ಎಡಕುಮೇರಿ–ಶಿರಿಬಾಗಿಲು ನಡುವೆ ಭೂಕುಸಿತ: ರೈಲು ಸಂಚಾರ ಸ್ಥಗಿತ, ಹಲವು ರೈಲುಗಳ ಮಾರ್ಗ ಬದಲು.

ಸುಬ್ರಹ್ಮಣ್ಯ ರೋಡ್–ಸಕಲೇಶಪುರ ಘಾಟ್ ನಡುವಿನ ಎಡಕುಮೇರಿ ಮತ್ತು ಶಿರಿಬಾಗಿಲು ರೈಲು ನಿಲ್ದಾಣಗಳ ನಡುವೆ ಭೂಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಭಾರೀ ಮಳೆಯಿಂದಾಗಿ ರೈಲ್ವೆ ಹಳಿ ಮೇಲೆ ಮಣ್ಣು ಕುಸಿದು ಬಿದ್ದಿದ್ದು, ರೈಲು ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ರೈಲ್ವೆ ಹಳಿ ಮೇಲೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸುವ ಕಾರ್ಯ ಭರದಿಂದ ನಡೆಯುತ್ತಿದೆ. ಜೆಸಿಬಿ ಯಂತ್ರಗಳ ಸಹಾಯದಿಂದ ಮಣ್ಣು ತೆರವುಗೊಳಿಸಲಾಗುತ್ತಿದ್ದು, ರೈಲ್ವೆ ಸಿಬ್ಬಂದಿಗಳು ಮಳೆಯನ್ನೂ ಲೆಕ್ಕಿಸದೆ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಹಳಿಯನ್ನು ಶೀಘ್ರದಲ್ಲೇ ಸಂಚಾರಕ್ಕೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಸಿಬ್ಬಂದಿಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಭೂಕುಸಿತದ ಹಿನ್ನೆಲೆಯಲ್ಲಿ ಆಗಸ್ಟ್ 2ರಂದು ಸಂಚರಿಸುವ ಹಲವು ರೈಲುಗಳ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಕೆಲವು ರೈಲುಗಳನ್ನು ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ವ್ಯವಸ್ಥೆ ಮಾಡಲಾಗಿದ್ದು, ಹಲವು ರೈಲು ನಿಲ್ದಾಣಗಳಲ್ಲಿ ನಿಲುಗಡೆಯನ್ನೂ ರದ್ದುಗೊಳಿಸಲಾಗಿದೆ.

ರೈಲು ಸಂಖ್ಯೆ 16585 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು–ಮುರುಡೇಶ್ವರ ಎಕ್ಸ್‌ಪ್ರೆಸ್ ರೈಲು ಬೆಂಗಳೂರು–ಮೈಸೂರು–ಹಾಸನ–ಮಂಗಳೂರು ಸೆಂಟ್ರಲ್ ಮಾರ್ಗದ ಬದಲು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು–ಈರೋಡ್–ಪಾಲಕ್ಕಾಡ್–ಮಂಗಳೂರು ಜಂಕ್ಷನ್ ಮಾರ್ಗವಾಗಿ ಮುರುಡೇಶ್ವರಕ್ಕೆ ಸಂಚರಿಸಲಿದೆ. ಈ ರೈಲಿಗೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ಮಂಗಳೂರು ಜಂಕ್ಷನ್ ನಡುವಿನ ನಿಲ್ದಾಣಗಳಲ್ಲಿ ಹಾಗೂ ಮಂಗಳೂರು ಸೆಂಟ್ರಲ್‌ನಲ್ಲಿ ನಿಲುಗಡೆ ಇರುವುದಿಲ್ಲ.

ರೈಲು ಸಂಖ್ಯೆ 17377 ವಿಜಯಪುರ–ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು ಬದಲಿ ಮಾರ್ಗದಲ್ಲಿ ಸಂಚರಿಸಲಿದ್ದು, ಲೋಂಡಾ–ಕ್ಯಾಸಲ್ ರಾಕ್–ಕುಲೇಮ್–ಮಡಗಾಂವ್–ಕಾರವಾರ–ಉಡುಪಿ–ಸುರತ್ಕಲ್ ಮಾರ್ಗವಾಗಿ ಮಂಗಳೂರು ಸೆಂಟ್ರಲ್ ತಲುಪಲಿದೆ. ಈ ಹಿನ್ನೆಲೆಯಲ್ಲಿ ಸಾಮಾನ್ಯ ಮಾರ್ಗದಲ್ಲಿರುವ ಹಲವು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

ರೈಲು ಸಂಖ್ಯೆ 17378 ಮಂಗಳೂರು ಸೆಂಟ್ರಲ್–ವಿಜಯಪುರ ಎಕ್ಸ್‌ಪ್ರೆಸ್ ರೈಲು ಕೂಡ ಬದಲಿ ಮಾರ್ಗದಲ್ಲಿ ಸಂಚರಿಸಲಿದ್ದು, ಮಂಗಳೂರು ಸೆಂಟ್ರಲ್‌ನಿಂದ ಸುರತ್ಕಲ್–ಉಡುಪಿ–ಕಾರವಾರ–ಮಡಗಾಂವ್–ಕುಲೇಮ್–ಕ್ಯಾಸಲ್ ರಾಕ್–ಲೋಂಡಾ ಮಾರ್ಗವಾಗಿ ವಿಜಯಪುರಕ್ಕೆ ತೆರಳಲಿದೆ.

ಇನ್ನು ರೈಲು ಸಂಖ್ಯೆ 16586 ಮುರುಡೇಶ್ವರ–ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಮುರುಡೇಶ್ವರ–ತೋಕೂರು–ಮಂಗಳೂರು ಸೆಂಟ್ರಲ್–ಕಣ್ಣೂರು–ಶೋರನೂರು–ಪಾಲಕ್ಕಾಡ್–ಪೊದನೂರು–ಜೋಲಾರ್‌ಪೇಟೆ ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸಲಿದೆ. ಈ ರೈಲಿಗೆ ಬಂಟ್ವಾಳ, ಕಬಕ ಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

ರೈಲು ಸಂಖ್ಯೆ 16512 ಕೋಝಿಕ್ಕೋಡ್–ಕ್ರಾ.ಸಂ.ರಾ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಕೂಡ ಬದಲಿ ಮಾರ್ಗದಲ್ಲಿ ಸಂಚರಿಸಲಿದ್ದು, ಕ್ರಾ.ಸಂ.ರಾ ಬೆಂಗಳೂರು ಬದಲಿಗೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣದಲ್ಲಿ ಸಂಚಾರವನ್ನು ಕೊನೆಗೊಳಿಸಲಿದೆ.

ಅದೇ ರೀತಿ ರೈಲು ಸಂಖ್ಯೆ 16511 ಕ್ರಾ.ಸಂ.ರಾ ಬೆಂಗಳೂರು–ಕೋಝಿಕ್ಕೋಡ್ ಎಕ್ಸ್‌ಪ್ರೆಸ್ ರೈಲು ಕ್ರಾ.ಸಂ.ರಾ ಬೆಂಗಳೂರು ಬದಲಿಗೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣದಿಂದ ಹೊರಟು ಪರ್ಯಾಯ ಮಾರ್ಗವಾಗಿ ಮಂಗಳೂರು ಸೆಂಟ್ರಲ್ ತಲುಪಲಿದೆ.

ರೈಲುಗಳ ಮಾರ್ಗ ಬದಲಾವಣೆ ಹಾಗೂ ನಿಲುಗಡೆ ರದ್ದಾಗಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಆರಂಭಿಸುವ ಮುನ್ನ NTES ಆ್ಯಪ್/ವೆಬ್‌ಸೈಟ್ ಅಥವಾ RailOne ಆ್ಯಪ್ ಮೂಲಕ ತಾವು ಪ್ರಯಾಣಿಸಬೇಕಾದ ರೈಲಿನ ಇತ್ತೀಚಿನ ಸಂಚಾರ ಸ್ಥಿತಿಯನ್ನು ಪರಿಶೀಲಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ.

ಯಾವುದೇ ನೆರವಿಗಾಗಿ ರೈಲ್ವೆ ಸಹಾಯವಾಣಿ 139ಕ್ಕೆ ಕರೆ ಮಾಡಬಹುದಾಗಿದೆ. ರೈಲು ಸಂಚಾರ ಪುನರಾರಂಭದ ಕುರಿತು ರೈಲ್ವೆ ಇಲಾಖೆಯಿಂದ ಅಧಿಕೃತ ಮಾಹಿತಿ ಲಭ್ಯವಾದ ಬಳಿಕ ಹೆಚ್ಚಿನ ಮಾಹಿತಿ ಹೊರಬೀಳಲಿದೆ.

ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ಎಚ್ಚರಿಕೆಯಿಂದಿದ್ದು, ರೈಲ್ವೆ ಇಲಾಖೆಯ ಅಧಿಕೃತ ಮಾಹಿತಿಯನ್ನು ಪರಿಶೀಲಿಸಿದ ಬಳಿಕವೇ ತಮ್ಮ ಪ್ರಯಾಣವನ್ನು ಯೋಜಿಸುವಂತೆ ಸೂಚಿಸಲಾಗಿದೆ.

Comments

Popular posts from this blog

ಕುಕ್ಕೆ ಸುಬ್ರಹ್ಮಣ್ಯ ರಥಬೀದಿಯಲ್ಲಿ ಭಕ್ತನ ಮೇಲೆ ಸೌಟಿನಿಂದ ಹಲ್ಲೆ – ವೈರಲ್ ವಿಡಿಯೋ, ದೇವಸ್ಥಾನ ಮೆನೇಜರ್ ಮೌನಕ್ಕೆ ಸಾರ್ವಜನಿಕ ಆಕ್ರೋಶ!

ರಾಮಕುಂಜದಲ್ಲಿ ಹೀಗೊಂದು ಬೇನರ್ - ಬೇನರ್ ಅಳವಡಿಸಿ ತಾಕತ್ತು ತೋರಿದ ಜನರು!

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಕಲಿ ವಸತಿಗೃಹ ವೆಬ್‌ಸೈಟ್ ಮೂಲಕ ಸೈಬರ್ ವಂಚನೆ ಆರೋಪ: ಭಕ್ತರು ಎಚ್ಚರ ವಹಿಸುವಂತೆ ಮನವಿ