೆ, ಪ್ರಶ್ನೆಗಳು ಹುಟ್ಟುವುದು ಸಹಜ. ಅಳವಡಿಸಿದ ದೀಪಗಳ ಗುಣಮಟ್ಟ ಹೇಗಿತ್ತು? ಕಾಮಗಾರಿಯ ಮೇಲ್ವಿಚಾರಣೆ ನಡೆದಿತ್ತೇ? ದೋಷ ಕಂಡುಬಂದಿದ್ದರೆ ಗುತ್ತಿಗೆದಾರರಿಂದ ಅದನ್ನು ಸರಿಪಡಿಸಲಾಗುತ್ತದೆಯೇ?
ಪಾಪ, ಸುಬ್ರಹ್ಮಣ್ಯ ಗ್ರಾಮಪಂಚಾಯಿತಿ ಸಾರ್ವಜನಿಕರ ತೆರಿಗೆ ಹಣವನ್ನು ಸಂಗ್ರಹಿಸಿ ಕಾಮಗಾರಿ ಮಾಡಿಸಿದೆ. ಆದರೆ ಆ ಹಣಕ್ಕೆ ತಕ್ಕ ಗುಣಮಟ್ಟದ ಕೆಲಸವೂ ಸಿಗಬೇಕಲ್ಲವೇ?
ಇದೀಗ ಕುಲ್ಕುಂದ ಭಾಗದ ಜನರ ಒಂದೇ ಪ್ರಶ್ನೆ...
"ದಾರಿದೀಪಗಳು ಮತ್ತೆ ಬೆಳಗುತ್ತವೆಯೇ, ಅಥವಾ 'ಗೋವಿಂದಾ... ಗೋವಿಂದ!' ಎಂದೇ ಉಳಿಯುತ್ತವೆಯೇ?"
Comments
Post a Comment